ಮೀರತ್(ಉತ್ತರಪ್ರದೇಶ): ಚರಂಡಿ ಮೂಲಕ ಹತ್ತು ಅಡಿ ಉದ್ದದ ಸುರಂಗ ಕೊರೆದು ಚಿನ್ನದ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿರುವ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಕರ್ನಾಟಕದ ನರಸಾಪುರದಲ್ಲಿ ಆರಂಭವಾಗಲಿದೆ ಹೊಂಡಾ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ
ಮಂಗಳವಾರ ಬೆಳಗ್ಗೆ ಜ್ಯುವೆಲ್ಲರಿ ಶೋರೂಂನ ಮಾಲೀಕರು ಬಾಗಿಲು ತೆರೆದ ನಂತರ ಚರಂಡಿ ಮೂಲಕ ಶೋರೂಂವರೆಗೆ ಸುರಂಗ ತೋಡಿರುವುದನ್ನು ಗಮನಿಸಿದ್ದರು. ಅಷ್ಟೇ ಅಲ್ಲ ಶೋರೂಂನಲ್ಲಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕೂಡಾ ಕಳವು ಮಾಡಲಾಗಿದೆ ಎಂಬುದು ಮನವರಿಕೆಯಾಗಿತ್ತು.
ಚರಂಡಿಯ ಗಡಿಯಲ್ಲಿ ದುರ್ಬಲಗೊಂಡಿದ್ದ ಇಟ್ಟಿಗೆ ಮತ್ತು ಮಣ್ಣನ್ನು ಅಗೆದು ಕಳ್ಳರು ಚಿನ್ನದ ಶೋರೂಂನೊಳಗೆ ಪ್ರವೇಶಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಲಕ್ಷಾಂತರ ರೂಪಾಯಿ ಚಿನ್ನಾಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದು, ಅಂದಾಜು ಎಷ್ಟು ಮೌಲ್ಯದ ಚಿನ್ನಾಭರಣ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆ ಪ್ರಕರಣದ ಸುದ್ದಿ ಹರಡುತ್ತಿದ್ದಂತೆಯೇ ಮೀರತ್ ನ ಬುಲ್ಲಿಯನ್ ಟ್ರೇಡರ್ಸ್ ಅಸೋಸಿಯೇಶನ್ ಸದಸ್ಯರು ಶೋರೂಂಗೆ ಭೇಟಿ ನೀಡಿ, ನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಇದು ಮೀರತ್ ನಗರದಲ್ಲಿ ನಡೆದ ನಾಲ್ಕನೇ ಕಳ್ಳತನ ಪ್ರಕರಣವಾಗಿದೆ ಎಂದು ಟ್ರೇಡರ್ಸ್ ಅಸೋಸಿಯೇಶನ್ ಆರೋಪಿಸಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಶೋರೂಂನೊಳಗೆ ಪ್ರವೇಶಿಸಲು ಪ್ರತಿಭಟನಾಕಾರರು ತಡೆಯೊಡ್ಡಿ, ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.