Advertisement

ಯುಟ್ಯೂಬ್‌ ನೋಡಿ ಚಿನ್ನಾಭರಣ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ಕಳ್ಳ

09:47 PM Mar 14, 2021 | Team Udayavani |

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಹೊಂದಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಯುಟ್ಯೂಬ್‌ ನೋಡಿ ಜ್ಯೂವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಿ ಇದೀಗ ಮಲ್ಲೇಶ್ವರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಮಾಗಡಿ ರಸ್ತೆಯ ನಿವಾಸಿ ಸಂತೋಷ್‌ ಕುಮಾರ್‌ (23) ಬಂಧಿತ. ಆತನಿಂದ 4.76 ಲಕ್ಷ ರೂ. ಮೌಲ್ಯದ 92 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ಬಂಧನದಿಂದ ನಗರದ 2 ಚಿನ್ನದ ಮಳಿಗೆಗಳಲ್ಲಿ ನಡೆದಿದ್ದ ಚಿನ್ನಾಭರಣ ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಯು ಫೈನಾನ್ಸ್‌ ಕಂಪನಿಯಲ್ಲಿ ಫೈನಾನ್ಸಿಯಲ್‌ ಅನಾಲಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಬೇಗನೇ ಶ್ರೀಮಂತನಾಗಲು ಲಕ್ಷಾಂತರ ರೂ. ಅನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾನೆ. ಆದರೆ, ಷೇರಿನಲ್ಲಿ ನಷ್ಟ ಉಂಟಾಗಿತ್ತು. ಇತ್ತ ಮನೆಯ ಜವಾಬ್ದಾರಿಯನ್ನು ತಾನೇ ನಿಭಾಯಿಸಬೇಕಿರುವುದರಿಂದ ಕಂಪನಿಯಲ್ಲಿ ಸಿಗುತ್ತಿದ್ದ ವೇತನ ಖರ್ಚಿಗೆ ಸಾಲುತ್ತಿರಲಿಲ್ಲ. ಆಗ ಆರೋಪಿ ಸಂತೋಷ್‌ ಕಳ್ಳತನ ಮಾಡಲು ಸಿದ್ದತೆ ನಡೆಸಿದ್ದ. ಅದಕ್ಕಾಗಿ ಯುಟ್ಯೂಬ್‌ನಲ್ಲಿ ಕಳ್ಳತನ ಮಾಡುವುದನ್ನು ಪರಿಶೀಲಿಸಿದ್ದ. ಚಿನ್ನಾಭರಣಗಳ ಮಳಿಗೆಗಳಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಚಿನ್ನ ಕದಿಯುವುದನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಅದೇ ಮಾದರಿಯಲ್ಲಿ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಕದಿಯಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ :ಸಿದ್ದರಾಮಯ್ಯ ಸದನದಲ್ಲಿ ಸಿಡಿ ಬಗ್ಗೆ ಪ್ರಸ್ತಾಪಿಸಿದರೆ ಸ್ವಾಗತ: ಸಿಎಂ

ಬ್ರೇಸ್‌ಲೆಟ್‌ ಲಪಟಾಯಿಸಿದ:
ಫೆ.21ರಂದು ಸಂಜೆ ಸಂಜೆ 7ಗಂಟೆಗೆ ಮಲ್ಲೇಶ್ವರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಸಂತೋಷ್‌, ಅಲ್ಲಿನ ಸಿಬ್ಬಂದಿ ಸೈಯ್ಯದ್‌ ಸೈಫ್‌ವುದ್ದೀನ್‌ ಅವರಿಗೆ ಬ್ರೇಸ್‌ಲೆಟ್‌ ತೋರಿಸುವಂತೆ ಸೂಚಿಸಿದ್ದ. ಅದರಂತೆ ಸಿಬ್ಬಂದಿ ಬ್ರಾಸ್‌ಲೇಟ್‌ ತೋರಿಸಿ, ಪಕ್ಕದ ಕೌಂಟರ್‌ನಲ್ಲಿದ್ದ ಬೇರೆ ಗ್ರಾಹಕರ ಬಳಿ ಹೋಗಿದ್ದರು. ಕೆಲ ಸಮಯದ ಬಳಿಕ ಸಿಬ್ಬಂದಿ ಇತ್ತ ಬಂದಾಗ ಸಂತೋಷ್‌ 42.99 ಗ್ರಾಂ ಬ್ರಾಸ್‌ಲೇಟ್‌ನೊಂದಿಗೆ ಪರಾರಿಯಾಗಿದ್ದ. ಸೈಯ್ಯದ್‌ ಈ ಕುರಿತು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರ ಪೊಲೀಸರು ಚಿನ್ನಾಭರಣ ಮಳಿಗೆಯಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಯ ಸುಳಿವು ಪತ್ತೆಯಾಗಿತ್ತು. ಆದರೆ, ಆರೋಪಿ ಸಂತೋಷ್‌ ಮಳಿಗೆಯೊಳಗೆ ಬಂದಾಗ ಮಂಕಿಕ್ಯಾಪ್‌, ಕನ್ನಡಕ, ಮಾಸ್ಕ್ ಧರಿಸಿದ್ದರಿಂದ ಮುಖ ಚಹರೆ ಕಂಡು ಬಂದಿರಲಿಲ್ಲ ಎಂದು ಪೊಲೀಸರು ಹೇಳಿದರು.

Advertisement

ಸಿಕ್ಕಿಬಿದ್ದಿದ್ದು ಹೇಗೆ ?
ಮಾ.11ರಂದು ಮಾರ್ಗೋಸಾ ರಸ್ತೆಯಲ್ಲಿರುವ ಪ್ರತಿಷ್ಠಿತ ಜುವೆಲ್ಲರ್ ಬಳಿ ಆರೋಪಿ ಸಂತೋಷ್‌ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ. ಅನುಮಾನದ ಮೇರೆಗೆ ಗಸ್ತಿನಲ್ಲಿದ್ದ ಮಲ್ಲೇಶ್ವರ ಪೊಲೀಸರು ಈತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ ಆರಂಭದಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ. ಬಳಿಕ ಚಿನ್ನಾಭರಣ ಮಳಿಗೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳ ಧರಿಸಿದ್ದ ಮಾದರಿಯ ಮಂಕಿ ಕ್ಯಾಪ್‌, ಕನ್ನಡಕ, ಮಾಸ್ಕ್ ಈತನಿಗೆ ತೊಡಿಸಿದ ಪೊಲೀಸರು ಹೋಲಿಕೆ ಮಾಡಿ ನೋಡಿದಾಗ ಈತನನ್ನೇ ಹೋಲುತ್ತಿತ್ತು. ಬಳಿಕ ವಿಚಾರಣೆ ತೀವ್ರಗೊಳಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಪೊಲೀಸರಿಗೆ ತನ್ನ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಚಿನ್ನಾಭರಣ ಮಳಿಗೆಯೊಳಗೆ ತೆರಳುವ ವೇಳೆ ಮಂಕಿಕ್ಯಾಪ್‌, ಮಾಸ್ಕ್ ಜತೆಗೆ ಮೇಲಾºದಲ್ಲಿ ಬೇರೆ ಬಟ್ಟೆಗಳನ್ನು ಧರಿಸುತ್ತಿದ್ದೆ. ಹೊರ ಬಂದ ಕೂಡಲೇ ಅವುಗಳನ್ನು ತೆಗೆಯುತ್ತಿದ್ದೆ. ಹೀಗಾಗಿ ತನ್ನ ಮೇಲೆ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಕದ್ದ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣವನ್ನು ಮತ್ತೆ ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದೆ ಎಂದು ಆರೋಪಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next