ಉತ್ತರಾಖಂಡ್:ಕಳೆದ ತಿಂಗಳು ಜನರಲ್ ಸ್ಟೋರ್ ವೊಂದರಲ್ಲಿ ಇದ್ದ ವಸ್ತುಗಳನ್ನೆಲ್ಲಾ ಕಳ್ಳ ದೋಚಿಕೊಂಡು ಹೋಗಿದ್ದ. ಆದರೆ ಕಳ್ಳತನ ಮಾಡಿ ವಸ್ತುಗಳನ್ನು ದೋಚಿಕೊಂಡು ಹೋಗುವ ವೇಳೆ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಕಳ್ಳ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಡೆಹ್ರಾಡೂನ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಜೂನ್ ನಲ್ಲಿ ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ಅನಿಲ್ ಸೇಥಿ ಎಂಬವರ ಜನರಲ್ ಸ್ಟೋರ್ ನ ಮೇಲ್ಛಾವಣಿ ಮುರಿದು ಆರೋಪಿ ವಸ್ತುಗಳನ್ನೆಲ್ಲಾ ಕದ್ದೊಯ್ದಿದ್ದ. ಕಳ್ಳನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಆತನ ಗುರುತು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಏತನ್ಮಧ್ಯೆ ಕಳ್ಳನ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು ವಿಫಲವಾಗಿದ್ದರು. ಬಳಿಕ ಸೇಥಿ ಜನರಲ್ ಸ್ಟೋರ್ ನ ಮೇಲ್ಛಾವಣಿಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದರು. ಆಗ ಅಲ್ಲೊಂದು ಆಧಾರ್ ಕಾರ್ಡ್ ಸಿಕ್ಕಿತ್ತು. ಅದರಲ್ಲಿ ನೀರಜ್ ಎಂಬ ಯುವಕನ ವಿಳಾಸ ಪೊಲೀಸರ ಕೈ ಸೇರಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನಮೂದಿಸಿದ ವಿಳಾಸದ ಸ್ಥಳಕ್ಕೆ ದಾಳಿ ಭೇಟಿ ನೀಡಿದ್ದರು. ಆದರೆ ಆತ ಆ ವಿಳಾಸದಲ್ಲಿ ವಾಸವಾಗಿಲ್ಲ ಎಂಬುದಾಗಿ ಸ್ಥಳೀಯರು ತಿಳಿಸಿದ್ದರು. ಆತ ಮತ್ತೊಂದು ವಿಳಾಸದಲ್ಲಿ ವಾಸವಾಗಿರುವುದನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನೀರಜ್ ನನ್ನು ತನಿಖೆಗೊಳಪಡಿಸಿದಾಗ ಜನರಲ್ ಸ್ಟೋರ್ ಕಳವು ವಿಚಾರದ ಬಗ್ಗೆ ತಪ್ಪೊಪ್ಪಿಕೊಂಡಿದ್ದ. 2016ರಲ್ಲಿಯೂ 65ಸಾವಿರ ರೂಪಾಯಿ ಬೆಲೆಬಾಳುವ ಮೊಬೈಲ್ ಅನ್ನು ಕದ್ದು ಜೈಲು ಸೇರಿದ್ದ ಎಂದು ಸಬ್ ಇನ್ಸ್ ಪೆಕ್ಟರ್ ಲೋಕೇಂದ್ರ ಬಹುಗುಣಾ ವಿವರಿಸಿದ್ದಾರೆ.
ವರ್ಷದ ಹಿಂದೆ ತನ್ನ ಪೋಷಕರು ಸಾವನ್ನಪ್ಪಿದ್ದು, ತನಗೆ ಯಾವುದೇ ಉದ್ಯೋಗ ಸಿಕ್ಕಿಲ್ಲ, ಹೀಗಾಗಿ ಕಳ್ಳತನ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಬಂಧಿತ ನೀರಜ್ ನನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.