ಬೆಂಗಳೂರು: ತಾನೊಬ್ಬ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯನೆಂದು ಹೇಳಿಕೊಂಡು ಚಿನ್ನಾಭರಣ ಅಂಗಡಿಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ರಾಹುಲ್(43) ಬಂಧಿತ. ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದೆಹಲಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೋಜಿನ ಜೀವನಕ್ಕಾಗಿ ಸಾಲ ಮಾಡಿಕೊಂಡಿದ್ದಾನೆ. ಅದನ್ನು ತೀರಿಸಲು ದೆಹಲಿಯಿಂದ ವಿಮಾನದಲ್ಲಿ ಬಂದು ಚಿನ್ನಾಭರಣಗಳ ಮಳಿಗೆಗೆ ಆಗಮಿಸಿ ವೈದ್ಯ ಹಾಗೂ ಇತರೆ ಪ್ರತಿಷ್ಠಿತ ಹುದ್ದೆಗಳ ಹೆಸರನ್ನು ಬಳಸಿಕೊಂಡು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಇತ್ತೀಚೆಗೆ ಜಯನಗರದ 8ನೇ ಬ್ಲಾಕ್ ನಲ್ಲಿರುವ ಚಿನ್ನದಂಗಡಿಗೆ ಹೋಗಿದ್ದ ಆರೋಪಿ, ತಾನು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ಎಂದು ಹೇಳಿಕೊಂಡು ಮೊದಲಿಗೆ ಬೆಳ್ಳಿನಾಣ್ಯ ಖರೀದಿಸಿದ್ದಾನೆ.
ನಂತರ ತನ್ನ ತಂಗಿ ಮದುವೆಗೆ ಚಿನ್ನಾಭರಣ ಬೇಕು ಎಂದು ಹೇಳಿ 32 ಗ್ರಾಂ ಚಿನ್ನದ ನೆಕ್ಲೆಸ್, 75 ಗ್ರಾಂ ಲಾಂಗ್ ಚೈನ್, 22 ಗ್ರಾಂ ಬ್ರಾಸ್ಲೆಟ್ ತೆಗೆದುಕೊಂಡಿದ್ದಾನೆ. ಬಳಿಕ ತನ್ನ ಸಂಬಂಧಿ ಹಣ ತರುತ್ತಾರೆಂದು ನಂಬಿಸಿದ ಆರೋಪಿ ಸುಮಾರು 2 ಗಂಟೆ ಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದ. ಆಗ ತಾನು ಕದಿಯಬಹುದಾದ ವಸ್ತುಗಳ ಬಗ್ಗೆ ಸ್ಕೆಚ್ ಹಾಕಿದ್ದಾನೆ. ನಂತರ ಬೆಳ್ಳಿಯ ಫೋಟೋ ಫ್ರೇಮ್ ಬೇಕು ಎಂದು ಕೇಳಿದ್ದ. ಅಂಗಡಿಯವರು ಫ್ರೇಮ್ ತರಲು ಒಳಗೆ ಹೋದಾಗ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದನು.
ಆರೋಪಿಯ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿ, ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.