ಹೈದರಾಬಾದ್: ವಧುವಿನ ಕಡೆಯವರು ವರದಕ್ಷಿಣೆಯಾಗಿ ಹಳೆಯ ಪೀಠೋಪಕರಣ ನೀಡಿದ್ದಾರೆ ಎಂದು ಆರೋಪಿಸಿ ವರ ಮದುವೆಯನ್ನೇ ನಿರಾಕರಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ವರದಕ್ಷಿಣೆ ಕ್ರಮ ಅಪರಾಧವಾಗಿದ್ದು ಹೈದರಾಬಾದ್ ನ ಕುಟುಂಬವೊಂದು ತಮಗೆ ವರದಕ್ಷಿಣೆಯಾಗಿ ನೀಡಿರುವ ಪೀಠೋಪಕರಣಗಳು ಹಳೆಯದಾಗಿದೆ ಎಂದು ಸಬೂಬು ಹೇಳಿ ಮದುವೆಯ ದಿನ ವರನ ಕಡೆಯವರು ಮಂಟಪಕ್ಕೆ ಬಾರದೆ ಮದುವೆಯನ್ನು ನಿರಾಕರಿಸಿದ್ದಾರೆ.
ಘಟನೆ ಕುರಿತು ವಧುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರಲ್ಲಿ ವರನ ಕಡೆಯವರು ನಮ್ಮಿಂದ ವರದಕ್ಷಿಣೆಯಾಗಿ ಕೆಲವೊಂದು ವಸ್ತುಗಳನ್ನು ಕೊಡಲು ಹೇಳಿದ್ದರು ಅದರಂತೆ ನಾವು ಅವರಿಗೆ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದೇವೆ ಆದರೆ ಮದುವೆ ದಿನ ವರನ ಕಡೆಯವರು ಮಂಟಪಕ್ಕೆ ಬಾರದಿರುವುದನ್ನು ಕಂಡು ವಧುವಿನ ತಂದೆ ವರನ ಮನೆಗೆ ಹೋಗಿ ವಿಚಾರಿಸಿದಾಗ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಅಲ್ಲದೆ ನೀವು ವರದಕ್ಷಿಣೆ ರೂಪದಲ್ಲಿ ಕೊಟ್ಟಿರುವ ವಸ್ತುಗಳು ಹಳೆಯ ವಸ್ತುಗಳಾಗಿವೆ ಎಂದು ವರನ ತಂದೆ ಹೇಳಿದ್ದಾರೆ, ಅಷ್ಟು ಮಾತ್ರವಲ್ಲದೆ ಮದುವೆಗೆ ನಿರಾಕರಿಸಿದ್ದಾಗಿ ಹೇಳಿದ್ದಾರೆ.
ಇತ್ತ ವಧುವಿನ ಕಡೆಯವರು ಮದುವೆಗೆ ತಯಾರಿ ನಡೆಸಿದ್ದು ಊಟ, ಬೆಳಗಿನ ಉಪಹಾರ ಎಲ್ಲವನ್ನು ತಯಾರಿ ನಡೆಸಿದ್ದರು ಆದರೆ ವರನ ಮನೆಯವರ ಸಣ್ಣ ಮನಸ್ಥಿತಿಯಿಂದ ಮದುವೆ ಮುರಿಯುವ ಹಂತಕ್ಕೆ ಬಂದಿರುವುದು ಮಾತ್ರ ವಿಪರ್ಯಾಸ.
ಸದ್ಯ ವಧುವಿನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ರೀಲ್ ಅಲ್ಲ ರಿಯಲ್: ಸಾಗರದಾಳದಲ್ಲಿ ಪತ್ತೆಯಾದ ಟೈಟಾನಿಕ್ ಅವಶೇಷ-ಮೊದಲ ಬಾರಿ ವಿಡಿಯೋ ಬಹಿರಂಗ