ರಾಮನಗರ: ತಾಲೂಕು ಆಡಳಿತ ನೀಡಿರುವ ಆಶ್ರಯ ಯೋಜನೆಯಡಿಯ ನಿವೇಶನ ಹಕ್ಕು ಪತ್ರ 1992ನೇ ಇಸವಿಯಿಂದ ಕೈಲಿದೆ. ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು ಎಂಬ ಹಂಬಲವಿದೆ. ಆದರೆ ಸರ್ಕಾರ ನೀಡಿರುವ ನಿವೇಶನ ಎಲ್ಲಿದೆ ಅಂತಲೇ ಗೊತ್ತಿಲ್ಲ. ನಿವೇಶನ ತೋರಿಸಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತು ಬಿಟ್ಟಿದ್ದಾರೆ!
ಹೀಗೆ ಅಲವತ್ತುಕೊಂಡಿದ್ದು ತಾಲೂಕಿನ ಬಿಡದಿ ಪುರಸಭೆ ವ್ಯಾಪ್ತಿಯ ಬಾನಂದೂರು ಗ್ರಾಮದ 23 ಕುಟುಂಬಗಳು. ಸುದ್ದಿಗಾರರ ಬಳಿ ತಮ್ಮ ನೋವು ತೋಡಿಕೊಂಡ ಈ ‘ಫಲಾನುಭವಿಗಳು’ ಬಾನಂದೂರು ಗ್ರಾಮದ ಸರ್ವೇ ಸಂಖ್ಯೆ 111ರಲ್ಲಿ 1991-92ನೇ ಸಾಲಿನಲ್ಲಿ ಬಾನಂದೂರಿನಲ್ಲಿ ವಾಸ ಮಾಡುತ್ತಿದ್ದ ನಿವೇಶನ ರಹಿತ ಬಡವರನ್ನು ಗುರುತಿಸಿ ತಾಲೂಕು ಆಡಳಿತ ಹಕ್ಕುಪತ್ರ ನೀಡಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕಾಳಜಿಯನ್ನು ಅರಿತ ಅಂದಿನ ಶಾಸಕರಾಗಿದ್ದ ಸಿ.ಎಂ.ಲಿಂಗಪ್ಪ ಅವರು ಈ ಬಡ ಕುಟುಂಬಗಳನ್ನು ಆಯ್ಕೆ ಮಾಡಿ ಸದರಿ ಸರ್ವೇ ಸಂಖ್ಯೆ ಭೂಮಿಯಲ್ಲಿ ತಲಾ 30×40 ನಿವೇಶನಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದರು. ಹೀಗೆ ವಿತರಣೆಯಾದ ಹಕ್ಕುಪತ್ರಗಳಲ್ಲಿ ತಹಸೀಲ್ದಾರರ ಸಹಿ ಮತ್ತು ಅಧಿಕೃತ ಮುದ್ರೆ ಇದೆ. ಆದರೆ ಅಧಿಕಾರಿಗಳು ಈ ಕುಟುಂಬಗಳಿಗೆ ನಿವೇಶನಗಳನ್ನು ಗುರುತಿಸಿ ಕೊಡಲಿಲ್ಲ ಎಂದು ಈ ಕುಟುಂಬಗಳು ಆಕ್ಷೇಪಿಸಿವೆ.
ಈ ವೇಳೆ ಫಲಾನುಭವಿ ಒಬ್ಬರಾದ ಕ್ಯಾತಯ್ಯ ಮಾತನಾಡಿ, ತಮ್ಮ ಭೂಮಿ ತೋರಿಸಿ ಎಂದು ಅನೇಕ ಬಾರಿ ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡರು ಉಪಯೋಗವಾಗಲಿಲ್ಲ . ಹಿಂದೆ ಇದ್ದ ಗ್ರಾಮಪಂಚಾಯ್ತಿ ಅಧಿಕಾರಿ, ರೆವಿನ್ಯು ಇನ್ಸ್‌ಪೆಕ್ಟರ್, ತಹಸೀಲ್ದಾರರು, ಉಪವಿಭಾಗಧಿಕಾರಿಗಳು ಹೀಗೆ ಎಲ್ಲರನ್ನು ಭೇಟಿ ಮಾಡಿದರೂ ಉಪಯೋಗವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಮ್ಮಲಮ್ಮ ಎಂಬ ಮಹಿಳೆ ಮಾತನಾಡಿ, ಕುಟುಂಬ ದೊಡ್ಡದಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇದೆ. ಹಕ್ಕುಪತ್ರ ಕೊಟ್ಟರೆ ವಿನಹ ಸೈಟು ಎಲ್ಲಿದೆ ಅಂತ ತೋರಿಸಿಕೊ ಟ್ಟಿಲ್ಲ. ನಿವೇಶನ ಗುರುತು ಮಾಡಿ ಕೊಟ್ಟರೆ ಹೇಗೋ ಒಂದು ಸೂರು ಮಾಡಿಕೊಳ್ತೀವಿ. ಈಗ ಸೂರು ಇಲ್ಲ, ನಿವೇಶನವೂ ಇಲ್ಲ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾನಂದೂರು ಗ್ರಾಮ ಇದೀಗ ಬಿಡದಿ ಪುರಸಭೆಯ ವ್ಯಾಪ್ತಿಗೆ ಒಳಪಟ್ಟಿದೆ. ಪುರಸಭಾ ಸದಸ್ಯ ಶಿವಕುಮಾರ್ ಸಹ ಈ ಕುಟುಂಬಗಳಿಗೆ ದನಿಯಾಗಿದ್ದಾರೆ. ಸರ್ವೇ ಸಂಖ್ಯೆ 111 ಗೋಮಾಳ ಪ್ರದೇಶ. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಕಬಳಿಕೆ ಆಗುತ್ತಿದೆ. ಇಡೀ ಭೂಮಿಯನ್ನು ಅನ್ಯ ಕಾರ್ಯಗಳಿಗೆ ಮಂಜೂರು ಮಾಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ದೂರಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಹಕ್ಕುಪತ್ರ ಇರುವವರಿಗೆ ಭೂಮಿ ಗುರುತಿಸಿ ಕೊಡಬೇಕಾಗಿದೆ ಎಂದು ಒತ್ತಾಯಿಸಿದರು.