Advertisement

ಕೊಠಡಿಯಲ್ಲಿ ಕೂಡಿ ಕತ್ತು ಹಿಸುಕಿದರು!

11:29 AM Nov 14, 2017 | |

ಬೆಂಗಳೂರು: ನಗರದ ಸ್ವತ್ಛತೆ ಕಾಪಾಡುವ ಕಾರ್ಯದಲ್ಲಿ ನಿರತರಾಗಿರುವ ಗುತ್ತಿಗೆ ಪೌರಕಾರ್ಮಿಕರ ನರಕಯಾತನೆ ದಿನೇ ದಿನೆ ಹೆಚ್ಚುತ್ತಿದೆ. ಗುತ್ತಿಗೆದಾರರು ನೀಡುತ್ತಿದ್ದ ಕಿರುಕುಳ ಈಗ ತಾರಕಕ್ಕೇರಿದ್ದು, ಕಾರ್ಮಿಕರನ್ನು ಕೋಣೆಯೊಳಗೆ ಕೂಡಿಹಾಕಿ ಹಲ್ಲೆ ನಡೆಸುವ ಹಂತ ತಲುಪಿದೆ ಎಂದರೆ ನೀವು ನಂಬಲೇಬೇಕು.

Advertisement

ಪೌರಕಾರ್ಮಿಕರ ಮೇಲೆ ಗುತ್ತಿಗೆದಾರರಿಂದ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ತಡೆದು ಸರ್ಕಾರದ ಆದೇಶದಂತೆ ಗುತ್ತಿಗೆ ಪೌರಕಾರ್ಮಿಕರಿಗೆ ನೀಡಬೇಕಿರುವ ಕನಿಷ್ಠ ವೇತನವನ್ನು ನ್ಯಾಯಯುತವಾಗಿ ನೀಡುವಂತೆ ಗುತ್ತಿಗೆ ಪೌರಕಾರ್ಮಿಕರು ಮೇಯರ್‌ ಸಂಪತ್‌ರಾಜ್‌ ಅವರನ್ನು ಕೋರಿದ್ದಾರೆ.

ಸೋಮವಾರ ಪೂರ್ವ ವಲಯದ ಕಚೇರಿಯಲ್ಲಿ ಮೇಯರ್‌ ಸಂಪತ್‌ರಾಜ್‌ರನ್ನು ಭೇಟಿ ಮಾಡಿದ ಗುತ್ತಿಗೆ ಪೌರಕಾರ್ಮಿಕರ ಸಂಘಟನೆಯ ಮುಖಂಡರು, ದಾಸರಹಳ್ಳಿ ಹಾಗೂ ಕೆ.ಆರ್‌.ಪುರದಲ್ಲಿ ಮಹಿಳಾ ಗುತ್ತಿಗೆ ಪೌರಕಾರ್ಮಿಕರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ. ಈ ಕುರಿತು ಪಾಲಿಕೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿದೆ.

ಇದರ ನಡುವೆಯೂ ಕಳೆದ ಶುಕ್ರವಾರ ಬಾಣಸವಾಡಿಯಲ್ಲಿ ಮೂವರು ಮಹಿಳಾ ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿಹಾಕಿ ಥಳಿಸಲಾಗಿದೆ ಎಂದು ಆರೋಪಿಸಿದರು. ಹೀಗೆ ಥಳಿಸಿರುವುದು ಪಾಲಿಕೆ ಅಧಿಕಾರಿಯೊಬ್ಬರ ಮನೆಯ ಮಹಿಳೆಯರು ಎಂಬುದು ಅಚ್ಚರಿಯ ಸಂಗತಿ.

ಅಧಿಕಾರಿಯ ಮನೆಯವರು ಹಲ್ಲೆ ನಡೆಸಿದ್ದರ ಕುರಿತು ಮಾಹಿತಿ ನೀಡಿದ ಪೌರಕಾರ್ಮಿಕರಾಗಿರುವ ದೇವಮ್ಮ, “ಗುತ್ತಿಗೆದಾರರು ಕಳೆದ ಒಂದು ವರ್ಷದಿಂದ ಪಾಲಿಕೆ ಅಧಿಕಾರಿಗಳ ಮನೆ ಕೆಲಸಕ್ಕೆ ಮಹಿಳಾ ಪೌರಕಾರ್ಮಿಕರನ್ನು ನಿಯೋಜಿಸುತ್ತಿದ್ದಾರೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ವಿವಿಧ ವಾರ್ಡ್‌ಗಳಲ್ಲಿ ಸ್ವತ್ಛತಾ ಕಾರ್ಯದಲ್ಲಿ ತೊಡಗಬೇಕು. ನಂತರ ಅಧಿಕಾರಿಗಳ ಮನೆಯಲ್ಲಿ ಪಾತ್ರೆ ಹಾಗೂ ಬಟ್ಟೆ ತೊಳೆಯಬೇಕು,’ ಎಂದು ಆರೋಪಿಸಿದರು.

Advertisement

“ಕಳೆದ ಶುಕ್ರವಾರ ಅಧಿಕಾರಿಯೊಬ್ಬರ ಮನೆಯಲ್ಲಿನ ಸ್ಯಾನಿಟರಿ ನ್ಯಾಪ್‌ಕಿನ್‌, ಬಟ್ಟೆಗಳನ್ನು ತೊಳೆಯಲು ನಿರಾಕರಿಸಿದ್ದಕ್ಕೆ ಮನೆಯ ಮಹಿಳೆಯರು ಮೂವರು ಪೌರಕಾರ್ಮಿಕರನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ ಹೊಡೆದಿದ್ದಾರೆ. ಇಷ್ಟಾದರೂ ಗುತ್ತಿಗೆದಾರರು ಮತ್ತೆ ಮನೆ ಕೆಲಸ ಹೋಗುವಂತೆ ತಾಕೀತು ಮಾಡುತ್ತಿದ್ದಾರೆ.

ಹೋಗದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ,’ ಎಂದು ನೋವು ತೋಡಿಕೊಂಡರು. ಹಲ್ಲೆಗೊಳಗಾದ ಯಲ್ಲಮ್ಮ ಮಾತನಾಡಿ, “ಕಳೆದ ಒಂದು ವರ್ಷದಿಂದ ಅಧಿಕಾರಿಗಳ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದೇವೆ. ಮನೆ ಕೆಲಸಕ್ಕೆ ಹೋಗಲು ನಿರಾಕರಿಸಿದರೆ ಗುತ್ತಿಗೆದಾರರು ಕೆಲಸದಿಂದ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿ ಹೊಡೆಯುತ್ತಾರೆ.

ಕೆಲಸಕ್ಕಾಗಿ ಯಾದಗಿರಿಯಿಂದ ಬಂದಿದ್ದು, ಅನಿವಾರ್ಯವಾಗಿ ಅವರು ಹೇಳಿದಂತೆ ಮಾಡಬೇಕಾಗಿದೆ. ಶುಕ್ರವಾರ ಅಧಿಕಾರಿಗಳ ಮನೆಯ ಮಹಿಳೆಯರ ಸ್ಯಾನಿಟರಿ ಬಟ್ಟೆ ತೊಳೆಯುವುದಿಲ್ಲ ಎಂದಿದ್ದಕ್ಕೆ ಮೂವರ ಮೇಲೆ ಹಲ್ಲೆ ಮಾಡಿ, ಕತ್ತು ಹಿಸುಕಿದ್ದರಿಂದ ನಾಗಮ್ಮ ಎಂಬುವರು ಅಸ್ವಸ್ಥರಾಗಿದ್ದಾರೆ,’ ಎಂದು ದೂರಿದರು. 

ಬಾಕಿ ಹಣ ಗುತ್ತಿಗೆದಾರರ ಪಾಲು
ಬಿಬಿಎಂಪಿಯ ಕಸದ ಗುತ್ತಿಗೆದಾರರು ಗುತ್ತಿಗೆ ಪೌರಕಾರ್ಮಿಕರ ಬ್ಯಾಂಕ್‌ ಪಾಸ್‌ ಬುಕ್‌ ಹಾಗೂ ಎಟಿಎಂಗಳನ್ನು ಕಿತ್ತುಕೊಂಡು ಗುತ್ತಿಗೆ ಪೌರಕಾರ್ಮಿಕರಿಗೆ ಶೋಷಣೆ ನಡೆಸುತ್ತಿದ್ದು, ವೇತನದಲ್ಲಿ ಅರ್ಧದಷ್ಟು ಹಣವನ್ನು ಗುತ್ತಿಗೆದಾರರು ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಇತ್ತೀಚೆಗೆ ಸರ್ಕಾರದಿಂದ ಬಂದ ಕನಿಷ್ಠ ವೇತನದ ಬಾಕಿ ಹಣವನ್ನು ಕಾರ್ಮಿಕರಿಗೆ ನೀಡದೆ ವಂಚಿಸಿದ್ದಾರೆ ಎಂದು ಸಂಘಟನೆಯ ಗಂಗಮ್ಮ ಎಂಬುವವರು ದೂರಿದರು. 

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಗುತ್ತಿಗೆ ಆಧಾರದ ಮೇಲೆ 30 ಸಾವಿರ ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಗುತ್ತಿಗೆ ಪೌರಕಾರ್ಮಿಕರಿಗೆ 17 ಸಾವಿರ ರೂ. ಕನಿಷ್ಠ ವೇತನ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡಬೇಕು ಹಾಗೂ ಆರೋಗ್ಯ ಭತ್ಯೆ, ಭವಿಷ್ಯ ನಿಧಿಯನ್ನು ಪಾವತಿ ಮಾಡಬೇಕೆಂದು ಆದೇಶ ನೀಡಿದ್ದರೂ ಗುತ್ತಿಗೆದಾರರು ಮಾತ್ರ ಯಾವುದನ್ನೂ ಪಾವತಿಸುತ್ತಿಲ್ಲ ಎಂದು ದೂರಿದರು. 

ಕಾರ್ಮಿಕರಿಗೆ ನೀಡುವುದು 7 ಸಾವಿರ ರೂ. ಮಾತ್ರ
ನಗರದ ದೊಡ್ಡನೆಕುಂದಿ ವಾರ್ಡ್‌ ಸೇರಿದಂತೆ ನಗರದ ಹಲವಾರು ವಾರ್ಡ್‌ಗಳಲ್ಲಿ ಗುತ್ತಿಗೆದಾರರು ಹಾಗೂ ಮೇಸ್ಟ್ರೀಗಳು ಕಾರ್ಮಿಕರ ಪಾಸ್‌ಬುಕ್‌ ಹಾಗೂ ಎಟಿಎಂಗಳನ್ನು ಕಿತ್ತುಕೊಂಡಿದ್ದಾರೆ. ಸರ್ಕಾರದಿಂದ 17 ಸಾವಿರ ಬಂದರೂ ಗುತ್ತಿಗೆದಾರರು ಅದನ್ನು ಪಡೆದು ಕಾರ್ಮಿಕರಿಗೆ ಕೇವಲ 7 ಸಾವಿರ ಮಾತ್ರ ನೀಡುತ್ತಾರೆ. ಅದನ್ನು ಪ್ರಶ್ನಿಸಿದರೆ ಕಾರ್ಮಿಕರ ಮೇಲೆ ಹಲ್ಲೆ ಮಾಡುವುದು.

ಇಲ್ಲವೆ ಕೆಲಸದಿಂದ ತೆಗೆಯುವುದು ಮಾಡುತ್ತಿದ್ದು, ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿದ ಮೇಯರ್‌ ಸಂಪತ್‌ರಾಜ್‌ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಹಾಗೂ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಗುತ್ತಿಗೆ ಪೌರಕಾರ್ಮಿಕರ ಹತ್ತು ಆರೋಪಗಳು
-ಗುತ್ತಿಗೆದಾರರು ಪಾಲಿಕೆ ಅಧಿಕಾರಿಗಳ ಮನೆ ಕೆಲಸಕ್ಕೆ ನಿಯೋಜಿಸುತ್ತಾರೆ.
-ಮುಂಜಾನೆ ನಗರದ ಸ್ವತ್ಛತೆ, 10 ಗಂಟೆ ನಂತರ ಅಧಿಕಾರಿಗಳ ಮನೆಯಲ್ಲಿ ಜೀತ.
-ಸ್ಯಾನಿಟರಿ ಬಟ್ಟೆ ತೊಳೆಯಲು ನಿರಾಕರಿಸಿದ್ದಕ್ಕೆ ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ.
-ಹಲ್ಲೆ ನಡೆಸಿ ಕತ್ತು ಹಿಸುಕಿದ್ದರಿಂದ ನಾಗಮ್ಮ ಎಂಬ ಪೌರಕಾರ್ಮಿಕರು ಅಸ್ವಸ್ಥ.
-ಅಧಿಕಾರಿಗಳ ಮನೆಕೆಲಸಕ್ಕೆ ಹೋಗಲ್ಲ ಎಂದರೆ ಗುತ್ತಿಗೆದಾರರು ಹೊಡೆಯುತ್ತಾರೆ
-ಪೌರಕಾರ್ಮಿಕರ ಪಾಸ್‌ಬುಕ್‌, ಎಟಿಎಂ ಪಡೆದು ಕಾರ್ಮಿಕರಿಗೆ ವಂಚನೆ ಆರೋಪ.
-ಕಾರ್ಮಿಕರಿಗೆ ಬರುವ ವೇತನದಲ್ಲಿ ಅರ್ಧ ಹಣ ಗುತ್ತಿಗೆದಾರರ ಜೇಬಿಗೆ.
-ಸರ್ಕಾರದಿಂದ ಬಂದ ಕನಿಷ್ಠ ವೇತನದ ಬಾಕಿ ಹಣವನ್ನೂ ನೀಡದೆ ವಂಚನೆ.
-ಆರೋಗ್ಯ ಭತ್ಯೆ, ಭವಿಷ್ಯ ನಿಧಿಯನ್ನೂ ಗುತ್ತಿಗೆದಾರರು ಪಾವತಿಸುತ್ತಿಲ್ಲ.
-ಅಕ್ರಮ, ಅನ್ಯಾಯ ಪ್ರಶ್ನಿಸಿದರೆ ಹಲ್ಲೆ ನಡೆಸುತ್ತಾರೆ. ಕೆಲಸದಿಂದ ತೆಗೆದುಹಾಕುತ್ತಾರೆ.

ಗುತ್ತಿಗೆ ಪೌರಕಾರ್ಮಿಕರನ್ನು ಸ್ವತ್ಛತಾ ಕಾರ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕು. ಉಳಿದಂತೆ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲಿ ತಮ್ಮ ಮನೆ ಕೆಲಸಗಳಿಗೆ ಬಳಸಿಕೊಂಡರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಪೌರಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿ ಹಾಕಿ ತಳಿಸಿರುವ ಕುರಿತು ಕಾರ್ಮಿಕರು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ದೂರುಗಳು ಕೇಳಿ ಬಂದಿರುವ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಕಾರ್ಮಿಕರ ಪಾಸ್‌ಬುಕ್‌ ಹಾಗೂ ಎಟಿಎಂ ಕಿತ್ತುಕೊಂಡು ವಂಚಿಸುತ್ತಿರುವುದು ಬೆಳಕಿಗೆ ಬಂದರೆ ತಪ್ಪಿತಸ್ತ ಗುತ್ತಿಗೆದಾರರನ್ನು ನಿರ್ದಾಕ್ಷಿಣ್ಯವಾಗಿ ಕಪ್ಪುಪಟ್ಟಿಗೆ ಸೇರಿಸಲಾಗುವುದು. 
-ಆರ್‌.ಸಂಪತ್‌ಕುಮಾರ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next