ಮುಂಬಯಿಯ ಕಲಾ ಪ್ರಕಾಶ ಪ್ರತಿಷ್ಠಾನ ಏರ್ಪಡಿಸಿದ ನಾಲ್ಕು ದಿನಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪದ್ಮಾ ಕೆ. ಆರ್. ಆಚಾರ್ಯ ಸಾರಥ್ಯದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದ ಕಲಾವಿದೆಯರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ವಾಕ್ಚಾತುರ್ಯದ ಮೂಲಕ ಮುಂಬಯಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.
ಭಾಗವತರಾಗಿ ಕು| ಅಮೃತಾ ಅಡಿಗ, ಚೆಂಡೆಯಲ್ಲಿ ಕು| ಅಪೂರ್ವಾ ಸುರತ್ಕಲ್, ಮದ್ದಳೆಯಲ್ಲಿ, ಸತ್ಯನಾರಾಯಣ ಅಡಿಗ ಹಿಮ್ಮೇಳಕ್ಕೆ ಧ್ವನಿಯಾದರು. ಪ್ರತಿದಿನವೂ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿದ ಸಭಾಗೃಹ ಕಲಾವಿದೆಯರಿಗೆ ಸ್ಫೂರ್ತಿದಾಯಕವಾಗಿತ್ತು.
ಮೊದಲನೆಯ ದಿನ ಸಾಂತಾಕ್ರೂಸ್ ಪೂರ್ವದಲ್ಲಿರುವ ಪೇಜಾವರ ಮಠದಲ್ಲಿ ಶ್ರೀಕೃಷ್ಣ ರಾಯಭಾರ ಕಥಾಭಾಗದ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಶ್ರೀಕೃಷ್ಣನಾಗಿ, ಪದ್ಮಾ ಆಚಾರ್ಯ, ವಿದುರನಾಗಿ ವೀಣಾ ತಂತ್ರಿ, ಕೌರವನಾಗಿ ಸುಮಂಗಲಾ ರತ್ನಾಕರ್, ದ್ರೌಪದಿಯಾಗಿ ಆಶಾಲತಾ ಕಲ್ಲೂ ರಾಯ ಕುಂತಿಯಾಗಿ ಅಶ್ವಿನಿ ನಿಡ್ವಣ್ಣಾಯ ಮಿಂಚಿದರು.
ಎರಡನೆಯ ದಿನ ಅಸಲ್ಫಾದ ಗೀತಾಂಬಿಕಾ ದೇವಾಲಯದಲ್ಲಿ ಕರ್ಣ ಪರ್ವ ನಡೆಯಿತು. ಕರ್ಣನಾಗಿ ಪದ್ಮಾ ಆಚಾರ್ಯ, ಅರ್ಜುನನಾಗಿ, ವೀಣಾ ತಂತ್ರಿ, ಶಲ್ಯನಾಗಿ ಸುಮಂಗಲಾ ರತ್ನಾಕರ್, ಶ್ರೀಕೃಷ್ಣ ನಾಗಿ ಅಶ್ವಿನಿ ನಿಡ್ವಣ್ಣಾಯ, ಸರ್ಪಾಸ್ತ್ರ ಮತ್ತು ವೃದ್ಧ ವಿಪ್ರನಾಗಿ ಆಶಾಲತಾ ಕಲ್ಲೂರಾಯ ಮೆಚ್ಚುಗೆ ಪಡೆದರು.
ಮೂರನೇ ದಿನ ಮೀರಾ- ಡಹಾಣು ಬಂಟ್ಸ್ ಭಾಯಂದರ್ ವಲಯ ಮೀರಾ ರೋಡಿನ ಪಲಿಮಾರು ಮಠದಲ್ಲಿ ಸಮರ ಸೌಗಂಧಿಕಾ ತಾಳಮದ್ದಳೆ ಆಯೋಜಿಸಿತು. ಭೀಮಸೇನನಾಗಿ ಪದ್ಮಾ ಆಚಾರ್ಯ, ದ್ರೌಪದಿಯಾಗಿ ಸುಮಂಗಲಾ ರತ್ನಾಕರ್, ಹನುಮಂತನಾಗಿ ವೀಣಾ ತಂತ್ರಿ, ಕುಬೇರನಾಗಿ ಆಶಾಲತಾ ಕಲ್ಲೂರಾಯ, ವನಪಾಲಕನಾಗಿ ಅಶ್ವಿನಿ ನಿಡ್ವಣ್ಣಾಯ ಮನಸೂರೆಗೊಂಡರು.
ಕೊನೆಯ ದಿನ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮತ್ತು ಐಕಳ ವಿಶ್ವನಾಥ ಶೆಟ್ಟಿ ಸಹಯೋಗದಲ್ಲಿ ಸಯನ್‌ನ ನಿತ್ಯಾನಂದ ಹಾಲ್‌ನಲ್ಲಿ ವೀರಮಣಿ ಕಾಳಗ ತಾಳಮದ್ದಳೆ ನಡೆಯಿತು. ಹನುಮಂತನಾಗಿ ಪದ್ಮಾ ಆಚಾರ್ಯ, ವೀರಮಣಿಯಾಗಿ ಸುಮಂಗಲಾ ರತ್ನಾಕರ್, ಶತ್ರುಘ್ನ ನಾಗಿ ವೀಣಾ ತಂತ್ರಿ, ಈಶ್ವರನಾಗಿ ಆಶಾಲತಾ ಕಲ್ಲೂರಾಯ, ಶ್ರೀರಾಮನಾಗಿ, ಅಶ್ವಿನಿ ನಿಡ್ವಣ್ಣಾಯ ನಿರರ್ಗಳ ಮಾತುಗಾರಿಕೆ ಮೂಲಕ ಮನಗೆದ್ದರು.
ಕಲಾಪ್ರೇಮಿ