Advertisement

ಮಾಡದ ಕೆಲಸಕ್ಕೆ ಪೋಸು ಸರಿಯಲ್ಲ

05:47 PM Sep 03, 2022 | Team Udayavani |

ಮಸ್ಕಿ: ವೆಂಕಟಾಪುರ ಮಾರ್ಗದ ಸೇತುವೆ ಕುಸಿದ ವೇಳೆ ಗ್ರಾಮಸ್ಥರೆಲ್ಲ ಸೇರಿಕೊಂಡು ತಾತ್ಕಾಲಿಕ ದುರಸ್ತಿ ಮಾಡಿದ್ದೇವೆ. ಆದರೆ, ಶಾಸಕರ ಸಹೋದರ ಆರ್‌.ಸಿದ್ದನಗೌಡ ತುರುವಿಹಾಳ ಈ ಕೆಲಸ ತಾವೇ ಮಾಡಿರುವುದಾಗಿ ಪೋಜು ಕೊಡುತ್ತಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ ಆರೋಪಿಸಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸತತ ಮಳೆಯಿಂದಾಗಿ ಇತ್ತೀಚೆಗೆ ವೆಂಕಟಾಪುರ ರಸ್ತೆ ಸೇತುವೆ ಸಂಪೂರ್ಣ ಕಿತ್ತುಹೋಗಿತ್ತು. ಗ್ರಾಮಸ್ಥರೆಲ್ಲರೂ ಬೆಳಗ್ಗೆ 6ಗಂಟೆಯಿಂದಲೇ ಸ್ಥಳದಲ್ಲಿ ಮೊಕ್ಕಂ ಹೂಡಿ ಸಾರ್ವಜನಿಕರು, ಮಕ್ಕಳನ್ನು ಹರಿವ ಹಳ್ಳದಲ್ಲಿಯೇ ದಾಟಿಸಿದ್ದೇವೆ. ವಿಷಯ ಗೊತ್ತಾದರೂ ಶಾಸಕ ಬಸನಗೌಡ ತುರುವಿಹಾಳ ಸ್ಥಳಕ್ಕೆ ಬಂದು ಸಮಸ್ಯೆ ಕೇಳುವ ಸೌಜನ್ಯ ತೋರಲಿಲ್ಲ. ಅವರ ಸಹೋದರ ಸಿದ್ದನಗೌಡ ಶಾಸಕರ ಕಚೇರಿಗೆ ಬಂದು ದೂರು ನೀಡಿದರೆ ಸಮಸ್ಯೆ ಪರಿಹರಿಸುತ್ತಿದ್ದೇವು. ಅದರ ಬದಲಾಗಿ ನೀವೇ ರಿಪೇರಿ ಏಕೆ ಮಾಡಿಕೊಂಡಿರಿ? ಎಂದು ಗೂಂಡಾ ವರ್ತನೆ ಪ್ರದರ್ಶನ ಮಾಡುತ್ತಿದ್ದಾರೆ. ಗ್ರಾಮಸ್ಥರು ಮಾಡಿದ ಕೆಲಸವನ್ನು ತಾವೇ ಸ್ವಂತ ಖರ್ಚಿನಲ್ಲಿ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಬಿಟ್ಟು ಪ್ರಚಾರ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದರು.

ಅಣ್ಣ ಮೌನ, ತಮ್ಮ ದೌರ್ಜನ್ಯ: ಮೊದಲು ಆರ್‌. ಬಸನಗೌಡ ತುರುವಿಹಾಳ ಯಾರು? ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿರಲಿಲ್ಲ. ನಾನು ಸೇರಿ ಕೆಲವು ನಿಷ್ಠಾವಂತ ಕಾರ್ಯಕರ್ತರು ಅವರನ್ನು ಕ್ಷೇತ್ರಕ್ಕೆ ಪರಿಚಯ ಮಾಡಿಸಿದೆವು. ಬಿಜೆಪಿಯಲ್ಲಿ ಇರುವಾಗ 2018ರ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಎಲ್ಲ ಹಂತದ ಲೀಡರ್‌ಗಳ ಕಾಲು ಮುಗಿದು ಟಿಕೆಟ್‌ ಕೊಡಿಸಿದೆವು. ಮಸ್ಕಿಯಲ್ಲಿ ಕೂಡಲು ಜಾಗವಿಲ್ಲದಾಗ ಹೂವಿನಬಾವಿ ವಿಜಯಣ್ಣ ಅವರ ಅಂಗಡಿಯಲ್ಲೇ ಕೂಡಿಸಿ, ಕಾರ್ಯಕರ್ತರನ್ನು ಸಂಘಟಿಸಿದ್ದೇವೆ. ಉಪಚುನಾವಣೆಯಲ್ಲಿ ಅವರಿವರ ಕಾಲು ಬಿದ್ದು ವೋಟ್‌ ಹಾಕಿ ಗೆಲ್ಲಿಸಿದ್ದೇವೆ. ಆದರೆ ಈಗ ಗೆದ್ದ ಬಳಿಕ ಸರ್ವಾಧಿಕಾರಿಗಳಾಗಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಶಿವಣ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next