ವಾಷಿಂಗ್ಟನ್: ಪ್ರಸಕ್ತ ವರ್ಷ ಭಾರತದಿಂದ ಅಮೆರಿಕಕ್ಕೆ ತೆರಳುವವರಿಗೆ ಖುಷಿಯ ವಿಚಾರ. ಎಚ್-1ಬಿ ವೀಸಾ ಸೇರಿದಂತೆ ಹಲವು ಶ್ರೇಣಿಗಳ ವೀಸಾಗಳಿಗೆ ಖುದ್ದು ಸಂದರ್ಶನಕ್ಕೆ ಹಾಜರಾಗುವ ಪ್ರಕ್ರಿಯೆಯಿಂದ ಡಿಸೆಂಬರ್ ಅಂತ್ಯದವರೆಗೆ ಅಮೆರಿಕ ವಿನಾಯಿತಿ ನೀಡಿದೆ.
ಈ ಬಗ್ಗೆ ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿ ವಾಷಿಂಗ್ಟನ್‌ನಲ್ಲಿ ಭಾರತೀಯ ಸಮುದಾಯದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಇರುವ ಎಫ್, ಎಂ ಮತ್ತು ಅಕಾಡೆಮಿಕ್ ಜೆ ವೀಸಾಗಳು, ಉದ್ಯೋಗಿಗಳಿಗೆ ಸಂಬಂಧಿಸಿದ ಎಚ್-1, ಎಚ್-2, ಎಚ್-3 ಮತ್ತು ವೈಯಕ್ತಿಕ ವಿಭಾಗದ ಎಲ್ ವೀಸಾಗಳು, ಸಾಂಸ್ಕೃತಿಕ ಮತ್ತು ಅಸಾಧಾರಣ ಪ್ರತಿಭೆ ವಿಭಾಗಕ್ಕೆ ಸಂಬಂಧಿಸಿದ ಒ, ಪಿ ಮತ್ತು ಕ್ಯೂ ವೀಸಾಗಳಿಗೆ ಖುದ್ದು ಸಂದರ್ಶನದಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ:ಉಕ್ರೇನ್ ಗೆ ಜಪಾನ್ ಉದ್ಯಮಿಯಿಂದ ಆರ್ಥಿಕ ನೆರವು
ಇದರಿಂದ ಅಮೆರಿಕ ವೀಸಾಕಾಂಕ್ಷಿಗಳಿಗೆ ನಿಜಕ್ಕೂ ನೆರವಾಗಲಿದೆ ಮತ್ತು ಅನಗತ್ಯ ಆತಂಕ ಮತ್ತು ಅನಾನುಕೂಲ ಗಳನ್ನು ನಿವಾರಿಸಿದಂತಾಗಲಿದೆ ಎಂದು ಅಮೆರಿಕ ಅಧಕ್ಷ್ಯ ಜೋ ಬೈಡೆನ್ ಅವರಿಗೆ ಏಷ್ಯನ್ ಅಮೆರಿಕನ್ ವಿಭಾಗಕ್ಕಾಗಿನ ಸಲಹೆಗಾರ ಅಜಯ ಜೈನ್ ಭುಟೋರಿಯಾ ಹೇಳಿದ್ದಾರೆ. ಈ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವಾಲಯದ ಜತೆಗೆ ಕೂಡ ಮಾತುಕತೆ ನಡೆಸಲಾಗಿತ್ತು ಎಂದಿದ್ದಾರೆ ಭುಟೋರಿಯಾ.