Advertisement

ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ

10:32 PM Oct 13, 2021 | Team Udayavani |

ಕಲಬುರಗಿ: ವೀರ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಾಗ ಮಹಾತ್ಮ ಗಾಂಧೀಜಿ ದೇಶಕ್ಕೆ ಮರಳಿ ಬಂದಿರಲಿಲ್ಲ. ಗಾಂಧೀಜಿ ಆಫ್ರಿಕಾದಿಂದ ದೇಶಕ್ಕೆ ಬರುವ ಮುಂಚೆಯೇ ಸಾವರ್ಕರ್ ಜೈಲಿನಿಂದ ಕ್ಷಮಾಪಣೆ ಪತ್ರ ಬರೆದಿದ್ದರು. ಕ್ಷಮಾಪಣೆ ಪತ್ರ ಬರೆಯುಂತೆ ಸಾವರ್ಕರ್ ಗೆ ಗಾಂಧೀಜಿ ಸಲಹೆ ನೀಡಿದ್ದರು ಅಂತಾ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು ಎಂದು ಎಐಎಂಐಎ ಪಕ್ಷದ ಮುಖ್ಯಸ್ಥ, ಹೈದ್ರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ರಿಂಗ್ ರಸ್ತೆಯ ಮೆಟ್ರೋ ಪ್ಯಾಲೆಸ್ ಫಂಕ್ಷನ್ ಹಾಲ್ ನಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ  ಅವರು, ಗಾಂಧೀಜಿ ಸಲಹೆ ಮೇರೆಗೆ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಆದರೆ, 1911ರಲ್ಲಿ ಸಾವರ್ಕರ್ ಮೊದಲ ಕ್ಷಮಾಪಣೆ ಪತ್ರವನ್ನು ಬ್ರಿಟಿಷರಿಗೆ ಬರೆದಿದ್ದರು. 1913ರಲ್ಲಿ ಎರಡನೇ ಕ್ಷಮಾಪಣೆ ಪತ್ರ ಬರೆದಿದ್ದರು. ಈ ಎರಡೂ ಸಂದರ್ಭದಲ್ಲೂ ಗಾಂಧೀಜಿ ದೇಶದಲ್ಲೇ ಇರಲಿಲ್ಲ. ಗಾಂಧೀಜಿ ಭಾರತಕ್ಕೆ ಬಂದಿದ್ದೇ 1915ರಲ್ಲಿ. ಅಂದರೆ ಗಾಂಧೀಜಿ ಬರುವ ಮೊದಲೇ ಕ್ಷಮಾಪಣೆ ಪತ್ರಗಳನ್ನು ಸಾವರ್ಕರ್ ಬರೆದಿದ್ದರು ಎಂದರು.

ಸಾವರ್ಕರ್ ಗೆ ಗಾಂಧೀಜಿ ಸಲಹೆ ನೀಡಿದ್ದರು ನಿಜ. ಆದರೆ, ಕ್ಷಮಾಪಣೆ ಪತ್ರ ಬರೆಯಲು ಅವರು ಹೇಳಿರಲಿಲ್ಲ. ಗಾಂಧೀಜಿ ಅವರು ಜೈಲಿಗೆ ಹೋಗುವುದೇ ಅಹಿಂಸೆಯ ದಾರಿ ಹೇಳಿದ್ದರು. ಅದೂ ಕೂಡ 1920ರಲ್ಲಿ ಸಾವರ್ಕರ್ ಗೆ ಪತ್ರ ಹೇಳಿದ್ದರು. ಆದರೆ, ಬಿಜೆಪಿಯವರು ಬರೀ ಸುಳ್ಳನ್ನೇ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. 1947ರಲ್ಲಿ ತಿರಂಗ ಒಪ್ಪುವುದಿಲ್ಲ ಎಂದು ಇದೇ ಸಾವರ್ಕರ್ ಹೇಳಿದ್ದರೋ, ಇಲ್ಲವೋ ಎಂದಾದರೂ ಬಿಜೆಪಿಯವರೇ ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ವಿರುದ್ಧ ಒಟ್ಟಾಗಬೇಕು: ಜಾತ್ಯಾತೀತ ಪಕ್ಷಗಳೆಂದು ಕರೆದುಕೊಳ್ಳುವವರೂ ಹಿಂದು ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಆ ಪಕ್ಷಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿದೆ. ಕೊನೆಗೆ ಮುಸ್ಲಿಮರು ಎಲ್ಲಿ ಹೋಗುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ, ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರು ಒಟ್ಟಾಗಬೇಕಿದೆ ಎಂದು ಓವೈಸಿ ಹೇಳಿದರು.

Advertisement

ಇದನ್ನೂ ಓದಿ:500 ಕೆ.ಜಿ.ಚಿನ್ನ ಈಗಲೇ ಕರಗಿಸಿದ್ದೇವೆ: ಮದ್ರಾಸ್‌ ಹೈಕೋರ್ಟ್‌ಗೆ ತಮಿಳುನಾಡು ಸರ್ಕಾರ ಮಾಹಿತಿ

ನಾನು ಕಾಂಗ್ರೆಸ್ ವಿರುದ್ಧ ಮಾತ್ರ ನಾನು ಮಾತನಾಡುತ್ತೇನೆ. ಬಿಜೆಪಿ ವಿರುದ್ಧ ಮಾತನಾಡಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ಸಂಸತ್ತಿನಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಅತಿ ಹೆಚ್ಚು ಟೀಕೆ ಮಾಡುವುದೇ ನಾನು. ಅದೇ ಸಂಸತ್ತಿನಲ್ಲಿ ಮೋದಿಯನ್ನು ಅಪ್ಪಿಕೊಂಡಿದ್ದು ಯಾರು ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಹೈದ್ರಾಬಾದ ಶಾಸಕ ಕೌಸರ್ ಮೋಹಿವುದ್ದೀನ್, ಮುಖಂಡರಾದ ಇಲಿಯಾಸ್ ಸೇಠ್, ಸಲೀಂಸಾಬ್, ಮೋಹಿನ್, ಮೊಹಮ್ಮದ್ ಅಜೀಮ್, ಇಕ್ಬಾಲ್ ಅಹ್ಮದ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಎಐಎಂಐಎ ಪಕ್ಷ ಬಲಪಡಿಸಬೇಕಿದೆ. ಕರ್ನಾಟಕ ವಿಧಾನಸಭೆಗೆ ಪಕ್ಷದ ಶಾಸಕರು ಪ್ರವೇಶಿಸುವಂತೆ ಆಗಬೇಕು. ಭಾರತೀಯರ ಮುಸ್ಲಿಮರ ಹಿತಕಾಯಲು, ಸಂಸ್ಕೃತಿ ರಕ್ಷಣೆ, ಅನಕ್ಷರತೆ ತೊಡೆದು ಹಾಕಲು ಪಕ್ಷದ ಮುಖಂಡರು ಶ್ರಮಿಸಬೇಕೆಂದು ಓವೈಸಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸೇರಿ ಯಾವುದೇ ಚುನಾವಣೆ ಕ್ಷೇತ್ರದವರೂ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಬೇಕು. ಎಲ್ಲ ಮುಖಂಡರು ಪಕ್ಷದ ಪರವಾಗಿ ಕೆಲಸ ಮಾಡಬೇಕು ಮತ್ತು ಪಕ್ಷವನ್ನು ಬಲಿಷ್ಠ ಪಡಿಸಬೇಕು. ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವು. ಆದರೂ, ಸುಮಾರು 10,500 ಮತಗಳು ಪಕ್ಷಕ್ಕೆ ಬಂದಿವೆ. ಇದು ಸಾಮಾನ್ಯದ ಮಾತಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next