Advertisement
”ಕಲೆಯ ಮೇಲೆ ನಿರಂತರ ದಾಳಿ ನಡೆದಿದೆ, ಒಡೆಯುವ ಹುನ್ನಾರ ನಡೆಯುತ್ತಿದೆ. ಭಾರತ ಮಾತೆಗೆ ಮೂವರು ಮಕ್ಕಳು ಮೊದಲನೆಯದ್ದು ವೇದ ವೇದಾಂತ, ಎರಡನೆಯದು ಮಹಾಕಾವ್ಯಗಳು ಮತ್ತು ಮೂರನೆಯದ್ದು ಪುರಾಣ ಪ್ರಪಂಚ. ದೊಡ್ಡ ರೀತಿಯಲ್ಲಿ ಈ ದೇಶದಲ್ಲಿ ಪುರಾಣವನ್ನು ಸುಳ್ಳು ಮಾಡಲು ದೊಡ್ಡ ಮಟ್ಟದ ಹುನ್ನಾರ ನಡೆಯುತ್ತಿದೆ. ಪುರಾಣವನ್ನು ಶುದ್ಧ ರೀತಿಯಲ್ಲಿ ಉಳಿಸಿಕೊಂಡು ಬಂದ ಒಂದು ಮಾಧ್ಯಮವಿದ್ದರೆ ಅದು ಯಕ್ಷಗಾನ. ಪುರಾಣ ಉಳಿಸಿಕೊಳ್ಳಬೇಕಾದರೆ ಯಕ್ಷಗಾನದಲ್ಲಿ ಪೌರಾಣಿಕ ಕಥೆಗಳು ಉಳಿದುಕೊಳ್ಳಬೇಕಾಗಿದೆ” ಎಂದರು.
Related Articles
Advertisement
”ಯಕ್ಷಗಾನ ಸಮ್ಮೇಳನ ಹಲವು ದಶಕಗಳ ಬೇಡಿಕೆ. ಅದು ಇವತ್ತು ಸಂಪದವಾಗಿದೆ . ಈ ವರ್ಷ ತೆಗೆದುಕೊಂಡ ನಿರ್ಣಯ ಮುಂದಿನ ವರ್ಷ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ಅಕಾಡೆಮಿ ಮಾಡಲು ಸಾಧ್ಯವಿರುವಂತಹ, ಕಲಾವಿದರು, ಜನ ಸಾಮಾನ್ಯರು ತೆಗೆದುಕೊಳ್ಳುವ ನಿರ್ಣಯಗಳನ್ನೇ ತೆಗೆದುಕೊಳ್ಳಬೇಕು” ಎಂದರು.
”ಸಮ್ಮೇಳನ ಯಕ್ಷಗಾನಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿರದೆ ಮುಂದಿನ ವರ್ಷಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯಬೇಕು. ಯಕ್ಷಗಾನಕ್ಕೆ ಸಂಬಂಧ ಪಡದ ಜಿಲ್ಲೆಗಳಲ್ಲೂ ಸಮ್ಮೇಳನಗಳನ್ನು ಆಯೋಜಿಸಬೇಕು” ಎಂದು ಒತ್ತಾಯಿಸಿದರು.
”ನಮ್ಮ ಯಕ್ಷಗಾನ ಗಾನ ವಾಚನ, ತರ್ಕ, ಬೌದ್ಧಿಕ ಸಾಮರ್ಥ್ಯ ಬೆಳೆಸುತ್ತದೆ. ಕಲಾವಿದನಿಗೆ ಕನಿಷ್ಠ ನೂರು ಪಾತ್ರಗಳಾದರೂ ನಿರ್ವಹಿಸುವ ಸಾಮರ್ಥ್ಯ ನೀಡುತ್ತದೆ. ಛಂದಸ್ಸಿನ ರುಚಿ ತಾಳ, ಮಟ್ಟುವಿನ ರುಚಿ ಇದೆ, ಆಹಾರ್ಯವಿದೆ. ಕಲಾ ರಸಿಕತೆಗೆ ಎಲ್ಲಾ ಅವಕಾಶವಿರುವ ಯಕ್ಷಗಾನ ಪಠ್ಯ ಕ್ರಮದಲ್ಲಿ ಯಾಕೆ ಸೇರಿಲ್ಲ” ಎಂದು ಪ್ರಶ್ನಿಸಿದರು.
”ಸಮಗ್ರ ಶಿಕ್ಷಣ ಕೊಡುವ ಯಕ್ಷಗಾನವನ್ನು ಯಾಕೆ ಶಾಲೆಗಳಲ್ಲಿ ಕಲಿಸಬಾರದು . ರಾಜ್ಯದ ನಾಲ್ಕನೇ ಒಂದು ಶಾಲೆಗಳಲ್ಲಾದರೂ ಯಕ್ಷಗಾನ ಕಲಿಸಬೇಕು” ಎಂದರು.
”ಹಳೆಗನ್ನಡ ಕಾವ್ಯ ಪ್ರಸಂಗದ ಪದ್ಯಗಳನ್ನು ಓದಿಸಬೇಕು ಎನ್ನುವ ಆಸೆ ಇತ್ತು. ಹೊಸ ಪಠ್ಯ ಪುಸ್ತಕ ರಚನೆ ಮಾಡುವಾಗ ನಾಲ್ಕಾದರೂ ಯಕ್ಷಗಾನ ಪದ್ಯಗಳನ್ನು ಕೊಡಬೇಕು. ಯಕ್ಷಗಾನದ ಸಾಹಿತ್ಯ ಮಕ್ಕಳ ಪಠ್ಯ ಪುಸ್ತಕದಲ್ಲಿ ಇಲ್ಲದೇ ಇರುವುದು ನಮಗೆ ಅವಮಾನ” ಎಂದರು.
”1972 ರಲ್ಲಿ ಕೃಷ್ಣನ ನಾಡಿನಲ್ಲಿ ಭಾಗವತರನ್ನು ಸೇರಿಸಿ ಭಾಗವತರ ಅನೇಕ ಮಜಲುಗಳನ್ನು ತಿಳಿಯಲು ಒಂದು ಶಿಬಿರವನ್ನು ನಡೆಸಿಕೊಟ್ಟರು. ಅವರು ಮಾಡಿದ ಶಿಬಿರದಿಂದ ಸಿಕ್ಕಿದ ಪ್ರತಿಭೆ ಕಾಳಿಂಗ ನಾವಡರು.ಆ ಕಾಲದಲ್ಲಿ ಕಾರಂತರಿಗೇ ಯಕ್ಷಗಾನವೇನು ಗೊತ್ತಿದೆ ಅಂದವರಿದ್ದರು” ಎಂದರು.
”ನಾನು ಇಲ್ಲಿ ವಿಮರ್ಶೆಗೆ ಇಳಿಯುತ್ತಿಲ್ಲ.ನಮ್ಮ ವಿರೋಧಿಗಳೂ ಕೂಡ ದೊಡ್ಡ ಪಟ್ಟಿ ನೀಡಿದ್ದಾರೆ. ನಾನು ವಿಮರ್ಶಿಸಿದರೆ ಸೂರ್ಯನಿಗೆ ಸೊಡರು ತೊಡಿಸಿದ ಹಾಗೆ, ಕಾಳಿದಾಸನಿಗೆ ಕಾಗುಣಿತ ಕಲಿಸಿದ ಹಾಗೆ ಆಗುತ್ತದೆ” ಎಂದರು.
”ಯಕ್ಷಗಾನ ಶಬ್ದ ಜಕ್ಕ ಅನ್ನುವ ಶಬ್ದದಿಂದ ಬಂದಿದೆ ಅನ್ನುತ್ತಾರೆ, ಗಂಧರ್ವಗಾನ ದಿಂದ ಯಕ್ಷಗಾನ ಬಂದಿದೆ ಅನ್ನುತ್ತಾರೆ.ಈ ಕಲೆಯಲ್ಲಿ ಬಹಳ ವಿಶೇಷ ಧ್ಯಾನಸ್ಥರಾಗಿ ಚಿಂತನೆ ಮಾಡುವ ಅವಕಾಶವಿದೆ. ಇದು ಆಶು ಪ್ರತಿಭೆ ತೋರಿಸುವ ಕಲೆ ಅಲ್ಲ.ಯಕ್ಷಗಾನ ಹೊಸ ರೀತಿಯ ಪ್ರಯೋಗವನ್ನು ತೋರಿಸುವ ಲಿಖಿತವೂ ಅಲ್ಲದ ಆಶುವೂ ಅಲ್ಲದ ವಿಶಿಷ್ಟ ಕಲೆ. ಪ್ರಸಂಗ ಅದೇ ಆದರೂ ರಂಗದಲ್ಲಿ ಇವತ್ತಿನ ರಾಮ ನಾಳಿನ ರಾಮನಾಗಿರುವುದಿಲ್ಲ. ರಂಗದಲ್ಲಿ ಅರ್ಥಗಾರಿಕೆಯಲ್ಲಿ ಭಿನ್ನತೆ ಇದೆ” ಎಂದರು.
”ಕುರುಬರು ಕುರಿ ಕಾಯುವಾಗ ತೋಟದಲ್ಲಿ ಒಂದು ಕಲ್ಲು ಆರಿಸಿಕೊಂಡು ಪೀಠದಲ್ಲಿ ಕಲ್ಲಿಟ್ಟು ಅದನ್ನೇ ಶಿವನೆಂದು ಪೂಜಿಸುತ್ತಾರೆ. ಆ ಕಲ್ಲೇ ಅವರಿಗೆ ದೇವರು. ಅವರು ಇನ್ನೊಂದು ಕಡೆಗೆ ವಲಸೆ ಹೋಗುವ ವೇಳೆ ಕಲ್ಲನ್ನು ತೆಗೆದು ಎಸೆದು ಹೋಗುತ್ತಾರೆ, ಇನ್ನೊಂದು ಊರಿಗೆ ಹೋದಾಗ ಮತ್ತೊಂದು ಕಲ್ಲು ಅವರಿಗೆ ದೇವರು, ಆವತ್ತಿನ ವೇದಿಕೆಗೆ ಅವರೇ ದೇವರಾಗಿರುತ್ತಾರೆ. ಯಕ್ಷಗಾನ ಕಲೆಯಲ್ಲೂ ಆ ರೀತಿಯ ಅಂಶಗಳನ್ನು ಕಾಣಬಹುದು” ಎಂದರು.
”ಸ್ವಲ್ಪ ವಿಸ್ತರಿಸಿ ಹೇಳಿದಾಗ ಭಾರತ ಮುನಿಯ ನಾಟ್ಯ ಶಾಸ್ತ್ರ ಕೃತ ಮತ್ತು ತ್ರೇತೆಯ ಸಂಧಿ ಕಾಲದಲ್ಲಿ ಸಮಾಜದಲ್ಲಿ ಮೌಲ್ಯ ಗಳು ಕಳೆದುಕೊಳ್ಳುತ್ತಿದೆ ಎಂದಾಗ ಭಾರತ ಮುನಿ ಒಂದು ನಾಟ್ಯ ಬರೆದು ಕೊಟ್ಟ, ದಾನವ ಪರಾಭವ ಅನ್ನುವುದನ್ನು ಕೊಟ್ಟ,ದಾನವ ಪರಾಭವ ಎಂದರೆ ಲಕ್ಷ್ಮೀ ಸ್ವಯಂವರ ಪ್ರಸಂಗ. ಯಕ್ಷಗಾನದಲ್ಲಿ ಕನಿಷ್ಠ 80 ಕಾಳಗ ಇಲ್ಲವೇ ಕಲ್ಯಾಣ ಪ್ರಸಂಗಗಳು ಬರುತ್ತವೆ .ಕಲ್ಯಾಣಕ್ಕೆ ಸಂಬಂಧಿಸಿದ್ದು ಲಕ್ಷ್ಮೀ ಸ್ವಯಂವರ” ಎಂದರು.
”ನಾಟ್ಯ ನಟ ಧಾತುವಿನಿಂದ ಬಂದದ್ದು ನಾಟ್ಯ ಮತ್ತು ಆಟ ಶುದ್ಧವಾದ ಮಾರ್ಗದಲ್ಲಿ ನಾವು ನಾಟ್ಯ ನಾಟಕ ಗದ್ಯವನ್ನು ಇಟ್ಟುಕೊಂಡದ್ದು. ಪದ್ಯ ಮತ್ತು ಗದ್ಯಗಳ ಸಂಗಮ ಯಕ್ಷಗಾನ. ಒಂದು ಕಡೆ ದೇಸಿ, ಇನ್ನೊಂದು ಕಡೆ ಮಾರ್ಗ.ಲಿಖಿತ ಮತ್ತು ಆಶು ರೂಪವು ಹೌದು. ಒಂದೆಡೆ ಸಂಸ್ಕೃತ ಇನ್ನೊಂದೆಡೆ ನಮ್ಮ ಸ್ಥಳೀಯ ಭಾಷೆ. ಪತಂಜಲಿ ಮಹಾ ಭಾಷೆಯಲ್ಲಿ ಕಂಸವಧೆ ಪ್ರಸಂಗ ಬರುತ್ತದೆ ಯಕ್ಷಗಾನದಲ್ಲೂ ಅದು ಜನಪ್ರಿಯ ಪ್ರಸಂಗ” ಎಂದರು.
”ಸೂತ್ರಧಾರ ಅಥವಾ ಭಾಗವತ ಆ ಶಬ್ದಗಳೇ ಪ್ರಾಚೀನತೆ ಹೊಂದಿದ್ದು, ವೇದಗಳ ಕಾಲಕ್ಕೆ ಹೋಗುತ್ತದೆ, ಸಭಾ ಲಕ್ಷಣ, ದೇವತಾ ಸ್ತುತಿ ಸೇರಿ ಎಲ್ಲವೂ ಭಾರತ ಮುನಿ ಹೇಳಿರುವುದಕ್ಕೆ ಸರಿಯಾಗಿ ಕೂಡಿಕೊಳ್ಳುತ್ತದೆ. ಆಧುನಿಕ ರಂಗಭೂಮಿಯಲ್ಲಿ ಸೂತ್ರಧಾರ ಇರುತ್ತಾನೆ, ಅಲ್ಲಿ ಆರಂಭದಲ್ಲಿ ಮಾತ್ರ ಸೂತ್ರಧಾರ ಕಾಣಿಸಿಕೊಂಡು ನಿರ್ಗಮಿಸಿದ ಮೇಲೆ ನಾಟಕಕ್ಕೂ ಸೂತ್ರಧಾರನಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಯಕ್ಷಗಾನದಲ್ಲಿ ಭಾಗವತ ಪ್ರಸಂಗದ ಉದ್ದಕ್ಕೂ ಇರುತ್ತಾನೆ. ಭಾರತಮುನಿಯ ಚೌಕಟ್ಟು ಸಮಗ್ರವಾಗಿ ಯಕ್ಷಗಾನದಲ್ಲಿ ಕಾಣಬಹುದು” ಎಂದರು.
”ಪಾರಿಭಾಷಿಕಗಳನ್ನು ಅದೇ ಅರ್ಥದಲ್ಲಿ ಕಾಣಬಹುದು, ಮೃದಂಗ ಮತ್ತು ಚಂಡೆ ಚರ್ಮವಾದ್ಯಗಳು, ಜಾಗಟೆ, ತಾಳ, ಲಯ ಬಹಳ ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ಯಕ್ಷಗಾನ ಬಹಳ ಪ್ರಾಚೀನ ಕಲೆ ಎನ್ನುವುದು ಸರ್ವಥಾ ಸಿದ್ದಿ” ಎಂದರು.
”ಯಕ್ಷಗಾನ ಬುದ್ದಿ ಮತ್ತು ಭಾವನೆಗಳನ್ನು ಪ್ರಚೋದಿಸುವ ಕಲೆ , ಪಂಡಿತ ಮತ್ತು ಪಾಮರರು ಯಕ್ಷಗಾನವನ್ನು ನೋಡುವ ರೀತಿಯೇ ಬೇರೆ. ಎಲ್ಲ ವರ್ಗದವರಿಗೂ ಅತ್ಯಂತ ಪ್ರಿಯವಾದುದ್ದಾಗಿದೆ” ಎಂದರು.
”ನಾಗರಿಕತೆ ಹುಟ್ಟುತ್ತಿರುವ ಕಾಲದಲ್ಲೇ ಯಕ್ಷಗಾನ ಹುಟ್ಟಿಕೊಂಡಿದೆ. ಇದು ಶುದ್ಧವಾದ ಭಾರತೀಯ ಕಲೆ, ಪ್ರಪಂಚದಲ್ಲಿ ಅನೇಕ ನಾಗರಿಕತೆ ನಶಿಸಿ ಹೋದವು. ನಾವು ಹೆಚ್ಚಿನದವುಗಳನ್ನು ಮ್ಯೂಸಿಯಂ ಗಳಲ್ಲಿ ನೋಡುತ್ತೇವೆ. ಭಾರತದಲ್ಲಿ ಸಾಂಸ್ಕೃತಿಕವಾಗಿ ಜೀವಂತವಾಗಿರುವ ಭಾಷೆ ಯಕ್ಷಗಾನ” ಎಂದರು.
”ಎಷ್ಟೋ ಮಂದಿ, ಎರಡು ವೇಷ ಬರುತ್ತದೆ, ಕುಣಿಯುತ್ತಾರೆ, ಭಾಗವತಿಕೆ ಮಾಡುತ್ತಾರೆ ಅನ್ನುವುದು ಯಕ್ಷಗಾನ ಅಲ್ಲ, ಸಾವಿರಾರು ವರ್ಷಗಳಿಂದ ಇದು ಬೆಳೆದುಕೊಂಡು ಬಂದಿದೆ ಎನ್ನುವ ಎಚ್ಚರ ಮತ್ತು ಹೆಮ್ಮೆ ಎರಡೂ ಬೇಕು. ಕಲೆಯನ್ನು ಬದಲಿಸಲು ಎಚ್ಚರದಿಂದ ಹೆಜ್ಜೆ ಇಡಬೇಕು. ನಾಗರಿಕತೆಯ ಜೊತೆಗೆ ಯಕ್ಷಗಾನ ಬೆಳೆದುಬಂದಿದೆ” ಎಂದರು.