ಬೆಂಗಳೂರು: ಚೋಳ ರಾಜನ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಎನ್ನುವ ನಟ ಕಮಲ ಹಾಸನ್ ಆರೋಪಕ್ಕೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿರುಗೇಟು ನೀಡಿದ್ದು, ಒಂದು ವೇಳೆ ಚೋಳ ರಾಜರ ಕಾಲದಲ್ಲಿ ತಮಿಳುನಾಡು ಎಂಬ ಪರಿಕಲ್ಪನೆಯೇ ಇಲ್ಲದಿದ್ದ ಮೇಲೆ ರಾಜ ರಾಜ ಚೋಳ ದ್ರಾವಿಡ ರಾಜನಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:15 ನಿಮಿಷದ ದಾರಿಗೆ 32 ಲಕ್ಷ ರೂ. ಬಾಡಿಗೆ ಹಾಕಿದ ಉಬರ್: ಗ್ರಾಹಕ ಕಕ್ಕಾಬಿಕ್ಕಿ.!
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಕಮಲ ಹಾಸನ್, ಚೋಳರ ಕಾಲದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ. ಅಷ್ಟೇ ಅಲ್ಲ ರಾಜ ರಾಜ ಚೋಳ ಹಿಂದೂ ರಾಜನೇ ಅಲ್ಲ ಎಂದು ಆರೋಪಿಸಿದ್ದರು.
ತಮಿಳುನಾಡಿನ ತಂಜಾವೂರಿನಲ್ಲಿ ರಾಜ ರಾಜ ಚೋಳ ಬೃಹದೀಶ್ವರ ದೇವಸ್ಥಾನವನ್ನು ನಿರ್ಮಿಸಿದ್ದು, ಇದೀಗ ಮೂರ್ಖ ಜನರು ಚೋಳರ ಕಾಲದಲ್ಲಿ ಹಿಂದೂಗಳು ಇರಲಿಲ್ಲ ಎಂಬ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ ಎಂದು ಬಿಎಲ್ ಸಂತೋಷ್ ತಿರುಗೇಟು ನೀಡಿದ್ದಾರೆ.
ರಾಜರ ಕಾಲದಲ್ಲಿ ತಮಿಳುನಾಡು ಪರಿಕಲ್ಪನೆ ಇರಲಿಲ್ಲ ಎಂದಾದ ಮೇಲೆ ಚೋಳ ಸಾಮ್ರಾಜ್ಯ, ಪಲ್ಲವ ಸಾಮ್ರಾಜ್ಯ ಮತ್ತು ಪಾಂಡ್ಯ ರಾಜವಂಶಗಳಿದ್ದವು. ಹಾಗಾದರೆ ರಾಜ ರಾಜ ಚೋಳ ದ್ರಾವಿಡ ರಾಜನಾಗಲು ಹೇಗೆ ಸಾಧ್ಯ? ಸ್ವಾರ್ಥದ ರಾಜಕೀಯ ಕಾರಣದಿಂದ ದ್ರಾವಿಡ ವಿವಾದ ಹುಟ್ಟುಹಾಕಲಾಗಿತ್ತು. ನಿಜಕ್ಕೂ ಅಲ್ಲಿ ದ್ರಾವಿಡ ವಿಷಯವೇ ಇಲ್ಲ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವೇ ದ್ರಾವಿಡವಾಗಿದೆ ಎಂದು ಸಂತೋಷ್ ಟೀಕಿಸಿದ್ದಾರೆ.