Advertisement

3 ತಿಂಗಳಾದರೂ ಕಾರ್ಯಾರಂಭವಿಲ್ಲ: ಗ್ರಾಮಸ್ಥರ ಆಕ್ರೋಶ

06:15 AM May 31, 2018 | Team Udayavani |

ಹೆಬ್ರಿ: ಕಳೆದ 41ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೊನೆಗೂ ಹೆಬ್ರಿಯನ್ನು ಹೊಸ ತಾಲೂಕಾಗಿ ಘೋಷಣೆ ಮಾಡಿ ಫೆ. 17ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು  3 ತಿಂಗಳಾದರೂ ಯಾವುದೇ ಕಚೇರಿ ಕೆಲಸಗಳು ಆರಂಭಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ನೂತನ ಕಟ್ಟಡವಾಗುವ ತನಕ ಜನರಿಗೆ ಅನುಕೂಲವಾಗುವಂತೆ ಹೆಬ್ರಿ ಬಸ್‌ತಂಗುದಾಣ ಸಮೀಪವಿರುವ ಹಳೆಯ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಹೆಬ್ರಿ ತಾಲೂಕು ಕಚೇರಿಗೆ  ಆಗಿನ  ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದ್ದು ಈಗ ಅದು ಕೇವಲ ಬೋರ್ಡ್‌ಗೆ ಮಾತ್ರ ಸೀಮಿತವಾಗಿದೆ.

ಹೆಬ್ರಿ ಹೊಸ ತಾಲೂಕಿಗೆ ಕಾರ್ಕಳ ತಾಲೂಕಿನಲ್ಲಿದ್ದ ಬೇಳಂಜೆ, ಕುಚ್ಚಾರು, ಹೆಬ್ರಿ, ಚಾರ, ಶಿವಪುರ, ಕೆರೆಬೆಟ್ಟು, ಮುದ್ರಾಡಿ, ಕಬ್ಬಿನಾಲೆ, , ವರಂಗ, ಪಡುಕುಡೂರು, ಅಂಡಾರು ಹಾಗೂ ಕುಂದಾಪುರ ತಾಲೂಕಿನ ಬೆಳ್ವೆ, ಅಲಾºಡಿ, ಶೇಡಿಮನೆ, ಮಡಾಮಕ್ಕಿ ಸೇರಿದಂತೆ 46,663 ಜನಸಂಖ್ಯೆಯನ್ನು ಒಳಗೊಂಡ 16ಗ್ರಾಮಗಳು ಒಳಗೊಂಡಿದೆ.

ಕಾರ್ಕಳಕ್ಕೆ ಅಲೆದಾಟ
ಪಹಣಿ ಪತ್ರಕ್ಕಾಗಿ ಮೇಗದ್ದೆ, ಕೂಡ್ಲುವಿನಂತಹ  ತೀರಾ ಹಳ್ಳಿ  ಪ್ರದೇಶಗಳಿಂದ ನಡೆದುಕೊಂಡೇ ಬರುವುದಲ್ಲದೇ, ಕೇವಲ ಪಹಣಿ ಪತ್ರಕ್ಕಾಗಿಯೇ ಕಾರ್ಕಳಕ್ಕೆ ಅಲೆದಾಡುವುದು  ಅನಿವಾರ್ಯವಾಗಿದೆ. ಹೆಬ್ರಿಯಲ್ಲಿ ನೆಮ್ಮದಿ ಕೇಂದ್ರದ ವ್ಯವಸ್ಥೆ ಇರುವುದಿಲ್ಲ. ಈಗ ಇಲ್ಲಿನ ಗ್ರಾಮ ಪಂಚಾಯತ್‌ಗಳಲ್ಲಿ ಕೂಡ ಪಹಣಿ ಪತ್ರ ಸಿಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ನಾಡಕಚೇರಿ ಕೂಡ ಇಲ್ಲ 
ತಾಲೂಕು ಕಚೇರಿ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲು ಚುನಾವಣೆ ಸಮಯವಾದ್ದರಿಂದ ಕೊನೆಗೆ ನಾಡಕಚೇರಿಯನ್ನಾದರೂ ತೆರೆಯ ಬಹುದಿತ್ತು ಎಂಬವುದು ಸ್ಥಳೀಯರ ಅಭಿಪ್ರಾಯ. 

Advertisement

ಅಜೆಕಾರಿನಲ್ಲಿರುವ ನಾಡಕಚೇರಿ, ನೆಮ್ಮದಿ ಕೇಂದ್ರವನ್ನು ಹೆಬ್ರಿಗೆ  ಸ್ಥಳಾಂತರಿಸಿದರೆ ಇದರಿಂದ ಹೆಬ್ರಿ ತಾಲೂಕಿನ ಜನರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಹೆಬ್ರಿಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ದೂರ ದೂರ ಪ್ರಯಾಣಿಸಬೇಕಾಗಿರುವುದರಿಂದ ಎಲ್ಲಾ ವ್ಯವಸ್ಥೆಗಳನ್ನು ಹೆಬ್ರಿ ತಾಲೂಕಿನಲ್ಲಿ ಸಿಗುವಂತಹ ವ್ಯವಸ್ಥೆಯನ್ನು ಈ ಕೂಡಲೇ ಸರಕಾರ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಾರದ ಗಡು; ಉಗ್ರ ಪ್ರತಿಭಟನೆ
ಹೆಬ್ರಿ ತಾಲೂಕು ಘೋಷಣೆ ಮಾಡಿದ ಸಂದರ್ಭದಲ್ಲಿ ಚುನಾವಣೆ ಬಂದ ಕಾರಣ ನಾವು ಸುಮ್ಮನೆ ಇದ್ದೆವು. ಚುನಾವಣೆ ಮುಗಿದರೂ ಇನ್ನೂ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಬೇಸರ ತಂದಿದೆ. ಇನ್ನಾದರೂ ಒಂದು ವಾರದೊಳಗೆ ತಾಲೂಕು ಕಚೇರಿ ಕೆಲಸ ಆರಂಭವಾಗದಿದ್ದಲ್ಲಿ  ತಾಲೂಕು ಕಚೇರಿಯ ಎದುರುಗಡೆ ಉಗ್ರ ಪ್ರತಿಭಟನೆ ಮಾಡಬೇಕಾಗುವುದು ಎಂದು ಪ್ರಗತಿಪರ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ
ಹೆಬ್ರಿ ತಾ| ಕಚೇರಿ ಇನ್ನೂ ಕಾರ್ಯಾರಂಭಿಸದ ಬಗ್ಗೆ ಆಕ್ರೋಶ ಗೊಂಡ ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ  ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು ಪ್ರತಿಯನ್ನು ಕಂದಾಯ ಮಂತ್ರಿ, ಮುಖ್ಯಮಂತ್ರಿ, ಕಾರ್ಕಳ ಶಾಸಕರು ಹಾಗೂ ತಹಶೀಲ್ದಾರ್‌ ಅವರಿಗೆ ನೀಡಿದ್ದಾರೆ. ಚಾರಗ್ರಾಮದ 159/3ಎ ರಲ್ಲಿ 11.35 ಎಕ್ರೆ ಸರಕಾರಿ ಜಾಗ ಲಭ್ಯವಿದ್ದು ಕಾದಿರಿಸಿದ ಸ್ಥಳದಲ್ಲಿ ತಾಲೂಕು ಕಚೇರಿಯಾಗಬೇಕು. ಈಗ ಇರುವ ತಾಲೂಕು ಕಚೇರಿ ಕಟ್ಟಡದಲ್ಲಿ ಅಗತ್ಯ ಸೌಲಭ್ಯ ಗಳನ್ನು ಒದಗಿಸಬೇಕು ಎಂದು ಸಂಜೀವ ಶೆಟ್ಟಿ ಆಗ್ರಹಿಸಿದ್ದಾರೆ.

ಸಂಪೂರ್ಣ ಬೆಂಬಲ
ಹೆಬ್ರಿ ತಾಲೂಕು ಘೋಷಣೆಯಾಗುದರ ಮೂಲಕ ಈ ಭಾಗದ ಜನರ ಗ‌ಗ‌ನ ಕುಸಮವಾಗಿದ್ದ ಹೆಬ್ರಿ ತಾಲೂಕು ರಚನೆಯ ಕನಸು ನನಸಾಗಿದೆ. ಆದರೆ ಇನ್ನೂ ತಾಲೂಕು ಕಚೇರಿ ಕೆಲಸಗಳು ಆರಂಭಗೊಂಡಿರುವುದು ಬೇಸರ ತಂದಿದೆ. ಇನ್ನದರೂ ಆದಷ್ಟು ಶೀಘ್ರ ಅನುದಾನ ಬಿಡುಗಡೆಗೊಂಡು ಪೂರ್ಣ ಪ್ರಮಾಣದ ತಾಲೂಕು ಆಗಲೇ ಬೇಕು ಇಲ್ಲದಿದ್ದಲ್ಲಿ ಈಗಾಗಲೇ ಹೋರಾಟಕ್ಕೆ ಇಳಿದ ನಾಗರಿಕ ಸೇವಾ ಸಮಿತಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು.
ಎಚ್‌ ಭಾಸ್ಕರ್‌ ಜೋಯಿಸ್‌,
ಹೆಬ್ರಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರು

– ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next