ಮಡಿಕೇರಿ: ಮನೆಯ ಸುತ್ತಲೂ ಗುಡ್ಡ ಕುಸಿದಿದೆ, ಸಂಪರ್ಕ ರಸ್ತೆಗಳು ಕಡಿತವಾಗಿದೆ, ಪೊಲೀಸರ ಸಹಿತ ಯಾರಿಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ಪಣತೊಟ್ಟು ಮನೆಬಿಟ್ಟು ತೋಟದ ದಾರಿಯಲ್ಲೇ ನಡೆದು ಜೀವ ಉಳಿಸಿಕೊಂಡೆವು.
ಇದು ಹಾಲೇರಿ ಸುತ್ತಮುತ್ತಲಿನ ನಿವಾಸಿಗಳು ಬದುಕುಳಿದ ಕಥೆ.
ನಮ್ಮನ್ನು ಯಾರೂ ರಕ್ಷಿಸಿಲ್ಲ. ನಮ್ಮನ್ನು ನಾವೇ ರಕ್ಷಿಸಿಕೊಂಡಿದ್ದೇವೆ. ಸುಂಟಿಕೊಪ್ಪದ ಗ್ರಾಮಸ್ಥರು ನಮ್ಮನ್ನು ರಕ್ಷಿಸಿದ್ದಾರೆ. ನಮ್ಮ ಮನೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿರಲಿಕ್ಕಿಲ್ಲ. ಆದರೆ, ಜಮೀನು ಸಂಪೂರ್ಣ ನಾಶವಾಗಿದೆ. ಗುಡ್ಡ ಕುಸಿದು ಜಮೀನನ ಮೇಲೆ ಬಿದ್ದಿದೆ. ಹಾಲೇರಿ ಸುತ್ತಮುತ್ತಲು ಸುಮಾರು 300 ಮನೆಯಲ್ಲಿ 700 ರಿಂದ 800 ಜನ ವಾಸವಾಗಿದ್ದೆವು. ಇನ್ಮುಂದೆ ಅಲ್ಲಿ ವಾಸ ಮಾಡುವುದು ಕಷ್ಟ. ಸರ್ಕಾರವೇ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ಯುವಕ ಹರೀಶ್ ನೋವು ತೋಡಿಕೊಂಡರು.
ಕಳೆದ ಬುಧವಾರ ಮಧ್ಯಾಹ್ನ ವೇಳೆಗೆ ಗುಡ್ಡ ಕುಸಿಯುತ್ತಿರುವುದು ಕಂಡು ಬಂದಿತ್ತು. ಅಷ್ಟೋತ್ತಿಗೆ ನಮ್ಮ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಕಡಿತವಾಗಿತ್ತು. ಎಲ್ಲರೂ ಮನೆ ಬಿಟ್ಟು ಸಮೀಪದ ಶಾಲೆ ಹಾಗೂ ಸಹಕಾರಿ ಸಂಘದ ಸಭಾಂಗಣದಲ್ಲಿ ಬಂದು ಸೇರಿದ್ದೆವು. ಬುಧವಾರ ಸಂಜೆಯಿಂದ ಪೊಲೀಸರು, ಜಿಲ್ಲಾಡಳಿತ ಸೇರಿದಂತೆ ಅನೇಕರಿಗೆ ಕರೆ ಮಾಡಿದೆವು ಯಾರೂ ಸ್ಪಂದಿಸಿಲ್ಲ. ರಾತ್ರಿಪೂರ್ತಿ ಮನೆ ಬಿಟ್ಟು ಶಾಲೆಯ ಆವರಣದಲ್ಲಿ ಭಯದಲ್ಲೇ ಕಳೆದಿದ್ದೆವು. ವಿದ್ಯುತ್ ಇಲ್ಲದೇ ಟೈರ್‌ಗೆ ಬಿಂಕಿ ಹಾಕಿಕೊಂಡು ಜಾಗರಣೆ ಮಾಡಿದ್ದೆವು ಎಂದು ವಿವರಿಸಿದರು.ನಮ್ಮ ಕಷ್ಟಕ್ಕೆ ಇನ್ನು ಯಾರು ಬರುವುದಿಲ್ಲ ಎಂದು ಭಾವಿಸಿ ನಾವೇ ರಕ್ಷಿಸಿಕೊಳ್ಳಬೇಕು ಎಂದು ಪಣತೊಟ್ಟು 30-35 ಯುವಕರು ಒಟ್ಟಾಗಿ ಮೊದಲಿಗೆ 200-250 ಮಹಿಳೆಯನ್ನು ಸುರಕ್ಷಿತ ಜಾಗಕ್ಕೆ ತಲುಪಿಸಿದೆವು. ಅವರ ಜತೆಗೆ 70ರಿಂದ80 ಮಕ್ಕಳಿದ್ದರು. ಅವರನ್ನು ಸುರಕ್ಷಿತ ಪ್ರದೇಶಕ್ಕೆ ತಲುಸಿದ ನಂತರವೇ ನಾವೆಲ್ಲರೂ ಒಟ್ಟಾಗಿ ಮನೆ ಖಾಲಿ ಮಾಡಿದೆವು. ಈಗ ನಾವೆಲ್ಲರೂ ಸುರಕ್ಷಿತವಾಗಿ ಸುಂಟಿಕೊಪ್ಪದ ವಿವಿಧ ನಿರಾಶ್ರಿತರ ಶಿಬಿರದಲ್ಲಿದ್ದೇವೆ ಎಂದು ಹಾಲೇರಿ ರವಿ, ಮೊಹ್ಮದ್ ಸೀರಾಜ್ ಮಾಹಿತಿ ನೀಡಿದರು.
ಶವಪತ್ತೆ :
ಕಾಟೆYàರಿಯಲ್ಲಿ ಗುಡ್ಡಿ ಕುಸಿತಕ್ಕೆ ಸಿಲುಕಿದ್ದ ಪವನ್(36) ಎಂಬುವರ ಶವವನ್ನು ಬುಧವಾರ ಮಧ್ಯಾಹ್ನ ಪತ್ತೆ ಹಚ್ಚಲಾಗಿದೆ. ಕಳೆದ ಎಳು ದಿನಗಳಿಂದ ಮಣ್ಣಿನ ಅಡಿಯಲ್ಲೇ ಇದ್ದ ಶವನ್ನು ಎನ್‌ಡಿಆರ್‌ಎಫ್ ಹಾಗೂ ಸೇವಾಭಾರತಿ ತಂಡದ ಜಂಟಿ ಕಾರ್ಯಚರಣೆ ನಡೆಸಿ ನೂರು ನೂರೈವತ್ತು ಅಡಿ ಆಳದಲ್ಲಿದ್ದ ಶವವನ್ನು ಮೇಲೇತ್ತಿದ್ದಾರೆ. ಗುಡ್ಡ ಕುಸಿತದ ಸಂದರ್ಭದಲ್ಲಿ ಮನೆಯಿಂದ ಆಚೆ ಬರುವಾಗ ಮಣ್ಣೊಳಗೆ ಸಿಲುಕಿಕೊಂಡಿದ್ದ ಪವನ್ ಇಷ್ಟು ದಿನವಾದರೂ ಸಿಕ್ಕಿರಲಿಲ್ಲ. ಅವರ ಪತ್ನಿ ಹಾಗೂ ಪುಟ್ಟ ಮಗು ನಿರಾಶ್ರಿತರ ಕೇಂದ್ರದಲ್ಲಿದ್ದಾರೆ.