ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಚುನಾವಣೆ ಮಾಡುವುದು ಬೇಡ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿರ್ಧಾರವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದೇವೆಂದು ಕೈಗಾಗರಿಕೆ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಚುನಾವಣೆ ಆಯೋಗಕ್ಕೆ ಕಳುಹಿಸಲಾಗಿದೆ. ಹೀಗಾಗಿ ಮುಂದಿನ ಆರು ತಿಂಗಳವರೆಗೆ ಯಾವುದೇ ಚುನಾವಣೆ ನಡೆಯುವುದಿಲ್ಲ ಎನ್ನುವ ನಿರೀಕ್ಷೆಯಿದೆ. ಚುನಾವಣೆ ಕುರಿತು ಹೈಕೋರ್ಟ್ ಮಧ್ಯಪ್ರವೇಶ ಮಾಡಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರೆ ಅದನ್ನು ಪರಿಗಣಿಸುವ ಸಾಧ್ಯತೆಗಳಿವೆ ಎಂದರು.
ನಗರದಲ್ಲಿ ಇನ್ಫೋಸಿಸ್ ಕಂಪನಿ ತನ್ನ ಕಾರ್ಯಾರಂಭ ಮಾಡುವಂತೆ ಈಗಾಗಲೇ ಕಂಪನಿಯ ನಿರ್ದೇಶಕರನ್ನು ಕರೆದು ಮಾತನಾಡಿದ್ದೇನೆ. ಇಲ್ಲಿ ಉದ್ಯೋಗ ಸೃಷ್ಟಿಸಲು ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಸುಮಾರು 5 ಸಾವಿರ ಜನರಿಗೆ ಉದ್ಯೋಗ ನೀಡುವ ಚಿಂತನೆಯಲ್ಲಿ ಇದ್ದಾರೆ. ಆದರೆ ಅವರ ಗ್ರಾಹಕರು ಬೆಂಗಳೂರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರುವುದರಿಂದ ಇಲ್ಲಿ ಆರಂಭವಾಗುವುದಕ್ಕೆ ವಿಳಂಬವಾಗುತ್ತಿದೆ. ಒಂದಿಷ್ಟು ವ್ಯವಹಾರ ವೃದ್ಧಿಸಿದರೆ ನಗರದಲ್ಲಿ ಆರಂಭಿಸುವ ಭರವಸೆ ನೀಡಿದ್ದಾರೆ. ಇನ್ಫೋಸಿಸ್ ಆರಂಭವಾದರೆ ಇನ್ನಷ್ಟು ಐಟಿ ಕಂಪನಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಬಿಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಸೋಂಕು ಸಂಪೂರ್ಣ ಹೋಗಿಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ ಕಾಪಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಜನರು ಮರೆಯಬಾರದು. ಜನರು ಜಾಗರೂಕತೆಯಿಂದ ಇದ್ದಷ್ಟು ಆರೋಗ್ಯದಿಂದ ಇರಲು ಸಾಧ್ಯ. ಈ ನಿಯಮಗಳನ್ನು ಪಾಲಿಸಿದರೆ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದರು.