ಮೈಸೂರು: ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಬೇಕು ಎಂದು ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಡೀಸಿ ಅಭಿರಾಮ್ ಜಿ.ಶಂಕರ್ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಗುಲ ತೆರೆಯುವ ವಿಚಾರ ಮಾಧ್ಯಮದಿಂದ ಮಾತ್ರ ತಿಳಿದಿದೆ. ದೇವಸ್ಥಾನಗಳ ಬಾಗಿಲು ತೆರೆಯುವ ವಿಚಾರವಾಗಿ ಜಿಲ್ಲಾಡಳಿತಕ್ಕೆ ಸರ್ಕಾರದಿಂದ ಯಾವುದೇ ಅಧಿಕೃತ ಲಿಖೀತ ಆದೇಶ ಬಂದಿಲ್ಲ.
ಮುಜರಾಯಿ ಇಲಾಖೆ ಸಚಿವರ ಹೇಳಿಕೆಯನ್ನ ಮಾಧ್ಯಮದಲ್ಲಷ್ಟೆ ನೋಡಿದ್ದೇನೆ. ಮೇ 31ರ ನಂತರ ಕೇಂದ್ರದ ಆದೇಶ ಏನೆಂದು ನೋಡಬೇಕಿದೆ. ಸರ್ಕಾರಗಳ ಮಾರ್ಗಸೂಚಿ ಬಳಿಕವಷ್ಟೆ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.
ಕೊರೊನಾ ಮಾರ್ಗಸೂಚಿ: ಕೊರೊನಾ ಹಿನ್ನೆಲೆ ರೆಡ್, ಆರೆಂಜ್, ಗ್ರೀನ್ ಝೋನ್ ಎಂಬ ಪದತಿ ಸದ್ಯಕ್ಕಿಲ್ಲ. ಕಂಟೇನ್ಮೆಂಟ್ ಝೋನ್ ನಿರ್ವಹಿಸಲಿಕ್ಕಷ್ಟೇ ಮಾರ್ಗಸೂಚಿ ನೀಡಲಾಗಿದೆ. ಕಂಟೇನ್ಮೆಂಟ್ ಝೋನ್‌ಗಳಲ್ಲೂ ಕೆಲ ಸಡಿಲಿಕೆ ಮಾಡಲಾಗಿದೆ. ಪೂರ್ತಿ ಏರಿಯಾ, ಗ್ರಾಮ ಗಳ ಬದಲು, ಸಂಬಂಧಿಸಿದ ಮನೆ ಮತ್ತು ಬೀದಿಯನ್ನು ಮಾತ್ರ ನಿರ್ಬಂಧಿತ ಪ್ರದೇಶ ಮಾಡುತ್ತಿದ್ದೇವೆ. ಹಾಗಾಗಿ ಸದ್ಯ ಮೈಸೂರಿಗೆ ರೆಡ್‌ಝೋನ್‌ನ ನಿರ್ಬಂಧವಿಲ್ಲ ಎಂದು ಹೇಳಿದರು.
ಸರ್ಕಾರದಿಂದ ಪ್ರಯಾಣದ ವೆಚ್ಚ: ಸದ್ಯಕ್ಕೆ ಮೈಸೂರಿ ನಿಂದ ಉತ್ತರಪ್ರದೇಶ, ಬಿಹಾರ್, ಜಾಖಂìಡ್‌ನ ನಿವಾಸಿ ಗಳನ್ನು 4 ರೈಲುಗಳ ಮೂಲಕ ಕಳುಹಿಸಲಾಗಿದೆ. ಕೊನೆಯ 2 ರೈಲುಗಳಿಗೆ ಸರ್ಕಾರವೇ ಪ್ರಯಾಣದ ವೆಚ್ಚ ಭರಿ ಸಿದೆ. ನಾಗಲ್ಯಾಂಡ್, ಮಣಿಪುರ, ಮಧ್ಯಪ್ರದೇಶ ಇತರೆ ರಾಜ್ಯಗಳಿಗೆ ಹೋಗುವ ಕಾರ್ಮಿಕರಿಗೆ ಬೆಂಗಳೂರಿನವರೆಗೆ ಬಸ್ ಮೂಲಕ ಕಳುಹಿಸಲಾಗುತ್ತಿದೆ.
ಬೆಂಗಳೂರಿನಿಂದ ರೈಲು ಮೂಲಕ ತೆರಳಿದ್ದಾರೆ. ಮೇ 28ರಂದು ಮೈಸೂರಿನಿಂದ 53 ಜನ ನಾಗಾಲ್ಯಾಂಡ್‌ಗೆ ಹೊರಡಿದ್ದು, ಇವರಿಗೆ ನಗರದ ಬನ್ನಿಮಂಟಪದಿಂದ ಬೆಂಗಳೂರಿನವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಒನ್ ಪ್ರಾರಂಭ: ಕಳೆದ 2 ತಿಂಗಳುಗಳಿಂದ ಸ್ಥಗಿತಗೊಳಿಸಿದ್ದ ನಗರದ ಕರ್ನಾಟಕ ಒನ್ ಕೇಂದ್ರಗಳನ್ನು ಮತ್ತೆ ಪ್ರಾರಂಭಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕಚೇರಿ ತೆರೆದಿದ್ದು, ಆಸ್ತಿ ಕರ, ವಿದ್ಯುತ್ ಬಿಲ್, ನೀರಿನ ಬಿಲ್, ಸಬ್ಸಿಡಿಯಲ್ಲಿ ಎಲ್‌ಇಡಿ ಬಲ್ಬ್ ಗಳು ಹಾಗೂ ಇತರೆ ಅಗತ್ಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ಕ್ರಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಡೀಸಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.