ಒಂದೂರಿನಲ್ಲಿ ಒಬ್ಬ ಸಣ್ಣ ಹುಡುಗನಿದ್ದ. ಅವನಿಗೆ ತಾಳ್ಮೆ ಎಂಬ ಪದದ ಅರ್ಥವೇ ಗೊತ್ತಿರಲಿಲ್ಲ. ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುತ್ತಿದ್ದ, ಮನೆಯವರೊಂದಿಗೆ ಜಗಳವಾಡುತ್ತಿದ್ದ. ಇನ್ನೂ ಚಿಕ್ಕವನಲ್ಲವೆ, ಸ್ವಲ್ಪ ದೊಡ್ಡವನಾದ ಮೇಲೆ ಸರಿ ಹೋಗುತ್ತಾನೆ ಎಂದು ಮನೆಯವರು ಅಂದುಕೊಂಡಿದ್ದರು. ಅವನು ಕೂಡ ಎಲ್ಲರಂತೆ ಶಾಲೆಗೆ ಸೇರಿದ. ಆದರೆ, ಆ ಹುಡುಗನ ಸಿಟ್ಟೇನೂ ಕಡಿಮೆಯಾಗಲಿಲ್ಲ. ಶಾಲೆಯಲ್ಲಿ ಸಹಪಾಠಿಗಳೊಂದಿಗೆ ದಿನವೂ ಜಗಳವಾಡುತ್ತಿದ್ದ. ಶಿಕ್ಷಕರ ಮೇಲೂ ಸಿಡಿಮಿಡಿಗೊಳ್ಳುತ್ತಿದ್ದ. ಪ್ರತಿದಿನವೂ ಜಗಳ ಮಾಡಿಕೊಂಡೇ ಮನೆಗೆ ಬರುತ್ತಿದ್ದ. ತರಗತಿಯಲ್ಲಿ ಯಾರಿಗೂ ಅವನನ್ನು ಕಂಡರೆ ಇಷ್ಟವಾಗುತ್ತಿರಲಿಲ್ಲ.
ಹುಡುಗನ ತಂದೆ ಅವನ ನಡವಳಿಕೆಯನ್ನು ಬದಲಾಯಿಸಲೇಬೇಕು ಎಂದು ನಿರ್ಧರಿಸಿದರು. ಒಂದು ದಿನ ಅವನನ್ನು ಕರೆದು ಒಂದು ಚೀಲದ ತುಂಬ ಮೊಳೆಯನ್ನು ಕೊಟ್ಟು, “ನೋಡು ಪುಟ್ಟಾ, ಪ್ರತಿ ಬಾರಿ ನಿನಗೆ ಕೋಪ ಬಂದಾಗಲೂ, ಯಾರನ್ನಾದರೂ ಬಯ್ಯಬೇಕೆಂದು ಅನ್ನಿಸಿದಾಗಲೂ ಒಂದು ಮೊಳೆ ತೆಗೆದುಕೊಂಡು ಬೇಲಿಗೂಟಕ್ಕೆ ಮೊಳೆ ಹೊಡೆಯಬೇಕು’ ಎಂದರು. ಹುಡುಗನೂ ಅಪ್ಪನ ಮಾತಿಗೆ ಒಪ್ಪಿಕೊಂಡ. ಮೊದಲ ದಿನ ಅವನು ಬೇಲಿಯ ಮೇಲೆ 37 ಮೊಳೆಗಳನ್ನು ಹೊಡೆದ. ಎರಡನೆಯ ದಿನ ಅದು 20ಕ್ಕೆ ಇಳಿಯಿತು. ದಿನದಿಂದ ದಿನಕ್ಕೆ ಮೊಳೆಗಳ ಸಂಖ್ಯೆ ಕಡಿಮೆಯಾಯಿತು. ಕೋಪ ಬಂದಾಗ ಮೊಳೆ ಹೊಡೆಯುವುದಕ್ಕಿಂತ, ಸಿಟ್ಟನ್ನು ನಿಯಂತ್ರಿಸಿಕೊಳ್ಳುವುದೇ ಸುಲಭ ಎಂದು ಹುಡುಗನಿಗೆ ಅನ್ನಿಸಿತು. ವಾರಗಳ ನಂತರ, ಕೊನೆಗೂ ಒಂದು ದಿನ ಹುಡುಗ ಒಂದೇ ಒಂದು ಮೊಳೆಯನ್ನೂ ಹೊಡೆಯಲಿಲ್ಲ. ಖುಷಿಯಿಂದ ಅಪ್ಪನನ್ನು ಕರೆದು ಹೇಳಿದ, “ಅಪ್ಪಾ ನಾನಿವತ್ತು ಒಮ್ಮೆಯೂ, ಯಾರ ಮೇಲೂ ಕೋಪಿಸಿಕೊಳ್ಳಲಿಲ್ಲ ಗೊತ್ತಾ’. ಆಗ ತಂದೆ, “ತುಂಬಾ ಸಂತೋಷ. ಇನ್ಮೆàಲೆ ಬೇಲಿಯ ಮೇಲಿಂದ ದಿನವೂ ಒಂದೊಂದು ಮೊಳೆಯನ್ನು ಕೀಳುತ್ತಾ ಬಾ’ ಎಂದರು. ಹುಡಗನಿಗೆ ಅಪ್ಪನ ಮಾತು ವಿಚಿತ್ರವೆನಿಸಿತು. ಆದರೂ ಮರುಮಾತಾಡದೆ ಒಪ್ಪಿಕೊಂಡ.
ಬೇಲಿಯ ಮೇಲಿದ್ದ ಎಲ್ಲ ಮೊಳೆಗಳನ್ನೂ ಹುಡುಗ ಕಿತ್ತು ತೆಗೆದ. ಅಪ್ಪನನ್ನು ಕರೆದು, ತೂತು ಬಿದ್ದಿದ್ದ ಬೇಲಿಯನ್ನು ತೋರಿಸಿದ. ಆತನ ತಲೆಯನ್ನು ನೇವರಿಸುತ್ತಾ, ಅಪ್ಪ , “ಮಗೂ, ನೀನು ಹೊಡೆದ ಮೊಳೆಯನ್ನೆಲ್ಲ ಕಿತ್ತು ತೆಗೆದಿದ್ದೀಯ. ಆದರೆ, ಬೇಲಿಯನ್ನು ನೋಡು. ಎಷ್ಟೊಂದು ತೂತುಗಳು ಬಿದ್ದಿವೆ. ಇದನ್ನು ಮೊದಲಿನಂತೆ ಮಾಡಲು ನಿನಗೆ ಸಾಧ್ಯವೇ?’ ಅಂತ ಕೇಳಿದರು. ಅದಕ್ಕೆ ಮಗ ಇಲ್ಲ ಎಂದು ತಲೆ ಅಲ್ಲಾಡಿಸಿದ.
“ನೀನು ಪ್ರತಿ ಬಾರಿ ಕೋಪಿಸಿಕೊಂಡು ಇನ್ನೊಬ್ಬರಿಗೆ ಬೈಯ್ದಾಗ, ಅವರ ಮನಸ್ಸಿನ ಮೇಲೆ ಇಂಥದ್ದೇ ಗಾಯವಾಗುತ್ತದೆ. ಆಮೇಲೆ ನೀನು ಎಷ್ಟು ಬಾರಿ ಕ್ಷಮಿಸುವಂತೆ ಕೇಳಿಕೊಂಡರೂ ಮನಸ್ಸಿನ ಮೇಲಾದ ಗಾಯ ಮಾಸುವುದಿಲ್ಲ. ಇನ್ನೊಬ್ಬರ ಮನಸ್ಸಿನ ಮೇಲೆ ಮೊಳೆ ಹೊಡೆಯುವ ಮುನ್ನ ನೂರು ಸಲ ಯೋಚಿಸಬೇಕು’ ಎಂದರು ಅಪ್ಪ. ಅದನ್ನು ಕೇಳಿದ ಹುಡುಗನಿಗೆ ತನ್ನ ತಪ್ಪಿನ ಅರಿವಾಯ್ತು. ಮುಂದೆ ಯಾರ ಮನಸ್ಸನ್ನೂ ನೋಯಿಸುವುದಿಲ್ಲ, ಕೋಪ ಬಂದಾಗ ವಿವೇಕದಿಂದ ನಡೆದುಕೊಳ್ಳುತ್ತೇನೆ ಎಂದು ಹುಡುಗ ಅಪ್ಪನಿಗೆ ಮಾತು ಕೊಟ್ಟ.
ನಯನಾ ಯು.