Advertisement

ಅಲ್ಲೊಬ್ಬ ಕೌರವ, ಇಲ್ಲೊಬ್ಬ ಮರು ಕೌರವ, ಮಹೇಂದ್ರಜಾಲ!

03:45 AM Jan 13, 2017 | Team Udayavani |

“ಆ ಕೌರವಗೂ ಈ ಕೌರವಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ಮಾಡಿದ ಕಥೆ ಹಾಗೆಯೇ ಇದೆ. ಇದು ಬೇರೆಯದ್ದೇ ಕಥೆ …’

Advertisement

– ನಿರ್ದೇಶಕ ಮಹೇಂದರ್‌ ಹೀಗೆ ಹೇಳಲು ಕಾರಣ “ಒನ್ಸ್‌ ಮೋರ್‌ ಕೌರವ’. ಇದು ಮಹೇಂದರ್‌ ನಿರ್ದೇಶನದ ಸಿನಿಮಾ. ಈ ಹಿಂದೆ  ಬಿ.ಸಿ.ಪಾಟೀಲ್‌ ಅವರಿಗೆ “ಕೌರವ’ ಎಂಬ ಸಿನಿಮಾ ನಿರ್ದೇಶಿಸಿದ್ದ ಮಹೇಂದರ್‌ ಈಗ ನರೇಶ್‌ ಎನ್ನುವವರಿಗೆ “ಒನ್ಸ್‌ ಮೋರ್‌ ಕೌರವ’ ಮಾಡುತ್ತಿದ್ದಾರೆ. ಅಷ್ಟಕ್ಕೂ “ಒನ್ಸ್‌ ಮೋರ್‌ ಕೌರವ’ ಚಿತ್ರವನ್ನು ಬಿ.ಸಿ.ಪಾಟೀಲ್‌ ಅವರಿಗೆ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಮಹೇಂದರ್‌ ಉತ್ತರಿಸಿದ್ದಾರೆ. “ಕೌರವ ನಂತರ ಬಿ.ಸಿ.ಪಾಟೀಲ್‌ ಅವರಿಗೆ ಮತ್ತೂಂದು ಸಿನಿಮಾ ಮಾಡಬೇಕೆಂದು ಕಥೆ ರೆಡಿಮಾಡಿಕೊಂಡು ಹೋದೆ. ಕಥೆ ಕೇಳಿದ ಅವರು ಒಂದಷ್ಟು ಕರೆಕ್ಷನ್ಸ್‌ ಹೇಳಿದರು. ಕೊನೆಗೆ ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ. ಆದರೆ, ಆ ಕಥೆ ಇವತ್ತಿಗೂ ಹಾಗೇ ಇದೆ. ಅದನ್ನು ನಾಳೆ ಬೇಕಾದರೂ ಮಾಡಬಹುದು. “ಒನ್ಸ್‌ ಮೋರ್‌ ಕೌರವ’ದ ಕಥೆಯೇ ಬೇರೆ. ಈ ಚಿತ್ರದಲ್ಲೂ ಬಿ.ಸಿ.ಪಾಟೀಲ್‌ ಅವರಲ್ಲಿ ಒಂದು ಪಾತ್ರ ಮಾಡುವಂತೆ ಕೇಳಿದೆವು. ಆದರೆ, ಅದು ಕೂಡಾ ಕಾರಣಾಂತರಗಳಿಂದ ಆಗಲಿಲ್ಲ. ಕೊನೆಗೆ ಅವರು ಮಾಡಬೇಕಾಗಿದ್ದ ಪಾತ್ರವನ್ನು ಬೇರೆಯವರಿಂದ ಮಾಡಿಸಿದೆವು. ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ, ಬಿ.ಸಿ.ಪಾಟೀಲ್‌ ಅವರಿಗೆ ಮಾಡಿದ ಕಥೆ ಹಾಗೆಯೇ ಇದೆ. ಇದು “ಕೌರವ’ದ ಒನ್‌ಲೈನ್‌ ಇಟ್ಟುಕೊಂಡು ಸಿದ್ಧಪಡಿಸಿದ ಕಥೆ. ಅದು ಬಿಟ್ಟರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು “ಕೌರವ’ನ ಕುರಿತು ದೀರ್ಘ‌ ವಿವರಣೆ ಕೊಟ್ಟರು ಮಹೇಂದರ್‌. 

“ಒನ್ಸ್‌ ಮೋರ್‌ ಕೌರವ’ ಸಿನಿಮಾದ ಕತೆ ಹಳ್ಳಿಯಲ್ಲಿ ನಡೆಯುತ್ತಿದ್ದು, ಹಳ್ಳಿಗೆ ಬರುವ ಇನ್ಸ್‌ಪೆಕ್ಟರ್‌ ಆ ಹಳ್ಳಿಯನ್ನು ಹೇಗೆ ಉದ್ಧಾರ ಮಾಡುತ್ತಾನೆ ಮತ್ತು ಆ ಸಂದರ್ಭದಲ್ಲಿ ಅವನಿಗೆ ಸಿಗುವ ಬೆಂಬಲ ಹಾಗೂ ಎದುರಾಗುವ ತೊಂದರೆಗಳ ಸುತ್ತ ಈ ಸಿನಿಮಾ ಸಾಗಲಿದೆಯಂತೆ. ಚಿತ್ರದಲ್ಲಿ ಹಿರಿಯ ನಟರ ಜೊತೆ ರಂಗಭೂಮಿಯ ಅನೇಕ ನಟರನ್ನು ಬಳಸಿಕೊಳ್ಳಲಾಗಿದೆಯಂತೆ. ಈ ಚಿತ್ರವನ್ನು ನರೇಶ್‌ ಅವರು ನಿರ್ಮಿಸುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಕಥೆ ಇಷ್ಟವಾದ ಕಾರಣ ತಾನೇ ನಿರ್ಮಿಸಿದ್ದಾಗಿ ಹೇಳಿಕೊಂಡರು ನರೇಶ್‌.

ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಮೂರು ವರ್ಷದ ಹಿಂದೆ ಮಹೇಂದರ್‌ ಈ ಕಥೆಯನ್ನು ಹೇಳಿದ್ದರಂತೆ. ಆ ನಂತರ ಇಬ್ಬರೂ ಕುಳಿತು ಕಥೆಗೆ ಅಂತಿಮ ರೂಪುರೇಷೆ ಕೊಟ್ಟಿದ್ದಾಗಿ ಹೇಳಿದರು ಮಧು. ಈ ಹಿಂದೆ ಮಹೇಂದರ್‌ ಜೊತೆ ಕೆಲಸ ಮಾಡಿದ ಸಿನಿಮಾಗಳು ತನಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು “ಒನ್ಸ್‌ ಮೋರ್‌ ಕೌರವ’ ಕೂಡಾ ಮೆಚ್ಚುಗೆಗೆ ಪಾತ್ರವಾಗುತ್ತದೆಂಬ ನಂಬಿಕೆ ಮಧು ಅವರಿಗಿದೆಯಂತಯಂತೆ. 

ಚಿತ್ರದಲ್ಲಿ ಅನುಷಾ ನಾಯಕಿಯಾಗಿ ನಟಿಸಿದ್ದು, ಬೋಲ್ಡ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರಕ್ಕೆ ಕೃಷ್ಣಕುಮಾರ್‌ ಅವರ ಛಾಯಾಗ್ರಹಣ, ಶ್ರೀಧರ್‌ ಸಂಭ್ರಮ್‌ ಅವರ ಸಂಗೀತವಿದೆ. ಚಿತ್ರದ ಎಲ್ಲಾ ಹಾಡುಗಳನ್ನು ಕೆ.ಕಲ್ಯಾಣ್‌ ಬರೆದಿದ್ದು, ಕಥೆಗೆ ಪೂರಕವಾಗಿದೆಯಂತೆ. ಮಾಲೂರು ಶ್ರೀನಿವಾಸ್‌ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next