Advertisement

ಪಠ್ಯ ರಚನೆಯಲ್ಲಿ ಸರ್ಕಾರದ ಹಸ್ತಕ್ಷೇಪ ಬೇಡ

04:05 PM Jun 07, 2022 | Team Udayavani |

ಬಳ್ಳಾರಿ: ಕೋಮು ವೈಷಮ್ಯ ಹರಡುವ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ವಿರೋಧಿಸಿ ನಗರದ ಹಳೆ ಬಸ್‌ ನಿಲ್ದಾಣದ ಎದುರು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು, ಜನಸಾಮಾನ್ಯರು ಸೋಮವಾರ ಪ್ರತಿಭಟಿಸಿದರು.

Advertisement

ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಮಹಾನ್‌ ವ್ಯಕ್ತಿಗಳ ಆಶಯ, ಮೌಲ್ಯ, ಘನತೆಯನ್ನು ಗಾಳಿಗೆ ತೂರುವ ಕೆಲಸ ಮಾಡಿದೆ. ತನ್ನ ಸಿದ್ಧಾಂತಕ್ಕೆ ಸರಿ ಹೊಂದುವ ಪಾಠವನ್ನು ಅಥವಾ ಅಂತಹ ವ್ಯಕ್ತಿಗಳ ಕುರಿತ ಲೇಖನವನ್ನು ಪ್ರಸ್ತುತ ವರ್ಷದ ಪಠ್ಯಕ್ರಮದಲ್ಲಿ ತುರುಕಿಸಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರವು ಶೈಕ್ಷಣಿಕ ಪಠ್ಯಕ್ರಮ ರಚನೆಯಲ್ಲಿ ಹಸ್ತಕ್ಷೇಪ ನಡೆಸಬಾರದು. ಇದು ನಮ್ಮ ಮೊದಲ ಆಕ್ಷೇಪ. ಈ ಕೂಡಲೇ ಸರ್ಕಾರ ಪಠ್ಯಕ್ರಮ ರಚನೆ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು. ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸದೇ ಬೆನ್ನು ತೋರಿಸಿ, ಜನತೆಯ ಐಕ್ಯತೆಗೆ ವಿರುದ್ಧವಾಗಿ ಕೋಮು ಭಾವನೆ ಹರಡಿದ ಕೆ.ಬಿ. ಹೆಡ್ಗೆವಾರ್‌ ಭಾಷಣದ ತುಣುಕನ್ನು “ಯಾರು ಆದರ್ಶ ಪುರುಷ’ ಎಂಬ ಶೀರ್ಷಿಕೆಯಡಿಯಲ್ಲಿ ತಂದಿದ್ದಾರೆ.

ಆದರೆ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಹೋರಾಟದ ಪ್ರಶ್ನಾತೀತ ನಾಯಕ ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಪಾಠವನ್ನು ತೆಗೆದು ಹಾಕಲಾಗಿದೆ. 7ನೇ ತರಗತಿಯ ಸಮಾಜ ವಿಜ್ಞಾನ ಪಾಠದಿಂದ ಸಾವಿತ್ರಿಬಾಯಿ ಫುಲೆ, ಕನಕದಾಸರು ಹಾಗೂ ಪುರಂದರದಾಸರ ಕುರಿತ ಪಾಠಗಳನ್ನು ತೆಗೆಯಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ಅಂಬೇಡ್ಕರ್‌ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆದಿರುವುದನ್ನು ತೆಗೆದು ಹಾಕಲಾಗಿದೆ. 7ನೇ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿ ಅಂಬೇಡ್ಕರ್‌ ಅವರು ಮುನ್ನಡೆಸಿದ್ದ ಮಹದ್‌ ಸತ್ಯಾಗ್ರಹ ಹಾಗೂ ನಾಸಿಕ್‌ನ ಕಲಾರಂ ದೇವಾಲಯ ಪ್ರವೇಶ ಕುರಿತ ಐತಿಹಾಸಿಕ ಹೋರಾಟಗಳ ಉಲ್ಲೇಖವನ್ನು ತೆಗೆಯಲಾಗಿದೆ. ಯಾಕೆ ಈ ಪಾಠಗಳನ್ನು ಕೈಬಿಡಲಾಗಿದೆ ಎಂಬುದಕ್ಕೆ ಸ್ಪಷ್ಟನೆ ದೊರೆತಿಲ್ಲ ಎಂದವರು ಆಗ್ರಹಿಸಿದ್ದಾರೆ.

ಈಗ ಹೋರಾಟಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಸರ್ಕಾರವು ಭಗತ್‌ ಸಿಂಗ್‌ ಪಾಠವನ್ನು ಮರು ಸೇರ್ಪಡೆ ಮಾಡಿದೆ. ಜನತೆಯ ಹೋರಾಟಕ್ಕೆ ಸರ್ಕಾರ ಮಣಿದಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ಬರೆದ ಪತ್ರದಲ್ಲಿ “ಆಕ್ಷೇಪಾರ್ಹ ವಿಷಯಗಳು ಇದ್ದಲ್ಲಿ ಮತ್ತೂಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ಸರ್ಕಾರ ಹೊಂದಿದೆ’ ಎಂದು ಬರೆದಿದ್ದಾರೆ. ಅಂದರೆ ಪಠ್ಯದಲ್ಲಿ ದೋಷಗಳು/ಸಮಸ್ಯೆಗಳು ಇದ್ದವು ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೆ ಆಕ್ಷೇಪಿತ ವಿಷಯಗಳಲ್ಲಿ ಯಾವುದು ಪರಿಷ್ಕರಣೆ ಆಗಲಿದೆ. ಯಾವ ಸಮಿತಿ ಇದನ್ನು ನಡೆಸುತ್ತದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಯಾವ ಪಠ್ಯ ಓದಬೇಕು. ಯಾವ ಮಹಾನ್‌ ವ್ಯಕ್ತಿಗಳ ಚಾರಿತ್ರ್ಯಕ್ಕೆ ಧಕ್ಕೆ ತರಲಾಗಿತ್ತು. ಅವುಗಳೆಲ್ಲವೂ ಪರಿಷ್ಕರಣೆ ಆಗುತ್ತದೆಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

Advertisement

ಎಐಡಿಎಸ್‌ಒ ಅಖಿಲ ಭಾರತ ಉಪಾಧ್ಯಕ್ಷ ಡಾ| ಪ್ರಮೋದ್‌, ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ್‌, ಜಿಲ್ಲಾ ಉಪಾಧ್ಯಕ್ಷೆ ಜೆ.ಸೌಮ್ಯ, ಕೆ.ಈರಣ್ಣ, ಎಂ.ಶಾಂತಿ, ನಿಂಗರಾಜ್‌, ಅನುಪಮಾ, ಸಿದ್ದು, ನಿಹಾರಿಕಾ, ಉಮಾದೇವಿ, ಪ್ರಮೋದ್‌, ಮೋಹನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next