Advertisement

ಕಾಮಗಾರಿ ಬಿಲ್‌ ಪಾವತಿ ವಿಳಂಬ ಬೇಡ

06:44 PM Jan 18, 2021 | Team Udayavani |

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ಕೈಗೊಂಡ 122 ಕಾಮಗಾರಿಗಳು ಮುಗಿದಿದ್ದರೂ ಅವುಗಳ ಆರ್ಥಿಕ ಪ್ರಗತಿ ಸಾ ಧಿಸಿರುವುದಿಲ್ಲ. ಕೂಡಲೇ ಬಿಲ್‌ ಪಾವತಿಗೆ ಕ್ರಮ ವಹಿಸುವಂತೆ ಜಿಲ್ಲಾ ಧಿಕಾರಿ ಆರ್‌. ವೆಂಕಟೇಶಕುಮಾರ್‌ ಸೂಚಿಸಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ವಿವಿಧ ಇಲಾಖೆಗಳ ವ್ಯಾಪ್ತಿಯಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿ ಯೊಳಗೆ ಮುಗಿಸುವುದಲ್ಲದೇ ಭೌತಿಕ ಹಾಗೂ ಆರ್ಥಿಕ ಪ್ರಗತಿ ಮಾಹಿತಿ ವೆಬ್‌ಸೈಟ್‌ ನಲ್ಲಿ ಅಪ್‌ಲೋಡ್‌ ಮಾಡಬೇಕು. ಕಾಮಗಾರಿ ಮುಗಿದ ಕೂಡಲೇ ವಿಳಂಬ ಮಾಡದೇ ಬಿಲ್‌ ಪಾವತಿಸಿ ಸಂಬಂ ಧಿಸಿದವರಿಗೆ ಕಾಮಗಾರಿ ಹಸ್ತಾಂತರಿಸಬೇಕು ಎಂದರು.

ಕೆಕೆಆರ್‌ಡಿಬಿ ಅನುದಾನದಡಿ ಈವರೆಗೆ ಜಿಲ್ಲೆಯಲ್ಲಿ ಆಗಿರುವ ಕಾಮಗಾರಿಗಳ ಪ್ರಗತಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಲಬುರಗಿ ಪ್ರಾದೇಶಿಕ ಆಯುಕ್ತರು ಪರಿಶೀಲನೆ ನಡೆಸಿ, ಕಾಮಗಾರಿಗಳ ನಿಗಾ ವಹಿಸುವರು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೆಕೆಆರ್‌ಡಿಬಿಯಡಿ ಅನುದಾನದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಮಗಾರಿ ನಿರ್ವಹಿಸುತ್ತಿರುವುದು ಲೋಕೋಪಯೋಗಿ ಇಲಾಖೆ, ಕಳೆದೆರಡು ತಿಂಗಳಿಂದ ಕಾಮಗಾರಿಗಳು ಕುಂಠಿತವಾಗಿವೆ. ಕೂಡಲೇ ಅವುಗಳನ್ನು ಮುಗಿಸಬೇಕು ಎಂದರು.

ಮಾನವಿ ತಾಲೂಕಿನಲ್ಲಿ ಕಾಮಗಾರಿಗಳು ತೀರ ಕುಂಠಿತಗೊಂಡಿವೆ. ಅಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ಇದೇ ಸ್ಥಿತಿ ಮುಂದುವರಿದಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಜಿಲ್ಲೆಯ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋ ದನೆ ನೀಡಿದ್ದು, ಆಡಳಿತಾತ್ಮಕ ಮಂಜೂರಾತಿಗಾಗಿ ಜಿಲ್ಲಾ ಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ಸಲ್ಲಿಸುವಂತೆ ಇಇ ಗಣಪತಿ ಸಾಕರೆ ಅವರಿಗೆ ತಿಳಿಸಿದರು.

ಕಳೆದೆರಡು ತಿಂಗಳಿಂದ ಕೆಆರ್‌ಐಡಿಎಲ್‌ ಯಿಂದ ನಿರ್ವಹಿಸುವ ಕಾಮಗಾರಿಗಳ ಪ್ರಗತಿ ಕಡಿಮೆಯಾಗಿದ್ದು, ಕೂಡಲೇ ಅದನ್ನು ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ನಿರ್ವಹಣೆ ಕಾರ್ಯ ಮುಗಿಸಿ, ಅನುದಾನ ಖರ್ಚು ಮಾಡುವಂತೆ ಕಾರ್ಯನಿರ್ವಾಹಕ ಇಂಜಿನಿಯರ್‌ ತ್ಯಾಗಿ ತುಕಾರಾಂ ಅವರಿಗೆ ಹೇಳಿದರು.

Advertisement

ಕ್ಯಾಷುಟೆಕ್‌ನಿಂದ ಪ್ರಗತಿ ಸಾಧಿ ಸಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಅಲ್ಪ ಕುಸಿದಿದ್ದು, ಅದನ್ನು ಈ ತಿಂಗಳಲ್ಲಿ ಸರಿದೂಗಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಶರಣಪ್ಪ ಪಟ್ಟೇದ್‌ ಅವರಿಗೆ ತಿಳಿಸಿದರು. ಈ ವೇಳೆ ಎಡಿಸಿ ಕೆ.ಎಚ್‌. ದುರುಗೇಶ್‌, ಜಿಪಂ ಮುಖ್ಯ ಯೋಜನಾಧಿಕಾರಿ ಡಾ| ಟಿ. ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಮಕೃಷ್ಣ, ರಿಮ್ಸ್‌ ನಿರ್ದೇಶಕ ಡಾ| ಬಸವರಾಜ ಪೀರಾಪುರೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next