ಮೈಸೂರು ದಸರಾದಲ್ಲಿ ಸತತ ಎಂಟು ವರ್ಷಗಳಿಂದ ಅಂಬಾರಿ ಹೊತ್ತು ಕನ್ನಡಿಗರ ನೆಚ್ಚಿನ ಆನೆ ಎನಿಸಿಕೊಂಡಿದ್ದ ಅರ್ಜುನ ಸೋಮವಾರ ಸಾವಿಗೀಡಾಗಿದೆ. ಈ ಸಾವು ಸಹಜವಾದುದು ಅಲ್ಲದಿರುವುದರಿಂದಲೇ ಇಡೀ ರಾಜ್ಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ. ಸಕಲೇಶಪುರದ ಯಸಳೂರಿನಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ ಯಲ್ಲಿ ಗಾಯಗೊಂಡು ಅರ್ಜುನ ಸಾವಿಗೀಡಾಗಿದೆ. ಈ ಸಾವಿನ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ವನ್ಯಜೀವಿ ಪ್ರಿಯರು ಪರಿತಪಿಸುತ್ತಿದ್ದಾರೆ.
ಕಾಡಾನೆಯ ಕಾರ್ಯಾಚರಣೆಗೆ ಬಳಸಲಾಗಿದ್ದ ಐದು ಸಾಕಾನೆಗಳಲ್ಲಿ ಅರ್ಜುನ ಸಹ ಒಂದು. ಹಾಗೆ ನೋಡಿದರೆ ವಯಸ್ಸು 64 ಆದರೂ ಅರ್ಜುನ ದುರ್ಬಲನಾಗಿರಲಿಲ್ಲ. ಹಿಂದೆಯೂ ಹಲವು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಆದರೆ ಈ ಕಾರ್ಯಾಚರಣೆ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಮೊದಲನೆಯದಾಗಿ 60 ವರ್ಷ ಮೀರಿದ ಯಾವುದೇ ಆನೆಗಳನ್ನು ಕಾರ್ಯಾಚರಣೆಗೆ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ಇದ್ದರೂ ಅರಣ್ಯ ಇಲಾಖೆ ಇದನ್ನು ನಿರ್ಲಕ್ಷಿಸಿದೆ ಎಂದು ವನ್ಯಜೀವಿ ಪ್ರೇಮಿಗಳು ಹೇಳುತ್ತಾರೆ. ಹಲವು ಕಾರ್ಯಾಚರಣೆಯಲ್ಲಿ “ನಿವೃತ್ತ’ ಆನೆಗಳನ್ನು ಬಳಸುತ್ತಿರುವುದು ಈಗಲೂ ಮುಂದುವರಿಯುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಕೆಲವು ಮೂಲಗಳ ಪ್ರಕಾರ, ಕಾಡಾನೆಗೆ ಹಾರಿಸಬೇಕಾದ ಅರಿವಳಿಕೆ ಚುಚ್ಚುಮದ್ದು ತಪ್ಪಿ ಅರ್ಜುನನಿಗೆ ತಗಲಿ, ಕಾರ್ಯಾಚರಣೆ ನಡುವಲ್ಲೇ ಅದು ಪ್ರಜ್ಞೆ ತಪ್ಪಿ ಬಿತ್ತು. ಹೀಗಾಗಿ ಕಾದಾಡಲಾಗದೆ ಸೋಲೊಪ್ಪಿಕೊಳ್ಳಬೇಕಾಯಿತು ಎಂದು ಹೇಳಲಾಗುತ್ತದೆ. ಮತ್ತೂಬ್ಬರ ವಾದದ ಪ್ರಕಾರ, ಕಾಡಾನೆಗೆ ಹಾರಿಸಬೇಕಾದ ಗುಂಡು ತಪ್ಪಿ ಅರ್ಜುನನಿಗೆ ಬಿತ್ತು ಎಂದು ಹೇಳಲಾಗುತ್ತದೆ. ಇದೆಲ್ಲದರ ನಡುವೆ, ಮದವೇರಿದ ಆನೆಯೊಂದು ಕಾರ್ಯಾಚರಣೆ ವೇಳೆ ಕಾಡಿಗೆ ಬಂದಿರುವ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಇರಲಿಲ್ಲ ಎಂಬ ವಾದವೂ ಇದೆ. ಇವೆಲ್ಲವೂ ಅಲ್ಲಿ-ಇಲ್ಲಿ ಕೇಳಿಬರುತ್ತಿರುವ ಮಾತುಗಳು. ಹಾಗೆಂದು ಇದಾವುದನ್ನೂ ನಿರ್ಲಕ್ಷಿಸುವ ಹಾಗಿಲ್ಲ.
ಕಳೆದ ಕೆಲವು ತಿಂಗಳ ಹಿಂದೆ ವೆಂಕಟೇಶ್ ಎಂಬ 67 ವರ್ಷದ ಆನೆ ಇಂಥದ್ದೇ ಕಾರ್ಯಾಚರಣೆ ವೇಳೆ ಸಾವಿಗೀಡಾಗಿತ್ತು. ಇಲ್ಲಿಯು ನಿವೃತ್ತಿಯಾದ ಆನೆಯ ಬಳಕೆ ಕುರಿತು ಆಕ್ಷೇಪ ಕೇಳಿಬಂದಿತ್ತು. ಆದರೂ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಅದರಲ್ಲೂ ಅರ್ಜುನ ಕಾರ್ಯಾಚರಣೆಯಲ್ಲಿ ಅರಿವಳಿಕೆ ವೈದ್ಯರು, ಅರಣ್ಯ ಇಲಾಖೆ ಅಧಿಕಾರಿಗಳ ಲೋಪ ಇದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗಲೇ ಅರ್ಜುನನ ಸಾವಿಗೆ ನ್ಯಾಯ ಸಿಗುತ್ತದೆ.
ಇನ್ನೊಂದೆಡೆ, ರಾಜ್ಯದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿ ಹೆಚ್ಚುತ್ತಿದ್ದು, ಜ್ವಲಂತ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಿ ಅವುಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಈ ಕಾರ್ಯಪಡೆಯಲ್ಲೂ ಸಿಬಂದಿ ಕೊರತೆ ಇರುವುದರಿಂದ ಕಾರ್ಯಾಚರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮೊದಲು ಅರಣ್ಯ ಇಲಾಖೆಗೆ ಅಗತ್ಯ ಸಿಬಂದಿ ವ್ಯವಸ್ಥೆ ಮಾಡುವ ಮೂಲಕ ಮೂಲ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಚಿಂತಿಸಲೇಬೇಕು.