ಬೆಂಗಳೂರು: ರಾಜ್ಯದ ಕೇಂದ್ರೋದ್ಯಮಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಜತೆಗೆ ಕನ್ನಡದಲ್ಲೂ ವ್ಯವಹರಿಸಬೇಕು ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದ್ದಾರೆ. ಎಚ್‌ಎಎಲ್‌ನ ವಿ.ಎಂ.ಘಾಟೆ ಸಭಾಂಗಣದಲ್ಲಿ ಭಾನುವಾರ ನಡೆದ ವಿಮಾನ ಕನ್ನಡಿಗರ ಸಂಘದ 12ನೇ ವಾರ್ಷಿಕೋತ್ಸವದಲ್ಲಿ “ಕನ್ನಡ ಕಾಯಕ ಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.
ಕೇಂದ್ರೋದ್ಯಮಗಳು ಕನ್ನಡದಲ್ಲಿ ವ್ಯವಹರಿಸಬೇಕು ಎಂಬುದನ್ನು ಉನ್ನತ ಅಧಿಕಾರಗಳು ಮತ್ತು ಅನ್ಯ ಭಾಷೆಯವರು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕು ಎಂದರು. ಕೇಂದ್ರದ ಉದ್ದಿಮೆಗಳಲ್ಲಿ ತ್ರಿ ಭಾಷಾ ಸೂತ್ರದನ್ವಯ ಕನ್ನಡಕ್ಕೆ ಕೊಡಬೇಕಾದ ಮಾನ್ಯತೆ ನೀಡದಿರುವುದು ವಿಷಾದನೀಯ. ಕಾರ್ಖಾನೆಗಳಲ್ಲಿರುವ ಅನ್ಯ ಭಾಷಾ ಬಂಧುಗಳು ಕನ್ನಡದಲ್ಲಿ ಮಾತನಾಡುವ, ವ್ಯವಹರಿಸುವುದನನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉದ್ಯಮಗಳ ಕನ್ನಡ ಸಂಘಟನೆಗಳು ತಾವು ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಕನ್ನಡ ಬಾಷೆ, ಕನ್ನಡಿಗರ ಹಿತರಕ್ಷಣೆಯ ಜತೆಗೆ ನಾಡು-ನುಡಿಯ ರಕ್ಷಣೆಗಾಗಿಯೂ ಶ್ರಮಿಸುತ್ತಿರುವುದರಿಂದ ಕನ್ನಡ ಸುಭದ್ರವಾಗಿದೆ ಎಂದು ಹೇಳಿದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ ಚಂದ್ರಶೇಖರ್ ಅಭಿನಂದನಾ ನುಡಿಗಳನ್ನಾಡುತ್ತ ಗೊ.ರು.ಚನ್ನಬಸಪ್ಪ ಅವರ ಸಾಧನೆಗಳನ್ನು ಕೊಂಡಾಡಿದರು. ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಎಚ್‌ಎಎಲ್ ಕಾರ್ಖಾನೆಯ ವಿಮಾನ ವಿಭಾಗದ ಅಪರ ಮಹಾ ವ್ಯವಸ್ಥಾಪಕರಾದ ಪಿ.ಕೆ.ವರ್ಮ,ಸಂಘದ ಅಧ್ಯಕ್ಷ ಆರ್.ರಾಮಸ್ವಾಮಿ, ಮೊದಲ ಉಪಾಧ್ಯಕ್ಷ ಸೋಮೇಶ್ವರ, ಕನ್ನಡ ಪರ ಚಿಂತಕ ಬಾ.ಹ.ಉಪೇಂದ್ರ, ಕರ್ನಾಟಕ ಕಾರ್ಮಿಕ ಲೋಕದ ಬಿ.ವಿ.ರವಿಕುಮಾರ್ ಮತ್ತಿತರರು ಇದ್ದರು.