Advertisement
ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಪೇಟೆ ಪ್ರೈಮರಿ ಶಾಲೆ 118 ವರ್ಷ ಹಳೆಯದಾಗಿದ್ದು, ಪಾರಂಪರಿಕ ಕಟ್ಟಡವನ್ನು ಹೊಂದಿದೆ.1 ರಿಂದ 7ನೇ ತರಗತಿಯವರೆಗೆ, ಈ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಪುನರುಜ್ಜೀವನಗೊಳಿಸಬೇಕೆಂದು ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಒತ್ತಾಯಿಸಿದ್ದರು.
ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾದಲ್ಲಿ ಶಾಲೆಯ ಶೈಕ್ಷಣಿಕ ವಾತಾವರಣವೇ ಕಲುಷಿತವಾಗಲಿದೆ ಎಂದು ಎಸ್‌ಡಿಎಂಸಿ ಸದಸ್ಯರು, ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿರಿಯ ಸಾಹಿತಿಗಳಾದ ಡಾ. ಹನೂರು ಕೃಷ್ಣಮೂರ್ತಿ ಮತ್ತು ಪ್ರೊ. ಜಿ.ಎಸ್. ಜಯದೇವ್ ಸೇರಿದಂತೆ ಚಿಂತಕರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
Related Articles
Advertisement
ದೂರದೃಷ್ಟಿಯುಳ್ಳ ತಾವು ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಇಂಟ್ಯಾಕ್ ಸಂಸ್ಥೆಯ ಮೂಲಕ ಪಾರಂಪರಿಕ ಶೈಲಿಯಲ್ಲೇ ಪುನರ್‌ನಿರ್ಮಾಣ ಮಾಡಿಸುವ ಪ್ರಯತ್ನದಲ್ಲಿದ್ದೀರಿ ಎಂದು ಪತ್ರಿಕೆಗಳು ವರದಿ ಮಾಡಿವೆ. ತಮ್ಮ ಈ ಶ್ಲಾಘನೀಯ ಪ್ರಯತ್ನವನ್ನು ನಾವೆಲ್ಲರೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಆದರೆ ಸದರಿ ಶಾಲೆಯ ಆವರಣದಲ್ಲಿ ಹೈಟೆಕ್ ಸಾರ್ವಜನಿಕ ಶೌಚಾಲಯವೊಂದನ್ನು ನಿರ್ಮಿಸುವ, ಯೋಜನೆಯೊಂದು ಈಗಾಗಲೇ ಕಾರ್ಯಪ್ರವೃತ್ತವಾಗಿದೆಯೆಂದು ಮತ್ತು ಈಗಾಗಲೇ ನಿರ್ಮಾಣ ಕಾರ್ಯಕ್ಕೆ ಸಂಬಂಧಪಟ್ಟ ಪೂರ್ವ ಸಿದ್ಧತೆಗಳನ್ನು ನಗರಸಭೆಯ ಪೌರಾಯುಕ್ತರು ಕೈಗೊಂಡಿದ್ದಾರೆಂದು ತಿಳಿದು ಬಂದಿದೆ. ಶತಮಾನ ದಾಟಿದ ಶಾಲೆಯ ಆವರಣವನ್ನು ಅನ್ಯ ಉದ್ದೇಶಗಳಿಗೆ ಹೀಗೆ ಬಳಸಲು ಪ್ರಾರಂಭಿಸಿದರೆ, ಶತಮಾನಗಳ ಕಾಲ ಸಮಾಜದ ಭಾಗವಾಗಿ ಬೆಳೆದು ಬಂದ ಈ ಶಿಕ್ಷಣ ಸಂಸ್ಥೆಯನ್ನು ನಾವೇ ನಾಶ ಮಾಡಿದ ಹಾಗೆ ಆಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಆಕ್ರಮಣಶೀಲವಾಗಿ ಸಂಭವಿಸುತ್ತಿರುವ ಪ್ರಗತಿ ಮಕ್ಕಳ ಶಿಕ್ಷಣವನ್ನು ಅಂಚಿಗೆ ತಳ್ಳುತ್ತಿದೆ. ಈ ಸಂದರ್ಭದಲ್ಲಿ ತಾವು ದಯಮಾಡಿ ಶಾಲಾವರಣವನ್ನು ಶೌಚಾಲಯ ಇತ್ಯಾದಿ ಯಾವುದೇ ಅನ್ಯ ಉದ್ದೇಶಗಳಿಗೆ ಬಿಟ್ಟುಕೊಡದಂತೆ ತಡೆಯಾಜ್ಞೆ ಹೊರಡಿಸಬೇಕೆಂದು ಮತ್ತು ಶತಮಾನ ದಾಟಿದ ತಾಲೂಕಿನ ಅತಿಮುಖ್ಯವಾದ ಈ ಶಾಲೆಯನ್ನು ಪುನರುಜ್ಜೀವನಗೊಳಿಸಲು ತೀವ್ರ ಕ್ರಮಗಳನ್ನು ಕೈಗೊಳ್ಳಬೇಕೆಂದ ಈ ಮೂಲಕ ಕೋರುತ್ತೇವೆ.ಎಂಬ ಪತ್ರವನ್ನು ಬರೆದಿದ್ದಾರೆ.
ಈ ಪತ್ರಕ್ಕೆ ಹನೂರು ಕೃಷ್ಣಮೂರ್ತಿ ಮತ್ತು ಜಿಎಸ್ ಜಯದೇವ್ ಅವರಲ್ಲದೇ, ರಂಗಕರ್ಮಿ ಕೆ. ವೆಂಕಟರಾಜು, ಸಾಹಿತಿ ಸೋಮಶೇಖರ ಬಿಸಲವಾಡಿ, ಗಾಯಕ ಸಿ.ಎಂ. ನರಸಿಂಹಮೂರ್ತಿ, ಮುಖ್ಯ ಶಿಕ್ಷಕ ನಾಗೇಂದ್ರ, ಶಿಕ್ಷಕಿ ಸುನೀತಮ್ಮ, ಪರಿಸರವಾದಿ ಡಿ.ಎಸ್. ದೊರೆಸ್ವಾಮಿ, ಹಿರಿಯ ಪತ್ರಕರ್ತ ಅಬ್ರಹಾಂ ಡಿಸಿಲ್ವ, ರಂಗನಿರ್ದೇಶಕಿ ಚಿತ್ರಾ, ನಳಿನಿ ವೆಂಕಟರಾಜು ಮತ್ತಿತರರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ.