ಗಂಗೊಳ್ಳಿ: ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇದೆ. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ಹಿರಿಯ ವಕೀಲರಾದ ರವಿಕಿರಣ್ ಮುರ್ಡೇಶ್ವರ್ ಹೇಳಿದರು.
ಅವರು ಇತ್ತೀಚೆಗೆ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳು ಇಂಟರ್ನೆಟ್ ನೋಡಿ, ಪುಸ್ತಕ ಓದಿ ಕಲಿಯಬಹುದಲ್ಲ. ಶಿಕ್ಷಕರು ಯಾಕೆ ಬೇಕು ಎಂದು ಹೇಳಬಹುದು. ಆದರೆ ಮನೋ ವಿಜ್ಞಾನಿಗಳ ಪ್ರಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವನ ಇರುವಿಕೆ ಅತ್ಯಗತ್ಯ. ಯಾಕೆಂದರೆ ವಿದ್ಯಾರ್ಥಿ ಮತ್ತು ಶಿಕ್ಷಕನ ನಡುವೆ ಸಂವಹನ ಸುಲಲಿತವಾಗಿ ನಡೆಯುತ್ತದೆ.
ಇಂದು ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಯಬೇಕಾದ ಅಗತ್ಯವಿದೆ. ಕ್ಯಾನ್ಸರ್ ಗೆ ಇನ್ನೂ ಸೂಕ್ತವಾದ ಔಷಧ ಕಂಡುಹಿಡಿದಿಲ್ಲ, ಕೃತಕ ರಕ್ತ ತಯಾರಿಸೋದು ಹೇಗೆ ಎಂಬುದು ತಿಳಿದಿಲ್ಲ, ಪ್ರವಾಹ, ಪ್ರಾಕೃತಿಕ ವಿಕೋಪಗಳನ್ನು ಸಮಪರ್ಕವಾಗಿ ತಡೆಯೋದು ಹೇಗೆ ಎಂಬ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ. ಹೀಗಾಗಿ ಇಡೀ ವಿಶ್ವವೇ ಯುವ ಜನಾಂಗವನ್ನು ಆಶಯದ ಕಣ್ಣುಗಳಿಂದ ಎದುರು ನೋಡುತ್ತಿದೆ. ಗ್ರಾಮೀಣ ಪ್ರದೇಶದ ಮಕ್ಕಳು ನಿಜಕ್ಕೂ ಗಟ್ಟಿಗರು. ಹೀಗಾಗಿ ಇವರನ್ನು ಸಮರ್ಪಕವಾಗಿ ನೀರೆರೆದು ಪೋಷಿಸಿದರೆ ಭಾರತ ರತ್ನಗಳಾಗುತ್ತಾರೆ ಎಂದರು.
ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ.ಪುತ್ರನ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಶಿವಾನಂದ ಪೂಜಾರಿ, ಮಹಾಲಕ್ಷ್ಮಿ ರೆಸಿಡೆನ್ಸಿ ಆಡಳಿತ ನಿರ್ದೇಶಕ ವಿಕ್ರಮ್ ಗಂಗೊಳ್ಳಿ, ಉದ್ಯಮಿ ಸುರೇಶ್ ಪೂಜಾರಿ, ಕಾನೋಜಿ ಕುಟುಂಬದ ಅಶೋಕ್ ಕಾನೋಜಿ, ಎಸ್ ಡಿಎಂಸಿ ಅಧ್ಯಕ್ಷ ವೆಂಕಟೇಶ್ ಕೋಟಾನ್, ನಿವೃತ್ತ ಮುಖ್ಯ ಶಿಕ್ಷಕಿ ಸುಜಾತಾ ಕೆ. ಶಾಲಾ ವಿದ್ಯಾರ್ಥಿ ನಾಯಕಿ ನಿಶಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಸುಜಾತಾ ಕೆ ಅವರನ್ನು ಸನ್ಮಾನಿಸಲಾಯಿತು. ನಾಗೇಶ್ ಶೇರುಗಾರ್, ಶಾರದಾ ಶೇರುಗಾರ್ ಕೊಂಚಾಡಿ ಶಾಲೆಗೆ ಲ್ಯಾಪ್ ಟ್ಯಾಪ್ ಕೊಡುಗೆ ನೀಡಿದ್ದು, ರೋಟರಿ ಅಧ್ಯಕ್ಷ ಶಿವಾನಂದ ಪೂಜಾರಿ ಪ್ರಿಂಟರ್ ಕೊಡುಗೆ ನೀಡಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಮತಿ ಎಂ ಶಾಲಾ ವಾರ್ಷಿಕ ವರದಿ ವಾಚಿಸಿದರು. ವೆಂಕಟೇಶ್ ಕೋಟಾನ್ ಸ್ವಾಗತಿಸಿದರು. ಶಿಕ್ಷಕ ಶಶಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಉಮೇಶ್ ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ನಂತರ ಕೊಂಚಾಡಿ ರಾಧಾ ಶೆಣೈ ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟಾಣಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.