ಬೀದರ: ಮಹಾತ್ಮ ಗಾಂಧೀಜಿಯ ಅಹಿಂಸೆ, ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತತೆ ಎಲ್ಲವೂ ಸಂಗೀತದಲ್ಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹೇಳಿದರು. ಮಹಾತ್ಮ ಗಾಂಧಿ ಪುಣ್ಯತಿಥಿ ನಿಮಿತ್ತ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮನಿಗೆ ಸಂಗೀತ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಲಿಂ| ಪಂಚಾಕ್ಷರ ಗವಾಯಿ ಪುಣ್ಯತಿಥಿ ಅಂಗವಾಗಿ ಪ್ರತಿ ವರ್ಷ ರಾಜ್ಯ ಮಟ್ಟದ ಸಂಗೀತ ಕಾರ್ಯಕ್ರಮ ಆಯೋಜಿಸಿ ನೂರಾರು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಸಂಗೀತ ನಮನ ಮೂಲಕ ಮಹಿಳೆ ಮತ್ತು ಮಕ್ಕಳಲ್ಲಿ ಗಾಂಧೀಜಿ ತತ್ವ ಪರಿಚಯಿಸುತ್ತಿರುವುದು ಒಳ್ಳೆಯ ಕಾರ್ಯ ಎಂದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಆರ್.ಸಿ. ನಾಡಗೇರ್ ಇದ್ದರು. ಪ್ರೊ| ಎಸ್.ವಿ. ಕಲ್ಮಠ ಅಧ್ಯಕ್ಷತೆ ವಹಿಸಿದ್ದರು. ಪಂ| ರಾಜೇಂದ್ರಸಿಂಗ್ ಪವಾರ ಹಾರ್ಮೋನಿಯಂ ಸೊಲೋ ನುಡಿಸುವ ಮೂಲಕ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಶ್ವೇಶ್ವರ ಹಿರೇಮಠ ಅವರು ಹೆಸರು ಮೋಹನದಾಸ ಉಸಿರು ಭಾರತ ದೇಶ ಎಂಬ ಗೀತೆ ಪ್ರಸ್ತುತಪಡಿಸಿದರು. ಕಲಾವಿದರಾದ ಜಗನ್ನಾಥ ನಾನಕೇರಿ, ಸಿದ್ದು ಸಾಯಿ ನಾನಕೇರಿ ವಚನ ಗಾಯನ ಮಾಡಿದರು. ಶಾಂಭವಿ, ರೇಣುಕಾ, ಶ್ರದ್ಧಾ ಮತ್ತು ಭೂಮಿ ಪ್ರಾರ್ಥನೆ ನಡೆಸಿಕೊಟ್ಟರು. ರಮೇಶ ಕೋಳಾರ ತಬಲಾ ಸಾಥ್ ನೀಡಿದರು.
ಇದೇ ವೇಳೆ ಗಣರಾಜೋತ್ಸವ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್ ಅವರನ್ನು ಸನ್ಮಾನಿಸಲಾಯತು. ಹಿರಿಯ ನಾಗರಿಕ ಸಂಸ್ಥೆ ರಾಮಕೃಷ್ಣ ಮುನಿಗ್ಯಾಲ್, ಪ್ರೊ| ವಿಜಯ ಸೂರ್ಯನ್, ಗಂಗಪ್ಪ ಸಾವಳೆ, ವಿಎಚ್‌ಪಿ ಅಧ್ಯಕ್ಷ ರಾಮಕೃಷ್ಣ ಸಾಳೆ, ಸಾಹಿತಿ ವಿ.ಎಂ. ಡಾಕುಳಗಿ, ರಾಜೇಶ್ವರಿ, ಕೃತಿಕಾ ಇತರರು ಇದ್ದರು. ಡಾ| ಬಿ.ಎಸ್. ಬಿರಾದಾರ ಸ್ವಾಗತಿಸಿದರು. ತ್ರಿವೇಣಿ ಕೋಳಾರ ನಿರೂಪಿಸಿದರು. ಧನರಾಜ ಸ್ವಾಮಿ ವಂದಿಸಿದರು.