ಲಂಡನ್: ಜಗತ್ತಿನ ಎಲ್ಲೇ ಹೋದರೂ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ತಪ್ಪಿದ್ದಲ್ಲ.. ಸುಮಾರು 800 ವರ್ಷಗಳ ಇತಿಹಾಸವೇ ಇದಕ್ಕಿದೆ. ಕಂಪ್ಯೂಟರ್ ಯುಗ ಆರಂಭವಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಂಪ್ಯೂಟರ್ ವ್ಯವಸ್ಥೆ ಆಧಾರಿತ ಪರೀಕ್ಷೆ ಬಂದರೂ ಸಾಮಾನ್ಯ ಪರೀಕ್ಷೆಗಳು ಲಿಖೀತ ರೂಪದಲ್ಲೇ ನಡೆಯುತ್ತವೆ.
ಇಂತಹ ಸಂಪ್ರದಾಯಕ್ಕೆ ತಿಲಾಂಜಲಿ ನೀಡಲು ಇದೀಗ ಬ್ರಿಟನ್‌ನ ಪ್ರಸಿದ್ಧ ವಿಶ್ವವಿದ್ಯಾನಿಲಯ ಕೇಂಬ್ರಿಡ್ಜ್ ಮುಂದಾಗಿದೆ. ಇದಕ್ಕೆ ಕಾರಣ ಕೆಲವು ವಿದ್ಯಾರ್ಥಿಗಳ ಕೈಬರಹ ಅರ್ಥವಾಗಲ್ಲ ಎಂಬುದು!
ಲ್ಯಾಪ್‌ಟಾಪ್ ಅಥವಾ ಐಪ್ಯಾಡ್‌ಗಳ ಮೂಲಕ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಐಪ್ಯಾಡ್, ಲ್ಯಾಪ್‌ಟಾಪ್‌ಗ್ಳಲ್ಲೇ ವಿದ್ಯಾರ್ಥಿಗಳು ತರಗತಿ ವೇಳೆ ಪಾಠದ ಅಂಶಗಳನ್ನು ಬರೆದಿಟ್ಟುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಲಿಖೀತ ಪರೀಕ್ಷೆಯನ್ನೂ ನಡೆಸಬಹುದು ಎಂಬ ಅಂಶವನ್ನು ಮನಗಾಣಲಾಗಿದೆ.
ಲಿಖಿತ ಪರೀಕ್ಷೆಯನ್ನು ತಪ್ಪಿಸಿ, ಕಂಪ್ಯೂಟ ರೀಕೃತ ಪರೀಕ್ಷೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆಯ “ಡಿಜಿಟಲ್ ಶಿಕ್ಷಣ ಯೋಜನೆ’ ಜಾರಿ ಬಗ್ಗೆ ವಿವಿ ಇದೀಗ ಸಮಾಲೋಚನೆ ನಡೆಸುತ್ತಿದೆ.
“15-20 ವರ್ಷಗಳ ಹಿಂದೆ ವಿದ್ಯಾರ್ಥಿಗಳು ದಿನದಲ್ಲಿ ಗಂಟೆಗಳ ಕಾಲ ಬರವಣಿಗೆಗೆ ಉಪಯೋಗಿಸುತ್ತಿದ್ದರು. ಆದರೆ ಈಗ ಪರೀಕ್ಷೆ ಯೊಂದನ್ನು ಬಿಟ್ಟು ಬೇರೆ ಯಾವುದನ್ನೂ ಬರೆಯುತ್ತಿಲ್ಲ. ಬರವಣಿಗೆ ಅಭ್ಯಾಸ ಇಳಿಕೆ ಯಾಗುತ್ತಿದ್ದು, ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಆದ್ದರಿಂದ ವಿವಿ ಆಲೋಚನೆ ಸಕಾರಾತ್ಮಕವಾಗಿದೆ. ಆದರೂ ಬರವಣಿಗೆ ಮುಂದುವರಿಸುವುದು ಉತ್ತಮವಾದದ್ದು’ ಎಂದು ಪ್ರಾಧ್ಯಾಪಕ ರೊಬ್ಬರು ಹೇಳಿದ್ದಾರೆ.