Advertisement

ಪ್ರಶಸ್ತಿಯನ್ನ ನಿರಾಕರಿಸುವ ಮಾತೇ ಇಲ್ಲ: ಕೆ.ವಿ. ರಾಜು

11:45 AM Apr 23, 2017 | |

ಕೆ.ವಿ. ರಾಜು ಅವರು ನಾಳೆ ನಡೆಯುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪುಟ್ಟಣ ಕಣಗಾಲ್‌ ಪ್ರಶಸ್ತಿಯನ್ನು ಸ್ವೀಕರಿಸುತ್ತಾರಾ?
ಅಂಥದ್ದೊಂದು ಕುತೂಹಲ ಎಲ್ಲರಿಗೂ ಇದ್ದೇ ಇದೆ. ಅದಕ್ಕೆ ಕಾರಣವೂ ಇದೆ. ಕೆಲವೇ ದಿನಗಳ ಹಿಂದಿನ ಮಾತು. ಕರ್ನಾಟಕ ಚಲನಚಿತ್ರ ಅಕಾಡೆಮಿಯು ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರನ್ನು ಬಿ.ಆರ್‌. ಪಂತಲು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆದರೆ, ಕೆ.ವಿ. ರಾಜು ಮಾತ್ರ ಆ ಪ್ರಶಸ್ತಿಯನ್ನು ನಿರಾಕರಿಸಿದ್ದರು.

Advertisement

“ಶಾಲು-ಸನ್ಮಾನಗಳು ಅಂದರೆ ಅಲರ್ಜಿ ನನಗೆ. ಅದಕ್ಕಾಗಿ ತಪಸ್ಸು ಮಾಡುವವರ ದಂಡೇ ಇದೆ. ಅವರಿಗೆ ನೀಡಿ …’ ಎಂದು ಕೆ.ವಿ. ರಾಜು ಹೇಳಿದ್ದರು. ಹೀಗಿರುವಾಗಲೇ ಅವರು ಈ ಬಾರಿ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾಳೆ (ಏಪ್ರಿಲ್‌ 24)ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಹೀಗಿರುವಾಗ ಅವರು ಪ್ರಶಸ್ತಿ ಸ್ವೀಕರಿಸುತ್ತಾರಾ ಎಂಬ ಪ್ರಶ್ನೆ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

ಒಂದು ಪಕ್ಷ ಸ್ವೀಕರಿಸಿದರೂ, ಬಿ.ಆರ್‌. ಪಂತಲು ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ನಿರಾಕರಿಸಿ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಸ್ವೀಕರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಈ ವಿಷಯವಾಗಿ ಅವರನ್ನು ಕೇಳಿದರೆ, “ಪ್ರಶಸ್ತಿಯನ್ನು ನಿರಾಕರಿಸುವ ಮಾತೇ ಇಲ್ಲ. ಖಂಡಿತಾ ಪ್ರಶಸ್ತಿ ಸ್ವೀಕರಿಸುತ್ತೇನೆ’ ಎನ್ನುತ್ತಾರೆ ಕೆ.ವಿ. ರಾಜು. “ಸುಮಾರು 35 ವರ್ಷಗಳ ಹಿಂದೆ ಒಂದು ಚಿತ್ರಕ್ಕೆ, ನಿನಗೆ ಪ್ರಶಸ್ತಿ ಬಂದೇ ಬರತ್ತೆ ಕಣಯ್ಯ ಎಂದಿದ್ದರು ಪುಟ್ಟಣ್ಣ ಕಣಗಾಲ್‌. ಆದರೆ, ಪ್ರಶಸ್ತಿ ಬರಲಿಲ್ಲ.

ಯಾಕೆ ಪ್ರಶಸ್ತಿ ಬರಲಿಲ್ಲ ಅಂತಲೂ ಗೊತ್ತಾಗಲಿಲ್ಲ. ಈಗ ಅವರೇ ಪ್ರಶಸ್ತಿಯಾಗಿ ಬಂದಿದ್ದಾರೆ, ಪವಾಡದ ತರಹ. ಎಲ್ಲಾ ಸರಿ ಹೋಗಿದ್ದರೆ, ನಾನು ಅವರ ಚಿತ್ರಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಬೇಕಿತ್ತು. ಸಂಭಾಷಣೆ ಸಹ ಬರೆಯಬೇಕಿತ್ತು. ಅದ್ಯಾಕೋ ಅವರ ಜೊತೆಗೆ ಕೆಲಸ ಮಾಡುವುದಕ್ಕೆ ಆಗಲೇ ಇಲ್ಲ. ಈಗ ಅವರ ಹೆಸರಿನ ಪ್ರಶಸ್ತಿ ಸಿಕ್ಕಿದೆ. ನಿರಾಕರಿಸುವುದಿಲ್ಲ, ಖಂಡಿತಾ ಸ್ವೀಕರಿಸುತ್ತೇನೆ’ ಎನ್ನುತ್ತಾರೆ ಅವರು.

ಹಾಗಾದರೆ, ಬಿ.ಆರ್‌. ಪಂತುಲು ಪ್ರಶಸ್ತಿಯನ್ನೇಕೆ ಸ್ವೀಕರಿಸಲಿಲ್ಲ? ಈ ಪ್ರಶ್ನೆ ಬರುವುದಕ್ಕೂ ಕಾರಣವಿದೆ. ಪಂತುಲು ಅವರು ಪುಟ್ಟಣ್ಣನವರ ಗುರುಗಳಾಗಿದ್ದರು. ಅವರ ಹೆಸರಿನಲ್ಲಿ ನೀಡಲಾಗುವುದು ಪ್ರಶಸ್ತಿಯನ್ನು ಸ್ವೀಕರಿಸದೆ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಸ್ವೀಕರಿಸುವುದು ಎಷ್ಟು ಸಮಂಜಸ ಎಂದರೆ, “ಪುಟ್ಟಣ್ಣನವರ ಗುರು ಬಿ.ಆರ್‌. ಪಂತುಲು ಜೀವಮಾನ ಪ್ರಶಸ್ತಿಗೆ ಅಕಾಡೆಮಿ ಆಯ್ಕೆ ಮಾಡಿದಾಗ, ಶುದ್ಧವಾಗಿರಬೇಕೆಂದು ರಿಟೈರ್‌ ಆಗಿರದ ಕಾರಣ ನಿರಾಕರಿಸಿದೆ. ಈಗ ಖುದ್ದು ಪುಟ್ಟಣನವರೇ ಪ್ರಶಸ್ತಿಯಾಗಿ ಪ್ರತ್ಯಕ್ಷರಾಗಿದ್ದಾರೆ’ ಎನ್ನುತ್ತಾರೆ ರಾಜು.

Advertisement
Advertisement

Udayavani is now on Telegram. Click here to join our channel and stay updated with the latest news.

Next