Advertisement

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

12:54 AM May 01, 2024 | Team Udayavani |

ಮಣಿಪಾಲ: ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎಂಟು ವರ್ಷಗಳಲ್ಲಿ ದ್ವಿಗುಣಗೊಳ್ಳಲಿದ್ದು ಮಾಹೆಯಂತಹ ಶಿಕ್ಷಣ ಸಂಸ್ಥೆಗಳೂ ಪದವೀಧರರ ಸಂಖ್ಯೆಯನ್ನೂ ದ್ವಿಗುಣಗೊಳಿಸಿ ದೇಶಾಭಿವೃದ್ಧಿಗೆ ಯುವಕರನ್ನು ಸನ್ನದ್ಧಗೊಳಿಸಬೇಕು ಎಂದು ನೇಶನಲ್‌ ಬ್ಯಾಂಕ್‌ ಫಾರ್‌ ಫೈನಾನ್ಸಿಂಗ್‌ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್‌ ಡೆವಲಪ್‌ಮೆಂಟ್‌ ಮತ್ತು ಜಿಯೋ ಫೈನಾನ್ಶಿಯಲ್‌ ಸರ್ವಿಸಸ್‌ ಲಿ. ಅಧ್ಯಕ್ಷ ಕೆ.ವಿ. ಕಾಮತ್‌ ಹೇಳಿದರು.

Advertisement

ಮಣಿಪಾಲದ ಮಾಹೆ, ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌, ಎಂಇಎಂಜಿ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಡಾ| ಟಿಎಂಎ ಪೈ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಹೊಟೇಲ್‌ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈಯವರ 126ನೇ ಜನ್ಮದಿನ) ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾಮತ್‌ ಅವರು ಮಾತನಾಡಿದರು.

ಭಾರತದ ಜಿಡಿಪಿ 4 ಟ್ರಿಲಿಯನ್‌ ಡಾಲರ್‌ ಅಂದಾಜಿನಲ್ಲಿದ್ದು ಇದು ಎಂಟು ವರ್ಷಗಳಲ್ಲಿ ಎರಡು ಪಟ್ಟು ಆಗಿ ಸಾರ್ವಕಾಲಿಕ ದಾಖಲೆ ಆಗಲಿದೆ ಎಂಬ ವಿಶ್ವಾಸವಿದೆ. ಇದೇ ವೇಳೆ ದೇಶದಲ್ಲಿ ಪದವೀಧರರಾಗುವವರ ಸಂಖ್ಯೆಯನ್ನೂ ದ್ವಿಗುಣಗೊಳಿಸಬೇಕು. ಈ ಮೂಲಕ ಯುವ ವೃಂದದ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಬೇಕು. ಇದನ್ನು ಮಾಹೆಯಂತಹ ಹಿರಿಯ ಶಿಕ್ಷಣ ಸಂಸ್ಥೆಗಳು ಆಗಗೊಳಿಸಬಹುದು. ಭಾರತದ ಹೊಸ ಚಾಲಕ ದೇಶವನ್ನು ಆ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂದು ಆಶಿಸಿದರು.

1942ರಲ್ಲಿಯೇ ಎಸೆಸೆಲ್ಸಿಯಲ್ಲಿ ಫೇಲ್‌ ಆದವರಿಗೆ ಕೌಶಲ ಕಲೆ ಕಲಿಸಲು ಡಾ| ಪೈಯವರು ಮುಂದಾದುದು ಅವರಿಗೆ ದುರ್ಬಲರ ಕುರಿತು ಇದ್ದ ಅನುಕಂಪನಶೀಲತೆಯನ್ನು ತೋರಿಸುತ್ತದೆ. ಅವರ ಜನ್ಮದಿನದಂದು ಅವರು ತೋರಿದ ನಡೆಯನ್ನು ಸ್ಮರಿಸಿಕೊಳ್ಳುವುದರ ಜತೆಗೆ ಬಹುದೃಷ್ಟಿಕೋನಗಳಿಂದ ಅವರ ಆಶಯವನ್ನು ದ್ವಿಗುಣಗೊಳಿಸಲು ಯತ್ನಿಸಬೇಕು ಎಂದು ಕಾಮತ್‌ ಕರೆ ನೀಡಿದರು.

ಮಾಹೆ ಟ್ರಸ್ಟ್‌ ಅಧ್ಯಕ್ಷ ಡಾ|ರಂಜನ್‌ ಆರ್‌. ಪೈ, ಟ್ರಸ್ಟಿ ವಸಂತಿ ಆರ್‌. ಪೈ, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ., ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್‌ ಯು. ಪೈ, ಡಾ|ಟಿಎಂಎ ಪೈ ಪ್ರತಿಷ್ಠಾನದ ಅಧ್ಯಕ್ಷ ಟಿ.ಅಶೋಕ್‌ ಪೈ, ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಕುಲಪತಿ ಲೆ|ಜ|ಡಾ|ಎಂ.ಡಿ.ವೆಂಕಟೇಶ್‌ ಅವರು ಪ್ರತಿಭಾನ್ವಿತರು, ಅತ್ಯುತ್ತಮ ಸೇವಾಕರ್ತರಿಗೆ ವಿದ್ಯಾರ್ಥಿವೇತನ, ಪ್ರಶಸ್ತಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.

Advertisement

ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿದರು. ಮಾಹೆ ಕುಲಸಚಿವ ಡಾ| ಪಿ. ಗಿರಿಧರ ಕಿಣಿ ಅತಿಥಿಗಳನ್ನು ಪರಿಚಯಿಸಿದರು. ಸಹಕುಲಪತಿ ಡಾ| ಎನ್‌.ಎನ್‌. ಶರ್ಮ ವಂದಿಸಿದರು. ಎಂಐಟಿ ಸಹಾಯಕ ಪ್ರಾಧ್ಯಾಪಕ ಡಾ| ಪ್ರವೀಣ್‌ ಕೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಪಿಗ್ಮಿ, ಮ್ಯೂಚುವಲ್‌ ಫ‌ಂಡ್‌ ಸಾರ್ವಕಾಲಿಕ ಸಾಮರ್ಥ್ಯ
ಡಾ| ಟಿಎಂಎ ಪೈಯವರು ಸಿಂಡಿಕೇಟ್‌ ಬ್ಯಾಂಕ್‌ ಮೂಲಕ ಜಾರಿಗೊಳಿಸಿದ ಪಿಗ್ಮಿ ಉಳಿತಾಯ ಖಾತೆ ಯೋಜನೆ ನನ್ನ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ ಎಂದು ಕೆ.ವಿ. ಕಾಮತ್‌ ಹೇಳಿದರು.

ನಾನು ಐಸಿಐಸಿಐ ಬ್ಯಾಂಕ್‌ ಮುಖ್ಯಸ್ಥನಾದಾಗ 1990ರ ದಶಕದಲ್ಲಿ 100 ಶಾಖೆಗಳಿದ್ದವು. ಅನಂತರ ಇತರ ಬ್ಯಾಂಕ್‌ಗಳು ಐಸಿಐಸಿಐ ಬ್ಯಾಂಕ್‌ನೊಂದಿಗೆ ವಿಲೀನಗೊಂಡು ವ್ಯವಹಾರ ವಿಸ್ತರಣೆಯಾಯಿತು. ನಾನು ಎಲ್ಲ ಸಿಬಂದಿಗಳ ಸಭೆ ಕರೆದು ಏಜೆಂಟರ ಮೂಲಕ ಸಣ್ಣ ಸಣ್ಣ ಮೊತ್ತವನ್ನು ಸಂಗ್ರಹಿಸಲು ಹೇಳಿದೆ. ಇದೇ ಮೊತ್ತವನ್ನು ದ್ವಿಚಕ್ರ ವಾಹನ, ಕಾರು, ಮನೆ ನಿರ್ಮಾಣಕ್ಕೆ ಸಾಲ ಕೊಡುತ್ತಿದ್ದೆವು. ನನಗೆ ಈ ಧೈರ್ಯ ಬಂದುದು ಡಾ| ಟಿಎಂಎ ಪೈಯವರು ಆರಂಭಿಸಿದ ಪಿಗ್ಮಿ ಯೋಜನೆಯಿಂದ. ಬ್ಯಾಂಕ್‌ನ ನೇರ ಉದ್ಯೋಗ ಸೃಷ್ಟಿಗಿಂತ ಪಿಗ್ಮಿ ಯೋಜನೆಯಿಂದ ಆದ ಪರೋಕ್ಷ ಉದ್ಯೋಗ ಸೃಷ್ಟಿ ಅಪಾರ. ಇವರು ಒಂದು ರೀತಿಯಲ್ಲಿ ಸೈನಿಕರಿದ್ದಂತೆ. ಎಸ್‌ಐಪಿ ಮ್ಯೂಚುವಲ್‌ ಫ‌ಂಡ್‌ ಯೋಜನೆಯೂ ಇದೇ ರೀತಿ. ಈ ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ದಶಕಗಳ ಹಿಂದೆಯೇ ಕಾರ್ಯಗತಗೊಳಿಸಿದವರು ಡಾ| ಪೈಯವರು ಎಂದು ಕಾಮತ್‌ ಬೆಟ್ಟು ಮಾಡಿದರು.

ಡಾ| ಪೈಯವರನ್ನು ಆಮಂತ್ರಿಸಿದ್ದ
ಕೆ.ವಿ. ಕಾಮತ್‌
ನಾನು ಸುರತ್ಕಲ್‌ ಎನ್‌ಐಟಿಕೆ ಯಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ಪಡೆ ಯುವಾಗ ವಾರ್ಷಿಕೋತ್ಸವಕ್ಕೆ ಡಾ| ಟಿಎಂಎ ಪೈಯವರನ್ನು ಕರೆಯಲು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಮಣಿಪಾಲಕ್ಕೆ ಬೈಕ್‌ನಲ್ಲಿ ಬಂದಿದ್ದೆ. ಆಗ ಡಾ| ಪೈಯವರು ಆಮಂತ್ರಣವನ್ನು ಒಪ್ಪಿ ನನ್ನ ಹಿನ್ನೆಲೆಯನ್ನು ಕೇಳಿ ಊಟ
ಮಾಡಿಕೊಂಡು ಹೋಗಲು ಹೇಳಿದರು. ಕಾರ್ಯಕ್ರಮಕ್ಕೂ ಬಂದು ಶುಭಕೋರಿದ್ದರು ಎಂದು ಕಾಮತ್‌ ನೆನಪಿಸಿಕೊಂಡರು.

 

 

Advertisement

Udayavani is now on Telegram. Click here to join our channel and stay updated with the latest news.

Next