Advertisement
ಸಿನಿಮಾ ಪ್ರಿಯರ ನೆಚ್ಚಿನ ತಾಣವಾದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಜನರ ನೀರಿನ ಬವಣೆಯ ಕತೆ. ಮಹದೇವಪುರ ಗ್ರಾಮಕ್ಕೆ 36.59 ಲಕ್ಷ ರೂ. ವೆಚ್ಚದಲ್ಲಿ ಪ್ರಷರ್‌ಫಿಲ್ಟರ್ ಅಳವಡಿಸಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಮಂಜೂರಾತಿ ದೊರೆತು ಎರಡು ವರ್ಷವಾಗುತ್ತಾ ಬಂದರೂ ಇದುವರೆಗೂ ಚಾಲನೆ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಯೋಜನೆ ಜಾರಿಗೆ ಕಿಂಚಿತ್ತೂ ಆಸಕ್ತಿ ವಹಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
Related Articles
Advertisement
ಖಾಸಗಿ ಕೊಳವೆ ಬಾವಿಗಳ ಆಶ್ರಯ: ಕುಡಿಯುವುದಕ್ಕೆ ಜನರು ಖಾಸಗಿ ಕೊಳವೆ ಬಾವಿಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸುವಂತಾಗಿದೆ. ಮಹಿಳೆಯರು, ಪುರುಷರು, ಮಕ್ಕಳು ಉರಿ ಬಿಸಿಲಿನಲ್ಲಿ ಬಿಂದಿಗೆಗಳನ್ನು ಹಿಡಿದು ತಂದು ನೀರು ತುಂಬಿಸಿಕೊಂಡು ಮನೆಗೆ ತೆರಳಿ ದಾಹ ಇಂಗಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ನೀರು ಸಂಗ್ರಹಿಸುವುದೇ ದೊಡ್ಡ ಚಿಂತೆಯಾಗಿದೆ. ನಿತ್ಯ ಅರ್ಧ ಕಿ.ಮೀ.ನಿಂದ ಒಂದು ಕಿ.ಮೀ. ದೂರದವರೆಗೆ ಹೋಗಿ ನೀರು ತರುವಂತಾಗಿದೆ. ಪುರುಷರು ಬೈಕ್, ಸೈಕಲ್ಗಳಲ್ಲಿ ಬಿಂದಿಗೆಗಳ ಮೂಲಕ ನೀರನ್ನು ಹೊತ್ತು ತಂದರೆ ಕೆಲವು ಮಹಿಳೆಯರು ಬಿಂದಿಗೆಗಳನ್ನು ಹಿಡಿದು ನಡೆದುಕೊಂಡು ಹೋಗೇ ನೀರನ್ನು ತರುತ್ತಿದ್ದಾರೆ.
ವಿದ್ಯುತ್ ವ್ಯತ್ಯಯದ ಸಂಕಷ್ಟ: ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿರುವ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ವಿದ್ಯುತ್ ಅಡಚಣೆಯಿಂದ ಗಂಟೆಗಟ್ಟಲೆ ಖಾಸಗಿ ಕೊಳವೆಬಾವಿಗಳ ಬಳಿ ಜನರು ನೀರು ಸಂಗ್ರಹಿಸಲು ಕಾದು ಕೂರುವಂತಾಗಿದೆ. ಕುಡಿಯುವ ನೀರು ಸರಬರಾಜಿಗೆ ವಿದ್ಯುತ್ ಅಡಚಣೆ ಉಂಟುಮಾಡದಂತೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸೂಚಿಸಿದ್ದರೂ ಅಧಿಕಾರಿಗಳು ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ.
ನೀರು ಸಂಗ್ರಹಿಸಿಟ್ಟರೆ ಸಾಂಕ್ರಾಮಿಕ ರೋಗ: ಗ್ರಾಮ ಪಂಚಾಯಿತಿಯವರು ವಾರಕ್ಕೊಮ್ಮೆ ಪೂರೈಕೆ ಮಾಡುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದನ್ನು ಸಂಗ್ರಹಿಸಿಡುವುದೂ ಅಪಾಯಕಾರಿ. ಏಕೆಂದರೆ, ಕಲುಷಿತ ನೀರು ಸಂಗ್ರಹಿಸಿಡುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ, ಡೆಂಘಿ ಇನ್ನಿತರ ಮಾರಣಾಂತಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಕಲುಷಿತ ನೀರು ಕುಡಿದು ಜಾಂಡೀಸ್ ಸೇರಿದಂತೆ ವಿವಿಧ ರೋಗಗಳಿಂದ ಜನರು ಈಗಾಗಲೇ ಬಳಲುತ್ತಿ ದ್ದಾರೆ. ಮಹದೇವಪುರ, ಗಾಮನಹಳ್ಳಿ, ಚಿಕ್ಕಅಂಕನಹಳ್ಳಿ ಸೇರಿ 27 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದ್ದರೂ ಅದೂ ಇನ್ನೂ ಆರಂಭ ವಾಗಿಲ್ಲ. ಕುಡಿಯುವ ನೀರಿಗಾಗಿ ಶಾಸಕರ ಅನುದಾನ ದಲ್ಲಿ 3.60 ಲಕ್ಷ ರೂ. ಹಣ ನೀಡಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ಯೋಜನೆಯನ್ನು ಕೈಗೊಳ್ಳುತ್ತಿಲ್ಲ ಎನ್ನುವುದು ಗ್ರಾಮದ ಜನರ ಆರೋಪವಾಗಿದೆ.
ಹಬ್ಬಕ್ಕೆ ಟ್ಯಾಂಕರ್ ನೀರು: ಊರಿನಲ್ಲಿ ನಡೆದ ಗ್ರಾಮದೇವತೆ ಹಬ್ಬಕ್ಕೆ ನೀರಿಲ್ಲದೆ ಕೊನೆಗೆ ಟ್ಯಾಂಕರ್ ನೀರನ್ನು ತರಿಸಿಕೊಳ್ಳಲಾಯಿತು. ಹಬ್ಬಕ್ಕೆ ನೆಂಟರಿಷ್ಟರು, ಬಂಧುಗಳು ದೂರದ ಊರಿನಿಂದ ಆಗಮಿಸಿದ್ದರು. ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡ ನೀರು ಸಾಲದಿದ್ದರಿಂದ ಗ್ರಾಮದ ಜನರು ಪಂಚಾಯಿತಿಗೆ ಹಿಡಿಶಾಪ ಹಾಕಿದರು. ನೀರಿನ ಬವಣೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಿತ್ಯವೂ ಊರಿನ ಜನರು ಪಂಚಾಯಿತಿಯವರೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದಾರೆ. ಪಂಚಾಯಿತಿಯವರು ಅವರಿಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾರೆ.
● ಮಂಡ್ಯ ಮಂಜುನಾಥ್