Advertisement

ಖಾತ್ರಿ ಸ್ಥಳದಲ್ಲಿ ನೀರಿಲ್ಲ-ನೆರಳಿಲ್ಲ, ಕೋವಿಡ್‌ ನಿಯಮ ಪಾಲನೆಯೂ ಇಲ್ಲ

06:03 PM Apr 22, 2021 | Team Udayavani |

ಮಾದನಹಿಪ್ಪರಗಿ: ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿಗಾರರಿಗೆ ನೀರಿಲ್ಲ, ನೆರಳಿಲ್ಲ, ಕೋವಿಡ್‌-19 ನಿಯಮಗಳ ಪಾಲನೆಯಂತೂ ಗೊತ್ತೇ ಇಲ್ಲ. ಗ್ರಾಮದಲ್ಲಿ ಸುಮಾರು ಏಳೆಂಟು ದಿನಗಳಿಂದ ಕೆರೆ ಹೂಳೆತ್ತುವ ಕೆಲಸ ಆರಂಭಿಸಲಾಗಿದೆ. 300 ಕೂಲಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲ ಗುಂಪು ಸೇರಿಯೇ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಇವರಿಗೆ ತಿಳಿವಳಿಕೆ ನೀಡಿಲ್ಲ. ಕಾಮಗಾರಿ ಕೈಗೊಳ್ಳುವ ಪಂಚಾಯಿತಿ ವತಿಯಿಂದ ಮಾಸ್ಕ್ ವಿತರಣೆಯೂ ಆಗಿಲ್ಲ.

Advertisement

ಬೆಳಗಿನ ಜಾವ ಎದ್ದು ರೊಟ್ಟಿ, ಬುತ್ತಿ ಕಟ್ಟಿಕೊಂಡು 8 ಗಂಟೆಗೆ ಬರುವ ಕೂಲಿಕಾರರು ಬಿರು ಬಿಸಿಲಿನಲ್ಲಿಯೇ ಮಣ್ಣು ಹೊತ್ತು ಚೆಲ್ಲಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ತಮಗೆ ಸಿಕ್ಕ ಜಾಗದಲ್ಲಿ ವಿಶ್ರಾಂತಿ ಪಡೆಯಲು ಕುಳಿತುಕೊಳ್ಳುತ್ತಿದ್ದಾರೆ. ಮಧ್ಯಾಹ್ನ ಆಗುವ ಮುನ್ನವೇ ಕೆಲಸ ಮುಗಿಸುವ ಧಾವಂತ ಕೂಲಿಕಾರರಿಗೆ. ಕೆಲವರು ಮನೆಯಿಂದಲೇ ನೀರಿನ ಬಾಟಲು ತಂದಿದ್ದರು. ಕೆಲಸ ಮಾಡುವ ಜಾಗದಲ್ಲಿಯೇ ಎಲ್ಲರೂ ಕುಳಿತು ರೊಟ್ಟಿಬುತ್ತಿ ಬಿಚ್ಚಿ ಊಟ ಮಾಡುತ್ತಾರೆ. ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ, ನೆರಳಿಗಾಗಿ ಟೆಂಟ್‌ ಹೊಡಿಸಿಲ್ಲ. ಇವರ ಮಕ್ಕಳನ್ನು ನೋಡಿಕೊಳ್ಳಲು ದಾದಿಯರು ಇಲ್ಲ. ಕೆಲಸಗಾರರ ಮಕ್ಕಳು ಗಿಡಗಂಟಿಯ ನೆರಳಲ್ಲೇ ಆಟವಾಡುತ್ತ ಕುಳಿತಿದ್ದವು.

ಉದ್ಯೋಗ ಖಾತ್ರಿ ಕಾಮಗಾರಿ ಯಲ್ಲಿ ನಾವೆಲ್ಲ ಬೆವರು ಸುರಿಸಿ ಕೆಲಸ ಮಾಡುತ್ತೇವೆ. ಇನ್ನು ಕೆಲವರು ಸುಮ್ಮನೆ ಅಡ್ಡಾಡಿಕೊಂಡು ಹೋಗಿ ಕೂಲಿ ಪಡೆಯುತ್ತಿದ್ದಾರೆ
ಎಂದು ಕೂಲಿಕಾರ ರೊಬ್ಬರು ಆಪಾದಿಸಿದರು.

ಕೆರೆ ಹೂಳೆತ್ತುವ ಕಾಮಗಾರಿ ಆರಂಭವಾಗುವ ಮುನ್ನ ಕೆಲವೇ ಕಾರ್ಮಿಕರು ಆಗಮಿಸಿದ್ದರು. ಈಗ 300ಕ್ಕಿಂತ ಹೆಚ್ಚು ಜನರಿದ್ದಾರೆ. ಆದ್ದರಿಂದ ಕುಡಿಯುವ ನೀರಿನ
ಟ್ಯಾಂಕ್‌ ತರಲು ಸ್ವಲ್ಪ ತಡವಾಗಿದೆ. ಕೋವಿಡ್‌ ನಿಯಮದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೂಲಿ ಕಾರ್ಮಿಕರಿಗೆ ತಿಳಿವಳಿಕೆ ನೀಡಲಾಗುವುದು. ಅಲ್ಲದೇ ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
ಪ್ರಭು ಎಸ್‌. ಗಡಗಿ, ಪಿಡಿಒ

ಸರ್‌, ಇಲ್ಲಿ ಕೆಲಸಕ್ಕೆ ಬಂದವರಿಗಿ ಪಂಚಾಯಿತಿಯವರು ಯಾವುದೇ ಸೌಲಭ್ಯ ಕೊಟ್ಟಿಲ್ರಿ. ದಣಿವಾದ್ರ ಒಂದ ಗಳಗಿ ಕೂಡಬೇಕಂದ್ರ ನೆರಳೂ ಇಲ್ರಿ, ನೀರು ಇಲ್ರಿ. ನಾವು ಮನುಷ್ಯಾರ ಅದೀವಿ. ನಮ್ಮ ಜೀವಕ್ಕೂ ತ್ರಾಸ್‌ ಆಗದಂಗ ಪಂಚಾಯಿತಿಯವ್ರು ನೋಡಬೇಕ್ರಿ.
ಶರಣಪ್ಪ ಪ್ಯಾಟಿ,ಕೂಲಿಕಾರ

Advertisement

ಸಾಹೇಬ್ರ ಬಾಯಾರಿಕೆಯಾಗಿ ನೀರ್‌ ಕುಡಿಬೇಕಂದ್ರ ಬಿಸಿಲಿಗೆ ಕಾಯ್ದು ಬಿಸಿ ನೀರ ಆಗ್ತಾವ್ರಿ. ಅಂತ ನೀರನ್ನೆ ಕುಡಿದು ಕೆಲಸ ಮಾಡತೀವ್ರಿ. ಎಷ್ಟು ನೀರು ಕುಡಿದ್ರೂ ಬಾಯಾರಿಕೆ ಹೋಗೋದಿಲ್ರಿ.
ಸುಭದ್ರ ಕಾಶಪ್ಪ ಪೂಜಾರಿ, ಕೂಲಿಕಾರ ಮಹಿಳೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next