Advertisement

ಕೆರೆ, ಬಾವಿ, ಬೋರ್‌ವೆಲ್‌ಗ‌ಳಲ್ಲೂ ನೀರಿಲ್ಲ; ಬತ್ತಿದ ಕೃಷ್ಣೆ; ನೀರಿಗಾಗಿ ಹಾಹಾಕಾರ

05:58 PM Apr 02, 2024 | Team Udayavani |

ಉದಯವಾಣಿ ಸಮಾಚಾರ
ಅಡಹಳ್ಳಿ: ಮಳೆ ಕೊರತೆ ಹಾಗೂ ಬಿಸಿಲಿನ ಹೊಡೆತಕ್ಕೆ ಹಿಪ್ಪರಗಿ ಅಣೆಕಟ್ಟೆ ಕೆಳಭಾಗದ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಸಂಪೂರ್ಣ ಬರಿದಾಗಿದ್ದು, ನೀರಿಲ್ಲದೇ ರಾಶಿ, ರಾಶಿ ಮೀನುಗಳ ಮಾರಣ ಹೋಮವಾಗಿದೆ.

Advertisement

ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸವದಿ, ಶಿರಹಟ್ಟಿ, ಬಳವಾಡ, ಝುಂಜರವಾಡ ಸೇರಿದಂತೆ ತಾಲೂಕಿನ ಪೂರ್ವ ಭಾಗದ ಹಲವಾರು ಗ್ರಾಮಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ಮಳೆಗಾಲ ಆರಂಭವಾಗಲು ಎರಡೂವರೆ ತಿಂಗಳು ಬಾಕಿ ಇದ್ದು, ಈಗಲೇ ನೀರಿನ ಸಮಸ್ಯೆ ಶುರುವಾಗಿದೆ. ಜನ-ಜಾನುವಾರುಗಳ ಗತಿ ಏನು ಎಂಬುದರ ಚಿಂತೆ ಹೆಚ್ಚಾಗಿದೆ.

ತಾಲೂಕಿನಲ್ಲಿರುವ ಜಲಮೂಲಗಳಾದ ಕೆರೆ, ಕೊಳವೆಬಾವಿ, ಬಾವಿ, ಬೋರ್‌ವೆಲ್‌ಗ‌ಳು ಕೂಡ ಬತ್ತಿವೆ. ಈಗ ಝುಂಜರವಾಡ, ಶಿರಹಟ್ಟಿ ಗ್ರಾಮದಲ್ಲಿರುವ ಕೃಷ್ಣಾ ನದಿ ನೀರು ಬತ್ತುತ್ತಿದ್ದಂತೆ ಲಕ್ಷಾಂತರ ಮೀನುಗಳು ಮೃತಪಟ್ಟಿವೆ.

ದುರ್ವಾಸನೆಯಿಂದ ಗ್ರಾಮಸ್ಥರಿಗೆ ಸಾಕಾಗಿ ಹೋಗಿದೆ. ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಸದ್ಯ 1ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು. ಅಧಿ ಕಾರಿಗಳ ಮಾಹಿತಿ ಪ್ರಕಾರ ಒಂದು ತಿಂಗಳು ಮಟ್ಟಿಗೆ ಸಾಕಾಗುತ್ತದೆ. ಅಥಣಿ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದು. ತಾಲೂಕಾಡಳಿತ ಬರ ಎದುರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಾಲೂಕಾಡಳಿತ ಹೊಸ ಕೊಳವೆ ಬಾವಿ ಕೊರೆಯಿಸುವುದರ ಜತೆಗೆ ಇತರ ಸಂಪನ್ಮೂಲ ಬಳಸಿ ನೀರಿನ ವ್ಯವಸ್ಥೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕು.

ಬರ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಿದ್ದು, ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆಯೋ ಅಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. ಈಗಾಗಲೇ ನೀರಿನ ಸಮಸ್ಯೆ ಇರುವ ಗ್ರಾಮ, ತೋಟದ ವಸತಿಗಳಿಗೆ 13 ಗ್ರಾಪಂನಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನು ಮತ್ಯಾವ ಕಡೆ ಸಮಸ್ಯೆ ಇದ್ದರೂ ಅದರ ಮಾಹಿತಿ ಪಡೆದು ಅಲ್ಲಿಯ ಜನ-ಜಾನುವಾರುಗಳಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಸಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಲಾಗುವುದು.
ವಾಣಿ ಯು., ತಹಶೀಲ್ದಾರ್‌, ಅಥಣಿ.

Advertisement

ಕೃಷ್ಣಾ ನದಿ ನೀರು ಸಂಪೂರ್ಣ ಬತ್ತಿ ಹೋಗಿದ್ದರಿಂದ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಹೆಚ್ಚಾಗಿದೆ. ತಾಲೂಕಾಡಳಿತ, ಜನಪ್ರತಿನಿಧಿ ಗಳು ಮಹಾರಾಷ್ಟ್ರದ ಕೋಯ್ನಾ-ರಾಜಾಪೂರ ಜಲಾಶಯದಿಂದ ನೀರು ತರಿಸಿ ಅಥಣಿ ತಾಲೂಕಿನ ಜನ-ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು.
*ಹಣಮಂತ ಗೌಳಿ, ಸವದಿ ಗ್ರಾಮದ ನಿವಾಸಿ.

Advertisement

Udayavani is now on Telegram. Click here to join our channel and stay updated with the latest news.

Next