Advertisement

ಪುತ್ತೂರು ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ನೀರಿನ ಕೊರತೆಯಿಲ್ಲ!

11:50 PM May 18, 2019 | mahesh |

ನಗರ: ಪುತ್ತೂರು ನಗರ ನೀರಿಗಾಗಿ ಉಪ್ಪಿನಂಗಡಿ ನೆಕ್ಕಿಲಾಡಿಯ ಕುಮಾರಧಾರಾ ನದಿಯನ್ನು ಆಶ್ರಯಿಸಿದೆ. ಆದರೆ ಸ್ವತಂತ್ರ ಜಲಾಶ್ರಯವಿಲ್ಲದ ಪುತ್ತೂರು ಸೀಮೆಯ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಕಡು ಬೇಸಗೆಯಲ್ಲೂ ನೀರಿನ ಬರ ಬಂದ ದಾಖಲೆ ಇಲ್ಲ.

Advertisement

ದೇವಾಲಯದ ಮುತ್ತು ಬೆಳೆದ ಕೆರೆಯಲ್ಲಿ ನೀರು ಬತ್ತಿ ಹೋದ ಉದಾಹರಣೆ ಇಲ್ಲ. ಕೆರೆಯ ನೀರನ್ನು ಇಲ್ಲಿ ಉಪಯೋಗ ಮಾಡುತ್ತಿಲ್ಲ. ಕೆರೆಯ ನೀರಿನಲ್ಲಿ ಯಾರೂ ಸ್ನಾನ ಮಾಡುವಂತೆಯೂ ಇಲ್ಲ. ವರ್ಷದಲ್ಲಿ ಮೂರು ಬಾರಿ ನಡೆಯುವ ಕೆರೆ ಉತ್ಸವ ಸಂದರ್ಭ ಹೊರತಾಗಿ ಕೆರೆಗೆ ಅಳವಡಿಸಲಾದ ಗೇಟಿನ ಬೀಗ ತೆಗೆಯುವ ಕ್ರಮ ಇಲ್ಲ.

ದೇವಾಲಯದ ಒಳಾಂಗಣದಲ್ಲಿರುವ ತೀರ್ಥ ಬಾವಿಯಲ್ಲೂ ನೀರಿನ ಕೊರತೆ ಎದುರಾಗುವುದೇ ಇಲ್ಲ. ಈ ಬಾವಿಯನ್ನು ದೇವಾಲಯದ ಪುನರ್‌ ನಿರ್ಮಾಣದ ಸಂದರ್ಭದಲ್ಲಿ ಕೆಸರೆತ್ತುವ ಮೂಲಕ ದುರಸ್ತಿ ಮಾಡಲಾಗಿತ್ತು. ಅನಂತರದಲ್ಲೂ ದೇವಾಲಯದ ಧಾರ್ಮಿಕ ಕಾರ್ಯಗಳಿಗೆ ಬಳಸುವ ತೀರ್ಥ ಬಾವಿಯಲ್ಲಿ ಜಲಸಂಪನ್ಮೂಲ ಕಡಿಮೆಯಾಗುವುದಿಲ್ಲ.

ಭರಪೂರ ಲಭ್ಯತೆ
ದೇವಾಲಯದಲ್ಲಿ ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಈ ಕಾರ್ಯಕ್ಕೆ ದೇವಾಲಯದ ಕೊಳವೆ ಬಾವಿಯ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಕೊಳವೆ ಬಾವಿಗೆ ಹೊಂದಿಕೊಂಡಂತೆ 1ಲಕ್ಷ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ ಇದೆ. ಭರಪೂರ ನೀರಿನ ಲಭ್ಯತೆ ಕೊಳವೆ ಬಾವಿಯಲ್ಲೂ ಇದೆ. ದೇವಾಲಯದ ಪರಿಸರದಲ್ಲಿ ಈಗಲೂ ಗದ್ದೆ ಮತ್ತು ತೋಟಗಳಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಭೂಮಿಗೆ ಇಂಗಿಕೊಳ್ಳಲು ಅನುಕೂಲವಾಗುತ್ತದೆ. ಈ ಕಾರಣದಿಂದಾಗಿ ದೇವಾಲಯದ ಕೆರೆಗೆ, ತೀರ್ಥ ಬಾವಿಗೆ ಮತ್ತು ಕೊಳವೆ ಬಾವಿಗೆ ನೀರಿನ ಒರತೆ ಲಭ್ಯವಾಗುತ್ತದೆ.

ಕಾರಂಜಿಯ ನೀರು
ದೇವಾಲಯದ ಕೆರೆಯಲ್ಲಿ ಮೀನುಗಳಿಗೆ ಶುದ್ಧ ಆಮ್ಲಜನಕ ದೊರಕಲು ಅನುಕೂಲವಾಗುವಂತೆ ಟ್ಯಾಂಕ್‌ನಲ್ಲಿ ಹೆಚ್ಚುವರಿಯಾದ ನೀರನ್ನು ಕೆರೆಗೆ ಬಿಡಲಾಗುತ್ತದೆ. ಕೆರೆಯಲ್ಲಿ ಕಾರಂಜಿ ಮಾದರಿಯಲ್ಲಿ ಪೈಪ್‌ ಅಳವಡಿಸಲಾಗಿದ್ದು, ನಿತ್ಯ ಮೂರು ತಾಸು ಪಂಪ್‌ ಸಹಾಯದಿಂದ ಕಾರಂಜಿಯ ನೀರು ಹೊರ ಹೊಮ್ಮಿಸಿ ಕೆರೆಗೆ ಚೆಲ್ಲಲಾಗುತ್ತದೆ. ಈ ಪ್ರಯೋಗದಿಂದ ಕೆರೆಯಲ್ಲಿರುವ ವಿವಿಧ ಜಾತಿಯ ಮೀನುಗಳನ್ನು ರಕ್ಷಿಸಲಾಗುತ್ತಿದೆ.

Advertisement

ನೀರಿನ ಕೊರತೆ ಎದುರಾಗಿಲ್ಲ
ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನೀರಿನ ಕೊರತೆ ಇಲ್ಲ. ಬರದ ಸಂದರ್ಭದಲ್ಲೂ ದೇವರ ಸಾನ್ನಿಧ್ಯದಲ್ಲಿ ನೀರಿನ ಕೊರತೆ ಎಂದಿಗೂ ಎದುರಾಗಿಲ್ಲ. – ಎನ್‌. ಸುಧಾಕರ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next