Advertisement

ಬತ್ತಿ ಹೋಯಿತು ಬೆಂದ್ರ್ ತೀರ್ಥ!

03:20 AM Dec 04, 2018 | Karthik A |

ನಿಡ್ಪಳ್ಳಿ: ಒಂದು ಕಾಲದಲ್ಲಿ ಸಾವಿರಾರು ಯಾತ್ರಿಕರನ್ನು ಕೈ ಬೀಸಿ ಕರೆಯುತ್ತಿದ್ದ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಎಂದೇ ಪ್ರಖ್ಯಾತಿ ಪಡೆದ ಇರ್ದೆ- ಬೆಟ್ಟಂಪಾಡಿ ಗ್ರಾಮದ ಬೆಂದ್ರ್ ತೀರ್ಥ ಎಂಬ ಸ್ಥಳದಲ್ಲಿ ಈಗ ಏನೂ ಇಲ್ಲ. ಕೊಳದಲ್ಲಿ ನೀರೂ ಇಲ್ಲ. ಅಲ್ಲಿ ಏನು ಇತ್ತೋ ಅದೆಲ್ಲವೂ ಈಗ ಸಂಪೂರ್ಣ ಇಲ್ಲವಾಗಿದೆ. ಧಾರ್ಮಿಕ ಆಚರಣೆಗೆ ಮಾತ್ರ ಈ ಪ್ರವಾಸಿ ಕೇಂದ್ರ ಬಳಕೆಯಾಗುತ್ತಿದೆ.

Advertisement

ಮಳೆಗಾಲ ಮುಗಿದು ಒಂದು ತಿಂಗಳು ಆಗಿಲ್ಲ, ಬೆಂದ್ರ್ ತೀರ್ಥ ಬತ್ತಿ ಹೋಗಿದೆ. ತಳ ಭಾಗದಲ್ಲಿರುವ ಸಣ್ಣ ಹೊಂಡದಲ್ಲಿ ನೀರು ಇದೆ. ಅದೂ ಬಿಸಿಯಿಲ್ಲ. ಪಕ್ಕದಲ್ಲೇ ಹರಿಯುವ ಸೀರೆ ನದಿಯಿಂದ ಬರುವ ನೀರು ಕೊಳದಲ್ಲಿ ಶೇಖರಣೆಯಾಗಿದೆ. ನದಿಯ ನೀರು ಕಡಿಮೆಯಾದರೆ ಕೊಳ ಸಂಪೂರ್ಣ ಬತ್ತಿ ಹೋಗುತ್ತದೆ. ಕೊಳದಲ್ಲಿ ಬಿಸಿ ನೀರು ಸೃಷ್ಟಿಯಾಗದ ಕಾರಣ ಕೇಂದ್ರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಶೂನ್ಯವಾಗಿದೆ.

ಹತ್ತು ವರ್ಷಗಳಿಂದ ಕೊಳದಲ್ಲಿ ಬಿಸಿ ನೀರು ಉಕ್ಕುತ್ತಿಲ್ಲ. ಕೊಳಕ್ಕೆ ಹತ್ತಿರವಾಗಿ ಖಾಸಗಿ ವ್ಯಕ್ತಿಯೊಬ್ಬರು ಕೊಳವೆಬಾವಿ ತೆಗೆದ ಬಳಿಕ ಬಿಸಿ ನೀರಿನ ಬುಗ್ಗೆಯೇ ಬತ್ತಿ ಹೋಗಿದ್ದು, ಈಗ ಕೊಳವೆ ಬಾವಿಯಲ್ಲಿ ಬಿಸಿ ನೀರು ಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನಿರ್ವಹಣೆ ಇಲ್ಲ
ಕೊಳದ ಸುತ್ತ ಹಲವು ವರ್ಷಗಳ ಹಿಂದೆ ಸ್ನಾನಗೃಹ ಕೊಠಡಿ, ಶೌಚಾಲಯ, ರೆಸ್ಟ್‌ ರೂಂಗಳನ್ನು ನಿರ್ಮಿಸಲಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಅವೆಲ್ಲವೂ ಪಳೆಯುಳಿಕೆಯಂತೆ ಗೋಚರಿಸುತ್ತಿವೆ. ಕೊಳದ ಬಳಿ ಅಶ್ವತ್ಥ ಮರವೊಂದಿದ್ದು, ಅದಕ್ಕೆ ಕಟ್ಟೆಯನ್ನು ನಿರ್ಮಿಸಲಾಗಿದೆ. ಕ್ಷೇತ್ರದ ವಾರ್ಷಿಕ ಜಾತ್ರೆಯ ದಿನ ದೇವರ ಕಟ್ಟೆ ಪೂಜೆ ನಡೆಯುತ್ತದೆ. ನವರಾತ್ರಿ ದಿನವೂ ಇಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಆ ಸಮಯದಲ್ಲಿ ಈ ಪರಿಸರ ಹಾಗೂ ಕೊಳವನ್ನು ಸ್ವಚ್ಛ ಮಾಡಲಾಗುತ್ತದೆ. ಆಮೇಲೆ ಸ್ವಚ್ಛಗೊಳ್ಳುವುದು ಜಾತ್ರೆಯ ಸಂದರ್ಭದಲ್ಲೇ. ಆಟಿ ಅಮಾವಾಸ್ಯೆ ದಿನ ಮಾತ್ರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತೀರ್ಥಸ್ನಾನಕ್ಕೆ ಬರುತ್ತಾರೆ.

ಸರಕಾರ ಅಭಿವೃದ್ಧಿಪಡಿಸಲಿ
ಸುತ್ತ ಹಲವು ಕೊಳವೆ ಬಾವಿಗಳು ನಿರ್ಮಾಣವಾಗಿದ್ದರಿಂದ ಬೆಂದ್ರ್ ತೀರ್ಥದಲ್ಲಿ ನೀರು ಕಡಿಮೆಯಾಗಿದೆ. ಕೊಳದ ಕಲ್ಲು ಒಡೆದು ನೀರು ಹರಿದು ಬರಲು ಜಾಗ ಮಾಡಿಕೊಟ್ಟರೆ ಅನುಕೂಲವಾದೀತು. ಬೆಂದ್ರ್ ತೀರ್ಥ ಅಭಿವೃದ್ಧಿಗೆ ಹಲವು ಸಲ ಗ್ರಾ.ಪಂ. ವತಿಯಿಂದಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರ ಅಭಿವೃದ್ಧಿ ಮಾಡಿಕೊಟ್ಟರೆ, ನಿರ್ವಹಣೆ ಮಾಡಲು ಗ್ರಾ.ಪಂ. ಆಡಳಿತ ಸಿದ್ಧ. ಗ್ರಾ.ಪಂ.ನಿಂದಲೇ ಅಭಿವೃದ್ಧಿಪಡಿಸಲು ಅಷ್ಟು ಅನುದಾನ ಇಲ್ಲ.
– ರಕ್ಷಣ್‌ ರೈ  ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರು

Advertisement

— ಗಂಗಾಧರ ಸಿ.ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next