Advertisement

ಹಳೇ ಬೆಂಗಳೂರಲ್ಲಿ ನೀರಿನ ಅರಿವೇ ಇಲ್ಲ

12:56 AM May 11, 2019 | Lakshmi GovindaRaj |

ನಗರದ ಹೊರವಲಯದಲ್ಲಿನ ಹಳ್ಳಿಗಳ ಜನರಿಗೆ ನೀರಿನ ಮಹತ್ವದ ಬಗ್ಗೆ ಇರುವ ಅರಿವು, ಹಳೇ ಬೆಂಗಳೂರು ಭಾಗದ ಸುಶಿಕ್ಷಿತ ನಾಗರಿಕರಿಗಿಲ್ಲ! ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಯಲ್ಲಿ ಕೇಂದ್ರ ಭಾಗದ ಕಟ್ಟಡ ಮಾಲೀಕರು ತೀರಾ ನಿರ್ಲಕ್ಷ್ಯ ತೋರಿರುವುದು ಇದಕ್ಕೆ ನಿದರ್ಶನ.

Advertisement

ಬೆಂಗಳೂರು: ನೀರಿನ ಮಹತ್ವದ ಬಗ್ಗೆ ಹಳ್ಳಿ ಜನರಲ್ಲಿರುವ ಕನಿಷ್ಠ ಕಾಳಜಿಯೂ ಹಳೇ ಬೆಂಗಳೂರಿಗರಿಗೆ ಇಲ್ಲ. ಆದರೆ, ಜಲಮಂಡಳಿ ನಿಯಮದಂತೆ ನಗರದ ಹೊರವಲಯದಲ್ಲಿ ಇರುವ ಶೇ.90ರಷ್ಟು ಕಟ್ಟಡಗಳ ಮಾಲೀಕರು ಮಳೆನೀರು ಕೊಯ್ಲು ಅಳವಡಿಸಿಕೊಂಡು, ಮಾದರಿಯಾಗಿದ್ದಾರೆ.

ಕಾವೇರಿ ಸಂಪರ್ಕಕ್ಕೆ ಇನ್ನೂ ಪರದಾಡುತ್ತಿರುವ 110 ಹಳ್ಳಿಗಳ ಜನ, ನೀರಿನ ಮಹತ್ವ ಅರಿತಿದ್ದು, ಈ ಭಾಗದ 1,089 ಕಟ್ಟಡಗಳ ಪೈಕಿ 1,027 ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಕೆಯಾಗಿದೆ. ಆದರೆ, ಸುಶಿಕ್ಷಿತರು, ನೀತಿ-ನಿರೂಪಕರು, ಅಧಿಕಾರಿಗಳು ವಾಸಿಸುವ ಹೃದಯಭಾಗದಲ್ಲೇ ಮಳೆ ಕೊಯ್ಲು ವ್ಯವಸ್ಥೆಗೆ ಹಿನ್ನಡೆಯಾಗಿದೆ.

ಸಹಕಾರನಗರ, ರಾಜರಾಜೇಶ್ವರಿನಗರ, ಬ್ಯಾಟರಾಯನಪುರ, ನಾಗರಬಾವಿ, ಜೆ.ಪಿ.ನಗರ ಸೇರಿ ಪ್ರಮುಖ ಬಡಾವಣೆಗಳಲ್ಲಿ ಶೇ.70ರಷ್ಟು ಕಟ್ಟಡಗಳ ಮಾಲೀಕರು ಮಳೆ ಕೊಯ್ಲು ಅಳವಡಿಸಿಕೊಳ್ಳದೆ ಇಂದಿಗೂ ದಂಡ ಕಟ್ಟುತ್ತಿದ್ದಾರೆ.

ಬೆಂಗಳೂರು ಜಲಮಂಡಳಿ ನೀರು ಸರಬರಾಜು ಮತ್ತು ಒಳಚರಂಡಿ ಕಾಯಿದೆ-2009ರ ಪ್ರಕಾರ 30*40 ನಿವೇಶನದಲ್ಲಿ ನಿರ್ಮಾಣಗೊಳ್ಳುವ ಹೊಸ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. 2017ರಿಂದ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲು ದಂಡ ವಿಧಿಸುತ್ತಿದ್ದರೂ ಪ್ರಯೋಜನವಾಗಿಲ್ಲ.

Advertisement

ಬೆಂಗಳೂರಿನಲ್ಲಿ ಸ್ವಾತಂತ್ರ ಪೂರ್ವದಲ್ಲಿದ್ದ 280 ಕೆರೆಗಳ ಸಂಖ್ಯೆ, ಅಭಿವೃದ್ಧಿ ಹೆಸರಲ್ಲಿ ಹಾಗೂ ಒತ್ತುವರಿಯಿಂದ ಈಗ 194ಕ್ಕೆ ಇಳಿದಿದೆ. ಈ ಪೈಕಿ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಜತೆಗೆ, ಕೆರೆಗಳ ಸಂಖ್ಯೆ ಹಾಗೂ ಗಾತ್ರ ದಿನೇ ದಿನೆ ಕುಗ್ಗುತ್ತಿದೆ. ಅಂತರ್ಜಲವೂ ಬತ್ತುತ್ತಿದೆ. ಸಾವಿರ ಅಡಿ ಕೊಳವೆಬಾವಿ ಕೊರೆದರು ಹನಿ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ತಜ್ಞರ ಅಭಿಪ್ರಾಯ.

ಉದ್ಯಾನಗಳಲ್ಲೂ ಇಲ್ಲ ಮಳೆ ನೀರು ಕೊಯ್ಲು: ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ ಮಾತ್ರವಲ್ಲದೇ ನಗದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡಿರುವ 1,247 ಉದ್ಯಾನಗಳಿವೆ. ಆದರೆ, ಇಂದಿಗೂ ಈ ಉದ್ಯಾನಗಳು ನೀರಿಗಾಗಿ ಕೊಳವೆ ಬಾವಿ ಅವಲಂಬಿಸಿವೆ. ಯಾವ ಉದ್ಯಾನದಲ್ಲೂ ಮಳೆ ಕೊಯ್ಲು ಅಳವಡಿಸಿಲ್ಲ.

ಬೆಂಗಳೂರಿನಲ್ಲಿ ವಾರ್ಷಿಕ ಸುಮಾರು 900 ಮಿ.ಮೀ ಮಳೆಯಾಗುತ್ತಿದ್ದು, ಒಂದು ವೇಳೆ ಈ ಭಾಗದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಇಂಗುಗುಂಡಿ ನಿರ್ಮಿಸಿದರೆ ಸುತ್ತಮುತ್ತ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಜತೆಗೆ ಉದ್ಯಾನ ನಿರ್ವಹಣೆ ಹಾಗೂ ಪ್ರವಾಸಿಗರಿಗೂ ಕುಡಿಯಲು ನೀರು ಲಭ್ಯವಾಗಲಿದೆ. ಈ ಕುರಿತು ಬಿಬಿಎಂಪಿ ಹಾಗೂ ಜಲಮಂಡಳಿ ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ ಎನ್ನುತ್ತಾರೆ ಮಳೆನೀರು ಕೊಯ್ಲು ತಜ್ಞರು.

ವಾರ್ಷಿಕ 650 ಕೋಟಿ ಲೀಟರ್‌ ನೀರು ಪೋಲು: 30*40 ವಿಸ್ತೀರ್ಣದ ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದರಿಂದ ವಾರ್ಷಿಕ ಕನಿಷ್ಠ 60 ಸಾವಿರ ಲೀ. ಗರಿಷ್ಠ ಒಂದು ಲಕ್ಷ ಲೀ. ನೀರು ಸಂಗ್ರಹಿಸಬಹುದು ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಅಂತೆಯೇ ನಗರದಲ್ಲಿ 30*40 ವಿಸ್ತೀರ್ಣದ 1.16 ಲಕ್ಷ ಕಟ್ಟಡಗಳಿದ್ದು, ಅವುಗಳ ಪೈಕಿ 65 ಸಾವಿರ ಕಟ್ಟಡಗಳು ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿಲ್ಲ. ಅದರಂತೆ, ವಾರ್ಷಿಕ 500ರಿಂದ 650 ಕೋಟಿ ಲೀ. ನೀರು ಪೋಲಾಗುತ್ತಿದೆ.

ವರ್ಷ ಅರ್ಧದಷ್ಟು ದಿನಗಳು ಬಳಕೆಗೆ ಬರಲಿವೆ ಮಳೆನೀರು: ನಿತ್ಯ ಒಬ್ಬ ಮನುಷ್ಯನಿಗೆ 135 ಲೀ. ನೀರು, 4 ಮಂದಿಯಿರುವ ಮನೆಗೆ 500 ಲೀ. ನೀರು ಬೇಕಾಗುತ್ತದೆ. ಕುಡಿಯಲು ಹಾಗೂ ಆಹಾರ ಸಿದ್ಧಪಡಿಸಲು ನಿತ್ಯ ಒಬ್ಬರಿಗೆ 12 ಲೀ. ನೀರು ಅಗತ್ಯವಿದೆ. ಈ ಲೆಕ್ಕದಲ್ಲಿ ಮಳೆ ಕೊಯ್ಲು ಪದ್ಧತಿಯಲ್ಲಿ ಸಂಗ್ರಹಿಸಿದ 1 ಲಕ್ಷ ಲೀ ನೀರನ್ನು 180 ದಿನ ಅಂದರೆ ಅರ್ಧ ವರ್ಷ ಸುಲಭವಾಗಿ ಬಳಸಬಹುದು. ಕನಿಷ್ಠ ಮನೆ ಮುಂದಿನ ಕೈತೋಟ, ಶೌಚಾಲಯ ಸೇರಿ ಇತರೆ ಸ್ವತ್ಛತಾ ಕಾರ್ಯಕ್ಕೆ ಬಳಸಿದರೂ ನೀರನ ಬವಣೆ ಒಂದಿಷ್ಟು ತಗ್ಗಲಿದೆ.

ಎಸ್‌ಟಿಪಿ ಅಳವಡಿಸಿಕೊಳ್ಳದೇ ನೀರು ವ್ಯರ್ಥ: ಮಳೆ ನೀರು ಕೊಯ್ಲಿನಂತೆ, ಕಟ್ಟಡಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸುವುದು ಕೂಡ ಮಹತ್ವದ್ದಾಗಿದೆ. ಎಸ್‌ಟಿಪಿ ಅಳವಡಿಕೆಯಿಂದ ನಿತ್ಯ ಬಳಸುವ ನೀರಿನಲ್ಲಿ ಶೇ.80ರಷ್ಟು ನೀರನ್ನು ಮರುಬಳಕೆ ಮಾಡಬಹುದು. ಹೀಗಾಗಿ, ಜಲಮಂಡಳಿಯು ನಗರದಲ್ಲಿ 2000 ಚ.ಅ ವಿಸ್ತೀರ್ಣ ಮೇಲ್ಪಟ್ಟ ಕಟ್ಟಡಗಳಿಗೆ ಎಸ್‌ಟಿಪಿ ಕಡ್ಡಾಯಗೊಳಿಸಿದೆ.

ಆದರೆ, ಇಂದಿಗೂ 497 ಅಪಾರ್ಟ್‌ಮೆಂಟ್‌ಗಳು ಎಸ್‌ಟಿಪಿ ಅಳವಡಿಸಿಕೊಂಡಿಲ್ಲ. ಮುಖ್ಯವಾಗಿ ಜಲಮಂಡಳಿಯ ಪೂರ್ವ ವಲಯದಲ್ಲಿ ಬರುವ ವೈಟ್‌ಫಿಲ್ಡ್‌ ಭಾಗದಲ್ಲಿ ಇಂತಹ ಅಪಾರ್ಟ್‌ಮೆಂಟ್‌ಗಳು ಹೆಚ್ಚಿವೆ. ಎಸ್‌ಟಿಪಿ ಅಳವಡಿಕೆಯಿಂದ ಅಪಾರ್ಟ್‌ಮೆಂಟ್‌ ಒಂದರಿಂದ ನಿತ್ಯ ಸುಮಾರು 5 ಸಾವಿರ ಲೀ. ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಬಹುದು ಎನ್ನುತ್ತಾರೆ ಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಸಿ.ಗಂಗಾಧರ್‌.

ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳದ ಉಪ ವಿಭಾಗಗಳು
ಉಪ ವಿಭಾಗ ಕಟ್ಟಡಗಳು ಮಳೆ ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡ
-ದಕ್ಷಿಣ-2 11,800 7,419 (ಜೆ.ಪಿ ನಗರ)
-ಉತ್ತರ-3 7,202 6,175 (ಸಹಕಾರ ನಗರ, ಬ್ಯಾಟರಾಯನ ಪುರ)
-ಪಶ್ಚಿಮ-3 6,483 5,184 (ರಾಜರಾಜೇಶ್ವರಿ ನಗರ ಸುತ್ತಮುತ್ತ)
-ದಕ್ಷಿಣ-4 5,853 4,181 (ಎಚ್‌.ಎಸ್‌.ಆರ್‌ ಬಡಾವಣೆ, ಐಐಟಿ ಬಡಾವಣೆ)
-ಪಶ್ಚಿಮ-2 6,028 4,207 (ಮೈಸೂರು ರಸ್ತೆ, ಗುಡ್ಡದ ಹಳ್ಳಿ ಪ್ರದೇಶ)

ಮಳೆ ನೀರನ್ನು ಮಾನವನ ನಿತ್ಯ ಚಟುವಟಿಕೆಗಳಿಗೆ ಬಳಸಬಹುದು. ನಗರದ ಎಲ್ಲಾ ಕಟ್ಟಡಗಳು ಕಡ್ಡಾಯವಾಗಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬಳಸಬೇಕು ಅಥವಾ ಇಂಗಿಸಬೇಕು. ಆಗ ಒಂದೇ ವರ್ಷದಲ್ಲಿ ಅಂತರ್ಜಲ ಪ್ರಮಾಣ ಹೆಚ್ಚಳವಾಗಿ, ನಗರದ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
-ವಿಶ್ವನಾಥ್‌, ಮಳೆ ನೀರು ಕೊಯ್ಲು ತಜ್ಞ

ನಗರ ಭಾಗದ ಜನರಿಗೆ ಸಾಕಷ್ಟು ಜಾಗೃತಿ ಮೂಡಿಸಿ, ನಂತರ ದಂಡ ಹಾಕಿದರು ಎಚ್ಚೆತ್ತುಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಮನೆ ಮನೆ ಜಾಗೃತಿಗೆ ಮುಂದಾಗಬೇಕೊ ಅಥವಾ ನೀರು ಸಂಪರ್ಕ ಕಡಿತ ಮಾಡಬೇಕೊ ಎಂಬ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
-ಬಿ.ಎಂ.ಮಂಜುನಾಥ್‌, ಜಲಮಂಡಳಿ ಸಾರ್ವಜನಿಕ ಸಂಪರ್ಕಾಧಿಕಾರಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next