Advertisement

ಇನ್ನು ವಾಹನ ಅಡ್ಡಗಟ್ಟಿ ಡಿಎಲ್‌ ತಪಾಸಣೆ ಇಲ್ಲ!

11:49 AM Jan 02, 2017 | Team Udayavani |

ಬೆಂಗಳೂರು: ಪಾಸ್‌ಪೋರ್ಟ್‌ ಸೇರಿದಂತೆ ದಾಖಲಾತಿಗಳ ಪರಿಶೀಲನೆಗೆ ಪೊಲೀಸರಿಗೆ ಕಾಲಮಿತಿ ನಿಗದಿಪಡಿಸುವುದರ ಜತೆಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವಂತೆ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ಚಾಲನಾ ಪರವಾನಗಿ ತಪಾಸಣೆ ನಡೆಸುವ ಸಂಚಾರ ಪೊಲೀಸರ ಕಾರ್ಯಗಳಿಗೆ ನಗರಕ್ಕೆ ಬಂದಿರುವ ಹೊಸ ಪೊಲೀಸ್‌ ಆಯುಕ್ತರು ಬ್ರೇಕ್‌ ಹಾಕಿದ್ದಾರೆ.

Advertisement

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಭಾನುವಾರ ಎನ್‌.ಎಸ್‌. ಮೇಘರಿಕ್‌ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಪ್ರವೀಣ್‌ ಸೂದ್‌ ಈ ಎರಡು ಹೊಸ ಯೋಜನೆಗಳನ್ನು ನೂತನ ವರ್ಷಾರಂಭದಲ್ಲಿ ಘೋಷಿಸಿದ್ದಾರೆ. ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಹಳ ದಿನಗಳಿಂದ ನಗರದ ನಾಗರಿಕರಿಗೆ ಕಾಡುತ್ತಿರುವ ಪೊಲೀಸ್‌ ಪರಿಶೀಲನೆ (ವೆರಿಫಿಕೇಷನ್‌) ಹಾಗೂ ಸಂಚಾರ ದಟ್ಟಣೆ ಸಮಸ್ಯೆಗಳ ಶಾಶ್ವತ ನಿವಾರಣೆ ಕುರಿತಂತೆ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಈ ಹಿಂದೆ ಮೂರು ವರ್ಷ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಪ್ರವೀಣ್‌ ಸೂದ್‌ ಅವರಿಗೆ ನಗರದ ಸಂಚಾರ ಸಮಸ್ಯೆಯ ಸ್ಪಷ್ಟ ಅರವಿದೆ. ಅಲ್ಲದೆ, ಇದು ಅವರ ನೆಚ್ಚಿನ ಕ್ಷೇತ್ರವೂ ಹೌದು. ಹೀಗಾಗಿ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.

ಅದೇ ರೀತಿ ಪಾಸ್‌ಪೋರ್ಟ್‌, ಉದ್ಯೋಗ ಸೇರಿದಂತೆ ಕೆಲವು ದಾಖಲೆಗಳ ಪರಿಶೀಲನೆ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಆ ದಾಖಲೆಗಳ ಪರಿಶೀಲನೆಗೆ 15 ದಿನಗಳ ಗಡುವು ವಿಧಿಸಿದ್ದಾರೆ. 15 ದಿನಗಳಲ್ಲಿ ಪರಿಶೀಲನೆ ಕಾರ್ಯ ಮುಗಿಸಿ ಸಂಬಂಧಿಸಿದವರಿಗೆ ವರದಿ ನೀಡುವಂತೆ ಆದೇಶಿಸುವುದಾಗಿ ಹೇಳಿದ್ದಾರೆ. ಇದರ ಜತೆಗೆ ಮಹಿಳೆ ಮತ್ತು ಮಕ್ಕಳ ರಕ್ಷಣೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಚಾರಕ್ಕೂ ಪ್ರಾಶಸ್ತ್ಯ ನೀಡಿ ಒಟ್ಟಾರೆ ನಗರದ ಜನಜೀವನ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ.

ಡ್ರಂಕ್‌ ಆ್ಯಂಡ್‌ ಡ್ರೈವ್‌ಗೆ ಅನ್ವಯವಿಲ್ಲ: ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಓಡಾಟ ಹೆಚ್ಚಾಗಿದೆ. ಇದರ ಮಧ್ಯೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಚಾಲನಾ ಪರವಾನಗಿ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮಾಡಿದರೆ ಸಂಚಾರ ದಟ್ಟಣೆಯಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಆದ್ದರಿಂದ ವಾಹನಗಳು ಸಂಚಾರ ನಿಯಮ ಉಲ್ಲಂ ಸಿರುವುದನ್ನು ಕಣ್ಣಾರೆ ನೋಡಿದರೆ ಮಾತ್ರ ವಾಹನಗಳನ್ನು ನಿಲ್ಲಿಸಿ ಚಾಲಕರ ದಾಖಲೆ ಪರಿಶೀಲನೆ ನಡೆಸಬೇಕು ಎಂದು ಸಂಚಾರ ವಿಭಾಗದ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಆಯುಕ್ತರು ತಿಳಿಸಿದರು.

Advertisement

ಆದರೆ, ಸಂಚಾರ ವಿಭಾಗದ ಪೊಲೀಸರು ನಡೆಸುವ ಡ್ರಂಕ್‌ ಆ್ಯಂಡ್‌ ಡ್ರೈವ್‌ ಕಾರ್ಯಾಚರಣೆಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಚಾಲನಾ ಪರವಾನಗಿ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸುವಾಗ ಯಾರೋ ಕೆಲವರು ದಾಖಲೆಗಳನ್ನು ಹೊಂದಿಲ್ಲದೇ ಇರುವವರು ಪತ್ತೆಯಾಗಬಹುದು. ಆದರೆ, ದಾಖಲೆಗಳನ್ನು ಹೊಂದಿದ್ದ ಶೇ. 90 ಮಂದಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದರು. ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ, ಆರ್‌.ಹಿತೇಂದ್ರ, ಎಸ್‌.ರವಿ ಉಪಸ್ಥಿತರಿದ್ದರು.

ಹೊಸ ವರ್ಷದ ಮೊದಲ ದಿನ ಅಧಿಕಾರ ಸ್ವೀಕಾರ
ಬೆಂಗಳೂರು:
ನೂತನ ವರ್ಷದ ಮೊದಲ ದಿನವೇ ರಾಜಧಾನಿಯ ಖಾಕಿ ಪಡೆಯ ನೂತನ ಸಾರಥಿಯಾಗಿ ಹಿರಿಯ ಐಪಿಎಸ್‌ ಅಧಿಕಾರಿ ಪ್ರವೀಣ್‌ ಸೂದ್‌ ಅಧಿಕಾರ ಸ್ವೀಕರಿಸಿದರು. ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌ ಅವರಿಂದ “ಬ್ಯಾಟನ್‌’ ಪಡೆಯುವ ಮೂಲಕ ಅಧಿಕಾರ ಗದ್ದುಗೆಯನ್ನು ಪ್ರವೀಣ್‌ ಸೂದ್‌ ಅಲಂಕರಿಸಿದರು. ಇದೇ ವೇಳೆ ಆಯುಕ್ತರೊಂದಿಗೆ ಮೂವರು ನೂತನ ಹೆಚ್ಚುವರಿ ಆಯುಕ್ತರು ಸಹ ಅಧಿಕಾರ ಸ್ವೀಕರಿಸಿದರು.

ಬೆಳಗ್ಗೆ 11.30 ಗಂಟೆಗೆ ಆಯುಕ್ತರ ಕಚೇರಿಗೆ ಆಗಮಿಸಿದ ಪ್ರವೀಣ್‌ ಸೂದ್‌ ಅವರಿಗೆ ನಿರ್ಗಮಿತ ಆಯುಕ್ತ ಮೇಘರಿಕ್‌ ಅಧಿಕಾರ ಹಸ್ತಾಂತರಿಸಿ ಶುಭಕೋರಿ ತೆರಳಿದರು. ಆನಂತರ ಹಿರಿಯ ಅಧಿಕಾರಿಗಳ ಜತೆ ಅನೌಪಚಾರಿಕವಾಗಿ ಸಭೆ ನಡೆಸಿದ ನೂತನ ಆಯುಕ್ತರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದ ಅಭಿನಂದನೆ ಸ್ವೀಕರಿಸಿದರು. ಮಧ್ಯಾಹ್ನ 12.30 ಗಂಟೆಗೆ ಲಘುವಾಗಿ ಪತ್ರಿಕಾಗೋಷ್ಠಿ ನಡೆಸಿದ ಆಯುಕ್ತರು, ನಗರ ಸುರಕ್ಷತೆ ಹಾಗೂ ಪ್ರಗತಿ ಕುರಿತು ತಾವು ಹೊಂದಿರುವ “ವಿಷನ್‌’ ಬಗ್ಗೆ ಚುಟುಕಾಗಿ ಹೇಳಿದರು.

ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರವೀಣ್‌ ಸೂದ್‌, ಮಧ್ಯಾಹ್ನ 2 ಗಂಟೆಗೆ ಡಿಜಿಪಿ ಓಂಪ್ರಕಾಶ್‌ ಅವರನ್ನು ಭೇಟಿಯಾದರು. ಅಧಿಕಾರ ಸ್ವೀಕಾರಕ್ಕೂ ಮುನ್ನ ಬೆಳಗ್ಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರಿಗೂ ನೂತನ ವರ್ಷದ ಶುಭ ಕೋರಿದರು.

ಇಂದು ಹಿರಿಯ ಅಧಿಕಾರಿಗಳ ಸಭೆ: ಭಾನುವಾರ ಸಂಜೆ 6 ಗಂಟೆಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಂಚಾರ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ನೂತನ ಆಯುಕ್ತರು, ನಗರದ ಸಂಚಾರ ವ್ಯವಸ್ಥೆ ಕುರಿತು ಸಂಕ್ಷಿಪ್ತವಾಗಿ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಹಿತೇಂದ್ರ ಅವರಿಂದ ಮಾಹಿತಿ ಸಂಗ್ರಹಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣ ಕುರಿತು ಸೋಮವಾರ ನಗರದ ಎಲ್ಲಾ ಡಿಸಿಪಿ,

ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ಗಳ ಸಭೆಯನ್ನು ಪ್ರವೀಣ್‌ ಸೂದ್‌ ಕರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಹೆಚ್ಚುವರಿ ಪೊಲೀಸ್‌ ಆಯುಕ್ತ ಹುದ್ದೆಗೆ ನಿಯೋಜಿತರಾಗಿದ್ದ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಮಾಲಿನ ಕೃಷ್ಣಮೂರ್ತಿ (ಪಶ್ಚಿಮ ವಿಭಾಗ), ಎಸ್‌.ರವಿ (ಅಪರಾಧ) ಹಾಗೂ ಹೇಮಂತ್‌ ನಿಂಬಾಳ್ಕರ್‌ (ಪೂರ್ವ) ಅವರು ಕೂಡ ನೂತನ ಆಯುಕ್ತರ ಜತೆಗೆ ಅಧಿಕಾರ ಸ್ವೀಕರಿಸಿದರು.

ನೂತನ ಆಯಕ್ತರ ಘೋಷಣೆಗಳು
1. ಪಾಸ್‌ಪೋರ್ಟ್‌, ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳ “ಪೊಲೀಸ್‌ ಪರಿಶೀಲನೆ’ಗೆ 15 ದಿನಗಳ ಗಡುವು
2. ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕ್ರಮ, ಗಸ್ತು ವ್ಯವಸ್ಥೆ ಬಿಗಿ
3. ನಿಯಂತ್ರಣ ಕೊಠಡಿಹಾಗೂ ಸಹಾಯವಾಣಿಗಳ ಸೇವೆ ಮತ್ತಷ್ಟು “ಜನ ಸ್ನೇಹಿ’
4. ನಾಗರಿಕ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಹೆಚ್ಚಿನ ಆದತ್ಯೆ, ತಾಂತ್ರಿಕತೆ ಅಳವಡಿಸಲು ಯೋಜನೆ

ಠಾಣೆಗಳಲ್ಲಿ ಜ. 8ರಂದು “ಪಾಸ್‌ಪಾರ್ಟ್‌ ಮೇಳ’
ಪಾಸ್‌ಪೋರ್ಟ್‌, ಉದ್ಯೋಗ ಸೇರಿದಂತೆ ಪೊಲೀಸ್‌ ಪರಿಶೀಲನೆ (ವೆರಿಫಿಕೇಷನ್‌) ನಿಧಾನವಾಗುತ್ತಿರುವುದ ರಿಂದ ಜನರಿಗೆ ತೊಂದರೆಯಾಗುತ್ತಿದೆ. ವಿಳಂಬದಿಂದಾಗಿ ಸಕಾಲಕ್ಕೆ ಪೊಲೀಸರಿಂದ ಪಡೆಯಬಹುದಾದ ದಾಖಲಾತಿಗಳು ಜನರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ದಾಖಲೆಗಳ ಪರಿಶೀಲನೆ ಕಾರ್ಯಕ್ಕೆ 15 ದಿನಗಳ
ಗಡುವು ವಿಧಿಸಲಾಗುವುದು ಎಂದು ಆಯುಕ್ತರು ಹೇಳಿದರು.

ಅಲ್ಲದೆ, ನಗರದ ಎಲ್ಲಾ ಠಾಣೆಗಳಲ್ಲಿ ಜ. 8ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟವೆರೆಗೆ “ಪಾಸ್‌ ಪೋರ್ಟ್‌ ಮೇಳ’ ನಡೆಯಲಿದೆ. ಈ ಮೇಳದಲ್ಲಿ ಪಾಸ್‌ ಪೋರ್ಟ್‌ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದು, ಇದರ ಪ್ರಯೋಜನ ಪಡೆಯುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೊದಲ ಹಂತದಲ್ಲಿ ಪಾರ್ಸ್‌ಪೋರ್ಟ್‌ ಸಂಬಂಧಿಸಿದ ಅರ್ಜಿಗಳ ವಿಲೇವಾರಿಗೆ ಎರಡು ವಾರ ಗುಡುವು ವಿಧಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅವಧಿ ಕಡಿಮೆಗೊಳಿಸಲಾಗುವುದು ಎಂದು ಅವರು ಇದೇ ವೇಳೆ ಪ್ರಕಟಿಸಿದರು.

ಹೊಯ್ಸಳ ವಾಹನಗಳ ಗಸ್ತು ಹೆಚ್ಚಳ
ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ನಿಯಂತ್ರಣ ಕೊಠಡಿ (ಕಂಟ್ರೋಲ್‌ ರೂಮ್‌) ಹಾಗೂ ಸಹಾಯ ವಾಣಿಗಳ ಸೇವೆಯನ್ನು ಮತ್ತಷ್ಟು “ಜನ ಸ್ನೇಹಿ’ಯಾಗಿಸಲಾಗುತ್ತದೆ ಎಂದು ಭರವಸೆ ನೀಡಿದರು. ನಾಗರಿಕ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಹೆಚ್ಚಿನ ಆದತ್ಯೆ ನೀಡಲಾಗುತ್ತದೆ. ಪ್ರಸುತ್ತ ಸಾಮಾಜಿಕ ತಾಣಗಳು ಪರಿಣಾಮಕಾರಿಯಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜನರ ಬಳಿಗೆ ಆಡಳಿತ ತೆಗೆದುಕೊಂಡು ಹೋಗಲಾಗುವುದು. ಜತೆಗೆ ತಾಂತ್ರಿಕತೆ ಅಳವಡಿಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಚುನಾವಣಾ ಪೂರ್ವ ವರ್ಷದಲ್ಲಿ ವರ್ಗಾವಣೆ ನಡೆದಿದೆ ಎಂಬುದು ತಪ್ಪು. ನಮ್ಮ ಮುಂದೆ ಯಾವುದೇ ಚುನಾವಣಾ ವಿಚಾರವಿಲ್ಲ. ಸರ್ಕಾರ ನನಗೆ ಜವಾಬ್ದಾರಿ ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಾಗರಿಕ ಕೇಂದ್ರೀತ ವ್ಯವಸ್ಥೆ ಜಾರಿಗೆ ಆದ್ಯತೆ ನೀಡಲಾಗುವುದು. ನಗರ ಏನು ಬಯಸುತ್ತಿದೆ? ಯಾವ ಸಮಸ್ಯೆ ಎದುರಿಸುತ್ತದೆ ಎಂಬುದರ ಅರಿವಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ.
-ಪ್ರವೀಣ್‌ ಸೂದ್‌, ನೂತನ ಪೊಲೀಸ್‌ ಆಯುಕ್ತ

ನನ್ನ ಅವಧಿಯಲ್ಲಿ ನಗರದ ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಿದ ತೃಪ್ತಿಯಿಂದ. ಆಡಳಿತ ಸುಧಾರಣೆಗೆ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಯಾವುದೇ ವಿವಾದಗಳು ಉಂಟಾಗದಂತೆ ಸಮರ್ಥವಾಗಿ ಹೊಣೆಗಾರಿಕೆ ನಿಭಾಯಿಸಿ ನಗರ ಪೊಲೀಸ್‌ ಆಯುಕ್ತರ ಹುದ್ದೆಯಿಂದ ನಿರ್ಗಮಿಸುತ್ತಿದ್ದೇನೆ.
-ಎನ್‌.ಎಸ್‌.ಮೇಘರಿಕ್‌, ನಿರ್ಗಮಿತ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next