ಮೈಸೂರು: ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಬೆಳೆಗಳಿಗೆ ಅವಶ್ಯವಿರುವ ಯೂರಿಯಾ ರಸಗೊಬ್ಬರದ ದಾಸ್ತಾನು ಜಿಲ್ಲೆಯಲ್ಲಿ ಲಭ್ಯವಿದ್ದು ಯಾವುದೇ ಕೊರತೆ ಇರುವುದಿಲ್ಲ. ಆದರೆ, ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಮಾರಾಟ ಮಹಾ ಮಂಡಳಿಯಲ್ಲಿ 759 ಮೆ.ಟನ್ ಕಾಪು ದಾಸ್ತಾನು ಸೇರಿದಂತೆ ಒಟ್ಟಾರೆಯಾಗಿ 4396 ಮೆ.ಟನ್ ಯೂರಿಯಾ ರಸಗೊಬ್ಬರ ಲಭ್ಯವಿದೆ. ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಿ ಲೈಸೆನ್ಸ್ ರದ್ದುಪಡಿಸಲುಕ್ರಮವಹಿಸಲಾಗುವುದು. ರಸಗೊಬ್ಬರ ಖರೀದಿಸುವ ರೈತರು ತಪ್ಪದೇ ತಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಮನವಿ ಮಾಡಿದ್ದಾರೆ.
……………………………………………………………………………………………………………………………………………………………………..
ಇಂದಿನಿಂದ ಹೋಬಳಿವಾರು ಕೋವಿಡ್ ಟೆಸ್ಟ್ :
ಎಚ್.ಡಿ.ಕೋಟೆ: ಸರ್ಕಾರದ ಆದೇಶದಂತೆ ತಾಲೂಕಿನಲ್ಲಿ 10 ಕೋವಿಡ್ ಸೋಂಕು ತಪಾಸಣೆ ತಂಡಗಳು ಸಜ್ಜಾಗಿದ್ದು, ಮಂಗಳವಾರದಿಂದಲೇ ಹೋಬಳಿ ಮಟ್ಟದಲ್ಲಿ ತಪಾಸಣೆ ಕಾರ್ಯ ಶುರುವಾಗಲಿದೆ ಎಂದು ಎಂದು ತಾಲೂಕು ಅರೋಗ್ಯಾಧಿಕಾರಿ ಡಾ.ರವಿ ಕುಮಾರ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ತರಬೇತಿ ಪಡೆದ ಗ್ರಾಪಂ ದತ್ತಾಂಶ ನಮೂದಕರು, ವಿವೇಕಾನಂದ ಸಂಸ್ಥೆಯ ಆರೋಗ್ಯ ಸ್ವಯಂ ಸೇವಕರು,ವಿವೇಕಾ ನಂದ ಸಂಸ್ಥೆಯ ಮುಖ್ಯಸ್ಥರು, ತಾಲೂಕಿನ ಕಂದಾಯ ಇಲಾಖೆ ನಿರೀಕ್ಷಕರು, ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.
ಸೋಂಕಿನ ತಪಾಸಣೆಗೆ ಜನ ಭಯ ಭೀತರಾಗುವ ಸಾಧ್ಯತೆಗಳಿದ್ದು, ನಿಯೋಜಿತರು ಕಡ್ಡಾಯವಾಗಿ ಜನರ ಮನವೊಲಿಸಿ ಪ್ರತಿದಿನ 300 ಜನರ ತಪಾಸಣೆ ನಡೆಸಬೇಕು. ಸಂಗ್ರಹಿಸಿದ ಗಂಟಲು ದ್ರವ ಪರೀಕ್ಷೆ ಸ್ಥಳದಲ್ಲಿಯೇ 1 ತಾಸಿನ ಒಳಗೆ ಲಭ್ಯವಾಗಲಿದೆ. ತಾಲೂಕಿನ 39 ಗ್ರಾಮ ಪಂಚಾಯ್ತಿಗಳಲ್ಲೂ ತಪಾಸಣೆ ನಡೆಸಲಾಗುವುದು ಎಂದರು.
ಹೋಬಳಿವಾರು, ಗ್ರಾಮ ಪಂಚಾಯಿತಿವಾರು ಕಡ್ಡಾಯವಾಗಿ ಕೋವಿಡ್ ತಪಾಸಣೆ ನಡೆಸಬೇಕು ಎಂದು ತಹಶೀಲ್ದಾರ್ ಆರ್. ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ತಾಪಂ ಇಒರಾಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಸರಗೂರು ತಾಪಂ ಇಒ ಶ್ರೀನಿವಾಸ್, ವಿವೇಕಾನಂದ ಸಂಸ್ಥೆಯ ಸಿಬ್ಬಂದಿ, ಮತ್ತು ಗ್ರಾಪಂ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.