Advertisement

ಛೇ..ಸಿಮೆಂಟ್‌ ನಗರಿಯಲ್ಲಿ ಮೂತ್ರಾಲಯ ಇಲ್ಲ!

12:50 PM Sep 08, 2017 | Team Udayavani |

ವಾಡಿ: ಬೆಳೆಯುತ್ತಿರುವ ಪಟ್ಟಣದಲ್ಲಿ ಕನಿಷ್ಠ ಮೂತ್ರಾಲಯಗಳ ಮೂಲಸೌಕರ್ಯಗಳಿಲ್ಲ ಎಂದಾದರೆ, ಇಲ್ಲಿ ನಾಚಿಕೆ ಪಡಬೇಕಾದದ್ದು ಅಧಿಕಾರಿಗಳ್ಳೋ, ಜನಪ್ರತಿನಿಧಿಗಳ್ಳೋ ಅಥವಾ ಮತಹಾಕಿದ ಜನತೆಯೋ ಎನ್ನುವುದು
ಯಕ್ಷ ಪ್ರಶ್ನೆಯಾಗಿದೆ.

Advertisement

ಒಟ್ಟು 23 ವಾರ್ಡ್‌ಗಳಿರುವ ಹಾಗೂ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣದಲ್ಲಿ ಪುರಸಭೆ ಆಡಳಿತವಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೃಹತ್‌ ಸಿಮೆಂಟ್‌ ಕಾರ್ಖಾನೆಯಿದೆ. ಅಷ್ಟಕ್ಕೂ ಇದು ಅಪ್ಪಟ ಕಾರ್ಮಿಕ ನಗರಿ. ಇಲ್ಲಿ ಶೇ.90 ರಷ್ಟು ಭಾಗ ದುಡಿಯುವ ಜನರಿದ್ದಾರೆ. ಕಲ್ಲು ಗಣಿ ಕಾರ್ಮಿಕರು, ಎಸಿಸಿ ಸಿಮೆಂಟ್‌ ಕಂಪನಿ ಕಾರ್ಮಿಕರು, ಪೌರಕಾರ್ಮಿಕರು, ದಿನಗೂಲಿ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರಿಂದ ಪಟ್ಟಣ ಆವರಿಸಿಕೊಂಡಿದೆ.

ಪಟ್ಟಣದ ಯಾವ ರಸ್ತೆಗಳ ಬದಿಯಲ್ಲೂ ಸಾರ್ವಜನಿಕ ಮೂತ್ರಾಲಯಗಳು ಕಾಣಸಿಗುವುದಿಲ್ಲ. ಪುರುಷರು ಗೋಡೆಗಳಿಗೆ ಒರಗಿ ನಿಲ್ಲುವ ಅನಾಗರಿಕ ಪದ್ಧತಿ ಕಂಡು ಕೇಂದ್ರ ಸರಕಾರದ ಸ್ವತ್ಛ ಭಾರತ ಅಭಿಯಾನ ಯೋಜನೆ ಮುಸಿಮುಸಿ ನಗುತ್ತಿದೆ. ಪುರಸಭೆ ಕಚೇರಿಯ ಗೋಡೆಗಳಿಗೆ ನಿತ್ಯ ಮೂತ್ರ ವಿಸರ್ಜಿಸುವರ ಸಂಖ್ಯೆಯೂ ಹೆಚ್ಚಿದೆ. ನೈಸರ್ಗಿಕ ಕ್ರಿಯೆ ತಡೆಯಲಾಗದೆ ಸಾರ್ವಜನಿಕರು ಸಿಕ್ಕಸಿಕ್ಕ ಗೋಡೆಗಳ ಆಸರೆಗೆ ನಿಂತು ಮೂತ್ರ ವಿಸರ್ಜಿಸುವುದನ್ನು ಕಂಡು ವಿದ್ಯಾರ್ಥಿನಿಯರು, ಮಹಿಳೆಯರು, ಕಣ್ಣು-ಮೂಗು ಮುಚ್ಚಿಕೊಂಡು ಹೆಜ್ಜೆ ಹಾಕಬೇಕಾದ ಹೀನಾಯ ಸ್ಥಿತಿ ಇಲ್ಲಿ ಜೀವಂತವಿದೆ.

ಸ್ವತ್ಛ ಭಾರತ ಯೋಜನೆ ಸಾಕಾರಕ್ಕೆ ಮುಂದಾಗಿರುವ ಪುರಸಭೆ ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಪ್ರಭಾತ್‌ಫೇರಿ ಮಾಡಿಸಿದ್ದಾರೆ. ಪಟ್ಟಣದ ವಿವಿಧೆಡೆ ಜಾಹಿರಾತು ಪ್ರಕಟಿಸಿ ಮೂಲಸೌಕರ್ಯ ಜಾಗೃತಿಗೆ ಮುಂದಾಗಿದ್ದಾರೆ. ಕನಿಷ್ಠ ಒಂದು ಸ್ಥಳದಲ್ಲಾದರೂ ಮೂತ್ರಾಲಯ ಸೌಲಭ್ಯ ಒದಗಿಸದ ಪುರಸಭೆ ಅಧಿಕಾರಿಗಳ ಜಾಗೃತಿ ಅಭಿಯಾನಗಳು ಸ್ಥಳೀಯರ ಟೀಕೆಗೆ ಗುರಿಯಾಗಿವೆ.

ವಿಷಜಂತುಗಳ ಭಯದಲ್ಲಿಯೇ ಕಸದ ರಾಶಿಗಳ ಮಧ್ಯೆ ನಿಂತು ಮೂತ್ರ ವಿಸರ್ಜಿಸುವಂತ ದುಸ್ಥಿತಿ ಇಲ್ಲಿದೆ. ಪುರಸಭೆ ಸಿಬ್ಬಂದಿಯೊಬ್ಬ ವಾರದ ಹಿಂದಷ್ಟೇ ಪುರಸಭೆ ಸಮೀಪದ ಪಾಳು ಗೋಡೆ ಮರೆಗೆ ಮೂತ್ರಕ್ಕೆ ಹೋದಾಗ ಹಾವು ಕಚ್ಚಿಸಿಕೊಂಡು ಆಸ್ಪತ್ರೆಗೆ ಸೇರಿದ ಘಟನೆಯೂ ನಡೆದಿದೆ. ಇಷ್ಟಾದರೂ ಅಧಿಕಾರಿಗಳು, ವಾರ್ಡ್‌ ಸದಸ್ಯರು ಎಚ್ಚೆತ್ತುಕೊಳ್ಳದಿರುವುದು ಬೇಜವಾಬ್ದಾರಿ ಪರಮಾವಧಿ ಆಗಿದೆ. 

Advertisement

ಪುರಸಭೆ ಖಜಾನೆಯಲ್ಲಿ ಕೋಟ್ಯಂತರ ರೂ. ಅನುದಾನ ಕೊಳೆಯುತ್ತಿದೆ. ಈ ಅನುದಾನ ಯಾವ ಕಾರ್ಯಕ್ಕೆ ಬಳಕೆಯಾಗುತ್ತಿದೆ ಎನ್ನುವ ಪ್ರಶ್ನೆಗೆ ಪುರಸಭೆಯೇ ಉತ್ತರಿಸಬೇಕಿದೆ.

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next