Advertisement

ಕಾಂಗ್ರೆಸ್‌ ನಂಥ ಭ್ರಷ್ಟ ಸರ್ಕಾರ ಕಂಡಿಲ್ಲ

01:31 PM May 07, 2018 | Team Udayavani |

ರಾಯಚೂರು: ರಾಜ್ಯವನ್ನು ಐದು ವರ್ಷಗಳ ಕಾಲ ಆಳಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ನಂಥ ಭ್ರಷ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ಎಲ್ಲೂ ಕಂಡಿಲ್ಲ. ಮುಂದೆಯೂ ನೋಡುವುದಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು. ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Advertisement

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇರಬಾರದು ಎಂಬ ದುರುದ್ದೇಶದಿಂದ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಭಾರಿ ಷಡ್ಯಂತ್ರ ರೂಪಿಸಿವೆ. ಜೆಡಿಎಸ್‌ನಲ್ಲಿ ಬೆಳೆದು ಡಿಸಿಎಂ ಅಧಿಕಾರ ಅನುಭವಿಸಿದ ಸಿದ್ಧರಾಮಯ್ಯ, ಕಾಂಗ್ರೆಸ್‌ ಸೇರಿ ಸಿಎಂ ಆದರು. ಈಗ ಜೆಡಿಎಸ್‌ನ 7 ಶಾಸಕರನ್ನು ಕಾಂಗ್ರೆಸ್‌ ಗೆ ಸೆಳೆದು ದ್ರೋಹ ಮಾಡಿದ್ದಾರೆ. ಆದರೆ ಇದರಿಂದ ಜೆಡಿಎಸ್‌ ಎಂದೂ ದೃತಿಗೆಡುವುದಿಲ್ಲ ಎಂದು ಹೇಳಿದರು. 

ನಾನು ಪ್ರಧಾನಿಯಾಗಿದ್ದಾಗ ಜಿಲ್ಲೆಯ ತುಂಗಭದ್ರಾ ಎಡದಂಡೆ ನಾಲೆ ದುರಸ್ತಿಗೆ 20 ಕೋಟಿ ಅನುದಾನ ನೀಡಿದ್ದೆ. ಅದರಂತೆ ನಾರಾಯಣಪುರ ಬಲದಂಡೆ ಯೋಜನೆಗೆ 480 ಕೋಟಿ ರೂ. ಅನುದಾನ ನೀಡಿ ಕಾಲುವೆ ನಿರ್ಮಿಸಲಾಗಿತ್ತು. ಆದರೆ. ಪ್ರಧಾನಿ ಮೋದಿ ಕರ್ನಾಟಕ ವಿಕಾಸ ಎಂದು ಬೊಬ್ಬೆ ಇಡುತ್ತಿದ್ದು, ನಾಲ್ಕು ವರ್ಷದ ಅಧಿಕಾರದಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಹೇಳಲಿ ಎಂದು ಸವಾಲೆಸೆದರು. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಮೂಲಕ ಬಡವರಿಗೆ ಊಟ ಕೊಡುತ್ತೇನೆ ಎಂದು ಹೇಳುವ ಸಿದ್ದರಾಮಯ್ಯ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕೊಟ್ಟರೆ ಅವರೇ ನಾಡಿಗೇ ಅನ್ನ ಕೊಡುತ್ತಾರೆ. ನಗರದಲ್ಲಿ 20 ಕೋಟಿ ರೂ.
ವೆಚ್ಚದ ಒಪೆಕ್‌ ಆಸ್ಪತ್ರೆ, 1,000 ಕೋಟಿಗೂ ಅ ಧಿಕ ಹಣ ನೀಡುವ ಮೂಲಕ ಥರ್ಮಲ್‌ ವಿದ್ಯುತ್‌ ಉತ್ಪಾದನೆಗೆ ನೀಡಿದೆ. ಅದರಂತೆ ರಾಯಚೂರು ಜಿಲ್ಲೆಯ 73 ಸಾವಿರ ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಈ ಭಾಗದ ರೈತರಿಗೆ ಸಮೃದ್ಧ ಬದುಕು ರೂಪಿಸಲು ನೆರವಾಗಿದ್ದೇನೆ. ನಾಯಕ ಸಮುದಾಯದ ಬೇಡಿಕೆಯಂತೆ ಪರಿಶಿಷ್ಟ ಪಂಗಡದ ಸೌಲಭ್ಯ ಕೊಡಿಸಿದ್ದೇನೆ. ಆದರೆ ಕಾಂಗ್ರೆಸ್‌, ಬಿಜೆಪಿ ಏನು ಎಂಬುದನ್ನು ಜಿಲ್ಲೆಯ ಜನರು ಅರಿಯಬೇಕು ಎಂದರು.

ಕುಮಾರಸ್ವಾಮಿ ರೈತರ 51 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದಾಕ್ಷಣ ಕಾಂಗ್ರೆಸ್‌, ಬಿಜೆಪಿ ನಾವೂ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಿವೆ. ಅಷ್ಟೊಂದು ಕಾಳಜಿ ಇದ್ದರೇ ಮೊದಲೇ ಏಕೆ ಹೇಳಲಿಲ್ಲ. ಸಾಲ ಸಂಪೂರ್ಣ ಮನ್ನಾ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
 
ದಲಿತರು, ರೈತರು, ಬಡಜನರು, ಹಿಂದುಳಿದ ಅಲ್ಪಸಂಖ್ಯಾತರು ಸಾಮಾಜಿಕ ಮುಖ್ಯವಾಹಿನಿಗೆ ಸೇರಲು ಕರ್ನಾಟಕದಲ್ಲಿ ಕುಮಾಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಜನರ ಬೆಂಬಲದಿಂದ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ಡ್ಯಾನಿಸ್‌ ಅಲಿ, ಬಿಎಸ್‌ಪಿಯ ಸತೀಶ್ಚಂದ್ರ ಮಿಶ್ರಾ, ಜರುಲ್ಲಾಖಾನ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಜೆಡಿಎಸ್‌ ಅಭ್ಯರ್ಥಿಗಳಾದ ವೆಂಕಟರಾವ್‌ ನಾಡಗೌಡ, ಮಹಾಂತೇಶ ಪಾಟೀಲ ಅತ್ತನೂರು, ರಾಜಾ ವೆಂಕಟಪ್ಪ ನಾಯಕ, ವೆಂಕಟೇಶ ಪೂಜಾರಿ, ಸಿದ್ದು ಬಂಡಿ, ರವಿ ಪಾಟೀಲ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ. ವಿರುಪಾಕ್ಷಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next