Advertisement
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳನ್ನು ಇತ್ತೀಚಿನ ವರ್ಷಗಳಲ್ಲಿ ತನ್ನ ಮುಂದೆ ಮಂಡಿಯೂರುವಂತೆ ಮಾಡಿದ ಭಾರತದ ನಾರಿಯರು ಸ್ಥಿರ ಪ್ರದರ್ಶನ ನೀಡುವಲ್ಲಿ ಮತ್ತೆ ಮತ್ತೆ ಎಡವುತ್ತಿದ್ದಾರೆ.
ಭಾರೀ ನಿರೀಕ್ಷೆಯೊಂದಿಗೆ ತ್ರಿಕೋನ ಟೂರ್ನಿಗೆ ಎಂಟ್ರಿ ಕೊಟ್ಟ ಭಾರತದ ಆಟಗಾರ್ತಿಯರು ಹುಮ್ಮಸ್ಸಿನಿಂದಲೇ ಅಖಾಡಕ್ಕೆ ಧುಮುಕಿದರು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನವನ್ನೇ ನೀಡಿದ ಭಾರತ ತಂಡಕ್ಕೆ ಹೇಳಿಕೊಳ್ಳುವಂಥ ಜತೆಯಾಟಗಳು ಮೂಡಿ ಬರಲೇ ಇಲ್ಲ. ಪ್ರಮುಖ ಆಟಗಾರ್ತಿಯರಾದ ಮಿಥಾಲಿ ರಾಜ್, ಸ್ಮತಿ ಮಂದನಾ, ರೋಡಿಗ್ರಸ್, ಅನುಜಾ ಪಟೇಲ್ ಮಾತ್ರ ಸಿಡಿದರು. ಆದರೆ ಒಂದು ಪಂದ್ಯದಲ್ಲಿ ಒಬ್ಬರು ಹೋರಾಟ ನಡೆಸಿದರೆ ಇವರಿಗೆ ಸಾಥ್ ನೀಡಬೇಕಿದ್ದವರೇ ಕೈಕೊಡುತ್ತಿದ್ದರು. ಪರಿಣಾಮ, ಹೆಚ್ಚಿನ ಪಂದ್ಯಗಳನ್ನು ಸೋಲುವುದು ಸಾಮಾನ್ಯವಾಯಿತು!
Related Articles
ಭಾರತ ಮಹಿಳಾ ತಂಡ ಪ್ರಬಲ ಬೌಲಿಂಗ್ ವಿಭಾಗವನ್ನು ಹೊಂದಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಅನಂತರ ಭಾರತೀಯ ತಂಡ ಬೌಲರ್‌ಗಳದ್ದೇ ವಿಶ್ವ ಕ್ರಿಕೆಟ್ ನಲ್ಲಿ ಪಾರುಪತ್ಯ. ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ಭಾರತ ತಂಡದ ಅವಿಭಾಜ್ಯ ಅಂಗ. ಆದರೆ, ಈ ಟೂರ್ನಿಯಲ್ಲಿ ಜೂಲನ್ ಸಹಿತ ವಸ್ತ್ರಾಕರ್, ಅನುಜಾ ಪಟೇಲ್, ದೀಪ್ತಿ ಶರ್ಮಾ, ಪೂನಮ್ , ರಾಧಾ ಪ್ರಬಲ ದಾಳಿ ಸಂಘಟಿಸುವಲ್ಲಿ, ವಿಕೆಟ್ ಪಡೆಯುವಲ್ಲಿ ವಿಫಲವಾದರು. ಬೌಲಿಂಗ್ ಮೊನಚು ಕಳೆದುಕೊಂಡ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರ್ತಿಯರು ಭರ್ಜರಿ ಬ್ಯಾಟಿಂಗ್‌ನಿಂದ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
Advertisement
ಸರಣಿ ಸೋಲಿನ ಸುರುಳಿಯಲ್ಲಿ ಸಿಲುಕಿಕೊಂಡಿರುವ ಮಹಿಳಾ ತಂಡಕ್ಕೀಗ ಆತ್ಮವಿಶ್ವಾಸದ ಆವಶ್ಯಕತೆ ಇದೆ. ಮುಂದೆ ನಡೆಯುವ ಮಹಿಳಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ರೀತಿ ಸಂಘಟಿತ ಪ್ರದರ್ಶನದ ಕೊರತೆ ಎದುರಾದರೆ ಭಾರೀ ಬೆಲೆ ತೆರಬೇಕಾಗುತ್ತದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಪುಟಿದೇಳುವ ಮೂಲಕ ಮುಂಬರುವ ಪಂದ್ಯಗಳಲ್ಲಿ ಉತ್ತಮ ಸಂಘಟಿತ ಪ್ರದರ್ಶನ ನೀಡುವಂತಾಗಲಿ ಎಂಬುದೇ ಹಾರೈಕೆ.
ದೇವಲಾಪುರಮಹದೇವಸ್ವಾಮಿ