Advertisement

ದಿಲ್ಲಿಯಲ್ಲಿ ಯಾವುದೇ ಕ್ರೀಡಾಕೂಟವಿಲ್ಲ

10:46 PM Mar 13, 2020 | Sriram |

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್‌ ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಸಿಸೋಡಿಯಾ,”ಐಪಿಎಲ್‌ನಂತಹ ಅಪಾರ ಜನಸಮೂಹ ಸೇರುವ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನಿಷೇಧಿಸಲು ನಿರ್ಧರಿಸಿದ್ದೇವೆ. ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

ಇದರಿಂದ ಈ ಬಾರಿಯ ಐಪಿಎಲ್‌ ಪಂದ್ಯಗಳು ದಿಲ್ಲಿಯ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವುದಿಲ್ಲ. ಇದರಿಂದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಲಿದೆ. ಇದರಿಂದ ಬಿಸಿಸಿಐ, ಡೆಲ್ಲಿ ತಂಡಕ್ಕೆ ನೂತನ “ತವರು ತಾಣ’ವನ್ನು ಹುಡುಕಬೇಕಿದೆ.

ಈ ಮೊದಲು ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳು ತಮ್ಮ ರಾಜ್ಯದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸದಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದವು. ಇದೀಗ ದಿಲ್ಲಿ ಸರಕಾರ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಪಂದ್ಯಗಳನ್ನೇ ರದ್ದುಪಡಿಸಲು ನಿರ್ಧರಿಸಿದೆ.

ಈ ನಡುವೆ ಐಪಿಎಲ್‌ ಪಂದ್ಯಾವಳಿಯನ್ನು ಎ. 15ರ ತನಕ ಅಮಾನತಿನಲ್ಲಿರಿಸಲಾಗಿದ್ದು, ಅನಂತರ ದಿಲ್ಲಿ ಸರಕಾರ ಯಾವ ನಿರ್ಧಾರಕ್ಕೆ ಬರಲಿದೆ ಎಂದು ಕಾದುನೋಡಬೇಕಿದೆ.

Advertisement

ಇಂಡಿಯಾ ಓಪನ್‌ಗೂ ಕಂಟಕ
ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಎಲ್ಲ ಕ್ರೀಡಾಕೂಟಗಳನ್ನು ದಿಲ್ಲಿ ಸರಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿ ಕೂಡ ನಡೆಯುವ ಸಾಧ್ಯತೆ ಇಲ್ಲ. ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಯ ಹಿನ್ನೆಲೆಯಲ್ಲಿ ಈ ಪಂದ್ಯಾವಳಿ ಅತ್ಯಂತ ಮಹತ್ವದ್ದಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಬಿಎಐ), “ನಮ್ಮ ಕೈಯಲ್ಲಿ ಏನೂ ಇಲ್ಲ. ಸರಕಾರದ ನಿರ್ಧಾರವನ್ನು ನಾವು ಪಾಲಿಸಬೇಕಾಗುತ್ತದೆ’ ಎಂದಿದೆ.

ಇದಕ್ಕೂ ಮುನ್ನ ಬುಧವಾರ ಬಿಎಐ ಮತ್ತು ಬ್ಯಾಡ್ಮಿಂಟನ್‌ ವರ್ಲ್ಡ್ ಫೆಡರೇಶನ್‌, “ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯನ್ನು ಖಾಲಿ ಸ್ಟೇಡಿಯಂನಲ್ಲಿ ನಡೆಸುವ ಕುರಿತು ಜಂಟಿ ಹೇಳಿಕೆ ನೀಡಿದ್ದವು. ಆದರೆ ಆಗ ಕೇಂದ್ರ ಸರಕಾರ ವಿದೇಶಿಗರ ವೀಸಾ ನಿರ್ಬಂಧವನ್ನು ಪ್ರಕಟಿಸಿರಲಿಲ್ಲ. ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಮಾ. 24ರಿಂದ 29ರ ತನಕ ಹೊಸದಿಲ್ಲಿಯಲ್ಲಿ ನಡೆಯಬೇಕಿತ್ತು. ಇದು ಮುಂದೂಡುವ ಅಥವಾ ಬೇರೆ ಕಡೆ ನಡೆಸುವ ಬಗ್ಗೆ ಈವರೆಗೆ ಯಾವುದೇ ಪ್ರಕಟನೆ ಹೊರಬಿದ್ದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next