Advertisement
ಆರು ತಲೆಮಾರಿನಿಂದ ಉಳಿಸಿಕೊಂಡು ಬಂದ ಸಾರಂಗಿ ವಾದನದ ವೈಶಿಷ್ಟ್ಯಗಳನ್ನು ತಿಳಿಸುತ್ತೀರಾ?ನನ್ನ ಅಜ್ಜ ಪದ್ಮಶ್ರೀ ಪುರಸ್ಕೃತ ಉಸ್ತಾದ್ ಅಬ್ದುಲ್ ಲತೀಫ್ ಖಾನ್ ಕೇವಲ ಅಜ್ಜನಾಗಿರದೆ ನನಗೆ ಗುರುಗಳೂ ಆಗಿ ಜ್ಞಾನವನ್ನು ಧಾರೆ ಎರೆದಿದ್ದಾರೆ. ಅವರೊಬ್ಬ ಉತ್ತಮ ಶಿಕ್ಷಕನೂ ಹೌದು. ಆರು ತಲೆಮಾರಿನ ಹಿಂದಿನ ಉಸ್ತಾದ್ ಫಜಲ್ ಖಾನ್, ಅವರ ಮಗ ಘಾನ್ಸಿ ಖಾನ್, ಅವರ ಮಕ್ಕಳಾದ ಚುತ್ತು ಖಾನ್, ಗರು ಖಾನ್, ಉದಯ ಖಾನ್ ಇವರು ನನ್ನಜ್ಜನಿಗೆ ಗುರುಗಳು. ನನ್ನ ತಂದೆ ಅನ್ವರ್ ಹುಸೇನ್ ಅವರು ಸಂಗೀತ ಸಂಯೋಜಕರಾಗಿದ್ದರು. ಸ್ವತಃ ಸಾರಂಗಿ ನುಡಿಸುತ್ತಿರಲಿಲ್ಲ. ನನ್ನಜ್ಜನೂ ಸಂಗೀತ ಸಂಯೋಜಕರಾಗಿದ್ದರು. ಜತೆಗೆ ತಬಲಾ, ಸಿತಾರ್ ಸಹಿತ ಒಟ್ಟು 18 ಉಪಕರಣಗಳನ್ನು ನುಡಿಸುತ್ತಿದ್ದರು. ನನಗೆ 9ನೆಯ ವರ್ಷವಿರುವಾಗಲೇ ಸಾರಂಗಿ ಕಲಿಸಿದರು.
ನನ್ನ ಮಗ ಅಮಾನ್ ಹುಸೇನ್ 10ನೆಯ ತರಗತಿ ಓದುತ್ತಿದ್ದಾನೆ. ಆತ ಈಗಲೇ ಸಾರಂಗಿ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾನೆ. ನನ್ನ ಜತೆ ಕಛೇರಿಯಲ್ಲೂ ಪಾಲ್ಗೊಳ್ಳುತ್ತಾನೆ. ಆದರೆ ಆತನಿಗೆ ಪರೀಕ್ಷೆ ಇರುವುದರಿಂದ ಕರೆ ತಂದಿಲ್ಲ. ಇಲ್ಲವಾದರೆ ಕರೆತರುತ್ತಿದ್ದೆ. ಇನ್ನೊಬ್ಬ ಮಗ ಅರ್ಮಾನ್ ಹುಸೇನ್ ಹಾಡುಗಾರಿಕೆಯಲ್ಲಿ ಒಲವು ತೋರುತ್ತಿದ್ದಾನೆ. ಮಧ್ಯಪ್ರದೇಶದವರಾದ ನೀವು ಕೋಲ್ಕತಾಕ್ಕೆ ತೆರಳಿದ ಬಳಿಕ ಆದ ಬದಲಾವಣೆಗಳೇನು?
ನಾವು ಮೂಲತಃ ಮಧ್ಯಪ್ರದೇಶ ಗ್ವಾಲಿಯರ್ ಸಮೀಪದ ಗೊಹಾಡ್ ಜಿಲ್ಲೆಯವರು. ನನ್ನ ಅಜ್ಜ ಭೋಪಾಲದಲ್ಲಿ ನೆಲೆ ನಿಂತರು. ಅಜ್ಜನ ಕಾಲದ ಬಳಿಕ ನಾನು ಕೋಲ್ಕತಾಕ್ಕೆ ತೆರಳಿದೆ. ಐಟಿಸಿ ಸಂಗೀತ ಸಂಶೋಧನ ಅಕಾಡೆಮಿಯಲ್ಲಿ 2010ರಲ್ಲಿ ಉಪನ್ಯಾಸಕನಾಗಿ ಕೆಲಸ ಸಿಕ್ಕಿದ ಬಳಿಕ ಕೋಲ್ಕತಾಕ್ಕೆ ತೆರಳಿದೆ. ಅದೊಂದು ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಸಂಸ್ಥೆ. ಅಲ್ಲಿ 50-60 ವಿದ್ಯಾರ್ಥಿಗಳಿದ್ದು ಇವರೆಲ್ಲರೂ ಪ್ರಬುದ್ಧ ಕಲಾವಿದರೇ. ಅಲ್ಲಿ ನನಗೆ ದೊರಕಿದ ಅಜಯ ಚಕ್ರವರ್ತಿ, ಬುದ್ಧದೇವ್ ದಾಸ್ ಗುಪ್ತ, ಅಬ್ದುಲ್ ರಶೀದ್ ಖಾನ್‌ರಂತಹ ಹಿರಿಯ ಕಲಾವಿದರ ಸಂಸರ್ಗ ನನ್ನನ್ನು ಬಹಳ ಎತ್ತರಕ್ಕೆ ಕರೆದೊಯ್ಯುತ್ತಿದೆ ಎಂದೆನಿಸುತ್ತದೆ. ಸಂಗೀತಾಭ್ಯಾಸಕ್ಕೆ ಒಳ್ಳೆಯ ವಾತಾವರಣ ಬೇಕು. ಸಂಗೀತದ ಯಶಸ್ಸು ಸುಲಭದ ದಾರಿಯದ್ದಲ್ಲ. ನನ್ನಜ್ಜನ ಮಾತಿನಂತೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದೇನೆ. ನಮ್ಮ ಕ್ಷೇತ್ರ ಕ್ರಿಕೆಟ್ ಆಟದಂತೆ ಅಲ್ಲ. 40 ವರ್ಷಕ್ಕೆ ನಿಧಾನವಾಗಿ ಅರಳುವ ಸ್ಥಿತಿ ಬರುತ್ತದೆ. ನನಗೆ ಈಗ 43 ವರ್ಷ. ನನಗಿನ್ನೂ ರಾಗಗಳ ಅನುಭಾವ ಮೂಡುತ್ತಿದೆಯಷ್ಟೆ. ಈ ನಡುವೆ ಅಮೆರಿಕ, ಫ್ರಾನ್ಸ್, ಯೂರೋಪ್, ಅಲ್ಜೀರಿಯ, ದಕ್ಷಿಣ ಕೊರಿಯಾ ಮೊದಲಾದ ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಬೆಂಗಳೂರು, ಮಂಗಳೂರಿಗೆ ಹಿಂದೆ ಕಾರ್ಯಕ್ರಮ ಕೊಡಲು ಬಂದಿದ್ದೆ. ಉಡುಪಿಗೆ ಪ್ರಥಮ ಬಾರಿ ಬಂದಿದ್ದೇನೆ.
Related Articles
ಸಾರಂಗಿ ವಾದನ ಬಹಳ ಕಷ್ಟ. ವಿವಿಧ ತಂತಿಗಳನ್ನು ಮೀಟುವಾಗ ಉಗುರಿನ ಭಾಗದಲ್ಲಿ ಗಾಯವಾಗುತ್ತದೆ. ನುಡಿಸುವಿಕೆ ಕಷ್ಟ. ಹೀಗಾಗಿ ಕಲಾವಿದರ ಸಂಖ್ಯೆ ಕಡಿಮೆ. ವಿದುಷಿ ಗಿರಿಜಾದೇವಿ ಅವರು ಪ್ರಸಿದ್ಧ ತಪ್ಪಾ ಶೈಲಿಯ ಕಲಾವಿದರಾಗಿದ್ದರು. ಬೇರೆ ಬೇರೆ ರಾಗಗಳಲ್ಲಿ ಬೇರೆ ಬೇರೆ ಬಂದೀಶ್‌ಗಳಿವೆ. ತಪ್ಪಾ ಶೈಲಿಯನ್ನು ಮೈಗೂಡಿಸಿಕೊಂಡಿದ್ದೇನೆ. ನನ್ನ ಮಗನನ್ನು ಸಂಗೀತದೊಂದಿಗೆ ನಾವೂ (ಮಾನಸಿಕವಾಗಿ) ಹೇಗೆ ಬೆಳೆಯಬೇಕೆಂದು ಹೇಳಿ ಕೊಡುತ್ತಿದ್ದೇನೆ.
Advertisement
- ಮಟಪಾಡಿ ಕುಮಾರಸ್ವಾಮಿ