Advertisement

ಪ್ರತ್ಯೇಕ ಧರ್ಮ ಹೋರಾಟ ನಿಲ್ಲದು

11:02 AM Sep 14, 2017 | Team Udayavani |

ಕಲಬುರಗಿ: ಸಿದ್ದಗಂಗಾ ಶ್ರೀಗಳು ಹೇಳದೆ ಇದ್ದುದನ್ನು ಹೇಳಿದ್ದಾಗಿ ಸುಳ್ಳು ಹೇಳುವಂತ ಜಾಯಮಾನದ ವ್ಯಕ್ತಿ ಜಲಸಂಪನ್ಮೂಲ ಸಚಿವ
ಎಂ.ಬಿ. ಪಾಟೀಲ ಅಲ್ಲ. ಎಲ್ಲೋ ಒಂದಷ್ಟು ಸಂಪರ್ಕ ಕೊರತೆಯಿಂದ ವಿವಾದ ಭುಗಿಲೆದ್ದಿದೆ ಎಂದು ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿ ಹಾಗೂ ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪ್ರತ್ಯೇಕ ಧರ್ಮದ ಹೋರಾಟ ನಿಲ್ಲದು. ಸೆ.24ರ ರ್ಯಾಲಿಯಲ್ಲಿ 4 ಲಕ್ಷ ಜನರು ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಷ್ಟು ಜನರು ಸೇರುವ ಖಚಿತತೆ ಇದೆ. ಈಗಾಗಲೇ ಬೀದರ, ಬೆಳಗಾವಿ ಹಾಗೂ ಲಾತೂರಿನಲ್ಲಿ
ಬೃಹತ್‌ ಲಿಂಗಾಯತ ಮಹಾರ್ಯಾಲಿ ನಡೆದಿದೆ. 24ರಂದು ಜಿಲ್ಲಾಧಿಕಾರಿ ಮೂಲಕ ಪ್ರತ್ಯೇಕ ಧರ್ಮದ ಕುರಿತು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ಸಮ್ಮೇಳನ ರದ್ದುಪಡಿಸುವುದಿಲ್ಲ ಎಂದು ಹೇಳಿದರು.

ಆಕ್ಷೇಪ ವ್ಯಕ್ತ: ಇದರ ಮಧ್ಯೆಯೂ ಅವರು, ಸಿದ್ಧಗಂಗಾ ಶ್ರೀಗಳನ್ನು ಸಚಿವ ಪಾಟೀಲರು ಧರ್ಮದ ವಿಚಾರದಲ್ಲಿ ಎಳೆತಂದಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಸಚಿವ ಪಾಟೀಲರು ಸುಳ್ಳು ಹೇಳುವ ವ್ಯಕ್ತಿಯಲ್ಲ. ಏಲ್ಲೋ ಏನೋ ತಪ್ಪಾಗಿ ಅರ್ಥೈಸಲಾಗಿದೆ. ಇದರ ಹಿಂದೆ ಕೆಲವರು ಕೆಲಸ
ಮಾಡಿರುವ ಹಾಗಿದೆ ಎಂದು ಅನುಮಾನ ವ್ಕಕ್ತಪಡಿಸಿದರು. ಸಿದ್ಧಗಂಗಾ ಶ್ರೀಗಳನ್ನು ಮೊದಲು ರಂಭಾಪುರಿ ಜಗದ್ಗುರುಗಳು ಭೇಟಿ ಮಾಡಿದ್ದರು. ಅವರು ಸಿದ್ಧಗಂಗಾ ಶ್ರೀಗಳ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ನಂತರ ರಾಜ್ಯದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ ಹೇಳಿಕೆ ನೀಡಿದ್ದರು. ಇಬ್ಬರ ಹೇಳಿಕೆಗಳು ಶ್ರೀಗಳ ಭೇಟಿ ನಂತರವೇ ಆಗಿರುವುದರಿಂದ ಸುಳ್ಳು ಹೇಳಿಕೆ ಆಗದು ಎಂದು ಹೇಳಿದರು.

ಅರ್ಜಿ ಹಾಕಿರಲಿಲ್ಲವೇ?: ಈ ಹಿಂದೆ ಜಂಗಮರು, ನಾವು ಹಲವು ಸೌಕರ್ಯಗಳಿಂದ ವಂಚಿತರಾಗುತ್ತಿದ್ದೇವೆ. ಬೇಡ ಜಂಗಮದ ಅಡಿಯಲ್ಲಿ ನಮ್ಮನ್ನು ಸೇರಿಸಿ ಎಂದು ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅದು ನೆನಪಾಗುತ್ತಿಲ್ಲವೇ, ಅವತ್ತು ಇವರಿಗೆ ವೀರಶೈವದ ಬಗ್ಗೆ ತಿಳಿದಿರಲಿಲ್ಲವೇ ಎಂದು ಪ್ರಶ್ನಿಸಿದರು. ಮೂರು ಬಾರಿ ವೀರಶೈವ ಪದ ಮುಂದಿಟ್ಟುಕೊಂಡು ಲಿಂಗಾಯತ ಧರ್ಮದ ಮಾನ್ಯತೆಗೆ ಪ್ರಯತ್ನ ಮಾಡಿದ್ದು ವಿಫಲಗೊಂಡಿದೆ. ಆದ್ದರಿಂದ ವೀರಶೈವ ಹೊರತುಪಡಿಸಿ ಲಿಂಗಾಯತ ಬಳಕೆಯಿಂದಲೇ ಪ್ರತ್ಯೇಕ ಧರ್ಮ ಸ್ಥಾಪನೆ ಸಾಧ್ಯ ಎಂದು ಹೇಳಿದರು.

ಜಿಲ್ಲೆಯ ಏಳು ತಾಲೂಕಿನಲ್ಲಿ ಈಗಾಗಲೇ ಒಂದು ಸುತ್ತಿನ ಪ್ರಚಾರ ಪೂರ್ಣಗೊಂಡಿದೆ. ನಗರದಲ್ಲಿ ಲಿಂಗಾಯತ ಧರ್ಮದ ಎಲ್ಲ ಉಪ ಪಂಗಡಗಳ ಸಮಾಜದವರನ್ನು ಭೇಟಿಯಾಗಿ,ವಿವಿಧ ಕಾಯಕ ಶರಣರ ಬಳಗದವರನ್ನು ಸಂಪರ್ಕಿಸಿ ಸಭೆ ಮಾಡಲಾಗಿದೆ. ನಗರದ ಎಲ್ಲ ಪ್ರಮುಖ
ಉದ್ದಿಮೆದಾರರು, ವ್ಯಾಪಾರಿಗಳ ಸಂಘಟನೆಗಳನ್ನು ಆಮಂತ್ರಿಸಲಾಗಿದೆ. ಸರ್ವ ಸಮಾಜದ ಮತ್ತು ಎಲ್ಲ ವರ್ತಕರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. 25ಜನ ಮಠಾಧೀಶರ ನೇತೃತ್ವದಲ್ಲಿ ಕಲಬುರಗಿ, ಯಾದಗಿರಿ, ಬೀದರ ಹಾಗೂ ಇತರೆ ಜಿಲ್ಲೆಗಳಿಂದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲೆಡೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

Advertisement

ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಜಿಲ್ಲೆ, ಕರ್ನಾಟಕ ರಾಜ್ಯ ಸೇರಿ 100 ಜನ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸುವರು ಎಂದು ಹೇಳಿದರು. ಆರ್‌.ಜಿ. ಶೆಟಗಾರ, ಪ್ರಭುದೇವ ಸ್ವಾಮೀಜಿ, ಪ್ರಸನ್ನ ವಾಂಗರಖೇಡ, ಪ್ರದೀಪ ದಾಬಶೆಟ್ಟಿ, ನಾಗರಾಜ ನಿಂಬರಗಿ, ಬಿ.ಎಂ.ಏರಿ, ರವಿ ಹಂಗರಗಿ, ಸತೀಶ ಸಜ್ಜನ್‌, ರಾಜೇಂದ್ರ ಮುದಗುಣಕಿ, ಪ್ರಭುಲಿಂಗ ಪಾಟೀಲ ಜೋಗೂರ, ಅಶೋಕ ಘೂಳಿ ಮುಂತಾದವರು ಹಾಜರಿದ್ದರು.

ಸಚಿವ ಪಾಟೀಲರನ್ನು ಕರೆದಿಲ್ಲ
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಮನಸ್ಸಿಲ್ಲ, ಒತ್ತಾಯವಾಗಿ ಕರೆದುಕೊಂಡು ಹೋಗಲಾಗುತ್ತಿದೆ ಎನ್ನುವ ಆರೋಪವನ್ನು ನಾವು ಒಪ್ಪುವುದಿಲ್ಲ. ನಾವು ರಾಜಕಾರಣಿಗಳ ಮೇಲೆ ಒತ್ತಡ
ಹೇರುತ್ತಿಲ್ಲ. ಪಾಟೀಲರು ಹಿಂದೆ ಸರಿಯುವುದಿದ್ದರೆ ಸರಿಯಲಿ.
ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ
 

Advertisement

Udayavani is now on Telegram. Click here to join our channel and stay updated with the latest news.

Next