Advertisement

ಹಿರಿಯ ಪತ್ರಕರ್ತ, ಛಾಯಾಚಿತ್ರಗ್ರಾಹಕ ಜೀಬಿ ಇನ್ನಿಲ್ಲ

02:10 AM Mar 27, 2022 | Team Udayavani |

ಉಡುಪಿ: “ಉದಯವಾಣಿ’ ಆರಂಭದಿಂದ ಉಡುಪಿ ವರದಿಗಾರರಾಗಿ ಸೇವೆ ಸಲ್ಲಿಸಿದ   “ಜೀಬಿ’ ಎಂದು ಪರಿಚಿತರಾದ ಹಿರಿಯ ಪತ್ರಕರ್ತ ಪಾಂಡೇಲು ಗಣಪತಿ ಭಟ್‌ (79) ಅವರು ಮಾ. 26ರಂದು ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನುಅಗಲಿದ್ದಾರೆ.

Advertisement

ಕಾಸರಗೋಡು ತಾಲೂಕಿನ ಪಾಂಡೇಲು ಮನೆತನದ ಜೀಬಿಯವರು ಬದಿಯಡ್ಕ ಸಮೀಪದ ಕಿಳಿಂಗಾರಿನವರು. ಆರಂಭದಲ್ಲಿ ಬದಿಯಡ್ಕದಲ್ಲಿ ಕೆಲವು ಕಾಲ ವೈದ್ಯರಲ್ಲಿ ಕಂಪೌಂಡರ್‌ ಆಗಿ ಕೆಲಸ ಮಾಡಿದ ಭಟ್‌, ಬಳಿಕ ಬೆಂಗಳೂರಿನಲ್ಲಿ “ಮಲ್ಲಿಗೆ’ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದರು. ಅನಂತರ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ “ನವಭಾರತ’ ಪತ್ರಿಕೆಗೆ ಮಂಗಳೂರು ವರದಿಗಾರರಾಗಿ ಸೇರಿದರು.

1970ರಲ್ಲಿ ಮಣಿಪಾಲದಲ್ಲಿ “ಉದಯವಾಣಿ’ ಆರಂಭವಾದಾಗ ಉಡುಪಿಯ ವರದಿಗಾರರಾಗಿ ಸೇರಿ 2001ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಉದಯವಾಣಿಯ ಆರಂಭಿಕ ಸಂಪಾದಕೀಯ ಬಳಗದ ಪ್ರಮುಖರಲ್ಲಿ ಒಬ್ಬರಾದ ಭಟ್‌, ಪತ್ರಿಕೆಯ ಭಾಷೆಯನ್ನು ಸುಧಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. “ಜೀಬಿ’ ಹೆಸರಿನಲ್ಲಿ ವಿಶೇಷ ವರದಿ, ಲೇಖನಗಳನ್ನು ಬರೆಯುತ್ತಿದ್ದರು. ಬಹಳ ವರ್ಷ “ಸುತ್ತು ನೋಟ’ ಎಂಬ ಅಂಕಣ ಬರೆಯುತ್ತಿದ್ದರು. ಬರವಣಿಗೆಯೂ ಕ್ಲಿಷ್ಟಕರವಾಗಿರದೆ ಮೊನಚಿನಿಂದ ಕೂಡಿರುತ್ತಿತ್ತು, ತಿಳಿಯಾಗಿರುತ್ತಿತ್ತು.

ಉತ್ತಮ ವ್ಯಂಗ್ಯಚಿತ್ರಕಾರರು, ಛಾಯಾಚಿತ್ರಗ್ರಾಹಕರೂ ಆಗಿದ್ದರು. ಕಾಟೂìನಿಸ್ಟ್‌ಗಳ ಸಮ್ಮೇಳನವನ್ನು ಕುಂದಾಪುರದಲ್ಲಿ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಹಜ ಘಟನೆಗಳಿಂದಲೂ, ಘಟನೆಗಳನ್ನು ಸೃಷ್ಟಿಸಿಯೂ ಕಾಟೂìನ್‌ಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿದ್ದರು. ಬಣ್ಣದ ಚಿತ್ರಗಳು ಬರುವ ಮುನ್ನ ಕಪ್ಪು – ಬಿಳುಪು ಚಿತ್ರಗಳಿದ್ದ ಕಾಲದಲ್ಲಿ ಮನೆಯಲ್ಲಿಯೇ ಸ್ಟುಡಿಯೋ ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು.

ಸಿನೆಮಾ ಬರೆಹಗಾರರಾಗಿದ್ದ ಜೀಬಿಯವರು ರಾಜ್‌ಕುಮಾರ್‌, ವಿಷ್ಣುವರ್ಧನ್‌, ಕಲ್ಪನಾ ಮೊದಲಾದ ಪ್ರಸಿದ್ಧ ಚಿತ್ರನಟರ ಸಂದರ್ಶನ ನಡೆಸಿದ್ದರು. ಸದಾ ಕಾಲ ಹಸನ್ಮುಖೀಯಾಗಿರುತ್ತಿದ್ದ ಜೀಬಿ, “ಹಾಸ್ಯ ಮಾತಿನ ಮಲ್ಲ’ ಆಗಿದ್ದರು. ಇವರ ಜೋಕ್‌ಗಳು ಎರವಲು ಪಡೆದದ್ದಾಗಿರದೆ ಸ್ವಯಂಸ್ಫೂರ್ತಿಯಿಂದ ಹೊರಬರುತ್ತಿದ್ದವು. ತಿಳಿಯಾದ ಹಾಸ್ಯಪ್ರಜ್ಞೆ, ವಿಡಂಬನೆ ಸಹಜ ಪ್ರವೃತ್ತಿಯಾಗಿತ್ತು. ಅವರು ಸಿಕ್ಕಿದ ತತ್‌ಕ್ಷಣವೇ ಹಾಸ್ಯದಲ್ಲಿಯೇ ಮಾತು ಆರಂಭವಾಗುತ್ತಿತ್ತು. ದಿನವೂ ಹಲವು ದಿನಪತ್ರಿಕೆ, ನಿಯತಕಾಲಿಕೆಗಳನ್ನು ಖರೀದಿಸಿ ಓದುತ್ತಿದ್ದರು. ನಿವೃತ್ತಿ ಬಳಿಕವೂ ಇಂದ್ರಾಳಿಯ ಪತ್ರಕರ್ತರ ಕಾಲನಿಯಿಂದ ಉಡುಪಿಗೆ ಪತ್ರಿಕೆಯ ಖರೀದಿಗಾಗಿಯೇ ಬರುತ್ತಿದ್ದರು. ಪುಸ್ತಕಗಳನ್ನು ಓದುವಲ್ಲಿಯೂ ಭಟ್‌ ಮುಂದಿರುತ್ತಿದ್ದರು. ಚಿತ್ರನಟರಾಗಿಯೂ ಪಾತ್ರ ವಹಿಸಿದ್ದರು. “ಗುಡ್ಡೆದಭೂತ’ ಚಿತ್ರದಲ್ಲಿ ಭಟ್‌ ಪಾತ್ರವಿತ್ತು.

Advertisement

ರವಿವಾರ ಬೆಳಗ್ಗೆ 11ರಿಂದ ಅಪರಾಹ್ನ 3 ಗಂಟೆಯವರೆಗೆ ಇಂದ್ರಾಳಿಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next