Advertisement
ಹಾಸ್ಟೆಲ್‌ನಲ್ಲಿ ಸೀಟಿಲ್ಲ
Related Articles
Advertisement
ಮಳೆಗಾಲದಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತದೆ. ವಿದ್ಯಾರ್ಥಿನಿಯರಿಗೆ ನಿತ್ಯ ಕಾಲೇಜಿಗೆ ಹೋಗಿ ಬರಲು ಕಾಡು ದಾರಿ ಅತ್ಯಂತ ಅಪಾಯಕಾರಿ. ಹೀಗಾಗಿ ಪಾಲಕರು ಕೂಲಿ ಕೆಲಸ ಬಿಟ್ಟು ಮಕ್ಕಳ ಬರುವಿಕೆಯನ್ನು ಕಾಯಬೇಕು. ಕೆಲವು ಕಡೆ ಪ್ರತೀ ದಿನ 150 ರೂ. ರಿಕ್ಷಾ ಬಾಡಿಗೆ ಕೊಟ್ಟು ಮನೆ ಸೇರಬೇಕು. ಬಡ ಕುಟುಂಬಗಳಿಗೆ ಈ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಪಾಲಕರ ಗೋಳಾಗಿದೆ.
ಇಂತಹ ನೂರಾರು ವಿದ್ಯಾರ್ಥಿಗಳು ಯಾವುದೇ ಖಾಸಗಿ ಕಾಲೇಜಿನಲ್ಲಿ ಓದುತ್ತಿಲ್ಲ. ಬದಲಾಗಿ ಕುಂದಾಪುರ ಸರಕಾರಿ ಕಾಲೇಜಿನಲ್ಲಿ ಪಿ.ಯು.ಸಿ. ಓದುತ್ತಿದ್ದಾರೆ. ಅಪರಾಧ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭ ನಿತ್ಯ ಕುಗ್ರಾಮದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡುವ ಗೋಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿದೆ. ಹೀಗಾಗಿ ಬೈಂದೂರು ಸೇರಿದಂತೆ ತಾ|ನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿತ್ಯ ನೂರಾರು ಕಿ.ಮೀ. ಶಿಕ್ಷಣಕ್ಕಾಗಿ ಅಲೆಯತ್ತಿರುವುದನ್ನು ಮನಗಂಡು ಇಲಾಖೆ, ಸಚಿವರು ತತ್‌ಕ್ಷಣ ಇಂತಹ ವಿದ್ಯಾರ್ಥಿಗಳ ಮಾಹಿತಿ ಪಡೆದು ಹಾಸ್ಟೆಲ್ ಸೀಟ್ ಒದಗಿಸಬೇಕಾಗಿದೆ.
ಹಾಸ್ಟೆಲ್ ಸಮಸ್ಯೆಗೆ ಕಾರಣಗಳೇನು?
ಕೊವಿಡ್‌ಗಿಂತ ಮೊದಲು ಈ ಸಮಸ್ಯೆಗಳಿರಲಿಲ್ಲ. ಕೊವಿಡ್ ಬಳಿಕ ಪದವಿ ವೇಳಾಪಟ್ಟಿ ಬದಲಾಗಿದೆ. ಜತೆಗೆ ಸಮಾಜ ಕಲ್ಯಾಣ ಇಲಾಖೆ ಅವೈಜ್ಞಾನಿಕ ನಿಯಮ ಜಾರಿಗೆ ತಂದಿದೆ. ಇದರ ಪ್ರಕಾರ ಜಾತಿವಾರು ಶೇ.35ರಷ್ಟು ಮೀಸಲಾತಿ ನಿಯಮ ಜಾರಿಗೆ ತಂದಿದೆ.ಇದರಿಂದಾಗಿ ಪ್ರಭಾವ ಇದ್ದವರು ಸ್ಥಾನ ಗಳಿಸಿಕೊಂಡರೆ ಪ್ರತಿಭಾವಂತ ವಿದ್ಯಾರ್ಥಿಗಳು ಸೀಟು ವಂಚಿತರಾಗುವಂತೆ ಮಾಡಿದೆ. ಒಟ್ಟು 267ಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿದೆ. ಇಷ್ಟೆಲ್ಲ ಅಭಿವೃದ್ಧಿ ಸಾಧನೆ ಬಿಂಬಿಸು ತ್ತಿರುವ ಇಲಾಖೆ ಕನಿಷ್ಠ ಪಕ್ಷ ಕುಗ್ರಾಮದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಸೀಟು ನೀಡಲು ಸಾಧ್ಯವಾಗದಿರುವುದು ಇಲಾಖೆಯ ನಿರ್ಲಕ್ಷ್ಯವನ್ನು ಬಿಂಬಿಸುತ್ತದೆ.
ಸೀಟು ಸಿಗದೆ ಸಮಸ್ಯೆ: ಹಾಸ್ಟೆಲ್ ಸೀಟು ಸಿಗುತ್ತದೆ ಎಂದು ಬಡವರಾದ ನಾವು ಕುಂದಾಪುರ ಸರಕಾರಿ ಕಾಲೇಜಿಗೆ ಮಕ್ಕಳನ್ನು ಪಿ.ಯು.ಸಿ. ತರಗತಿಗೆ ಸೇರಿಸಿದ್ದೇವೆ. ಆದರೆ ಹಾಸ್ಟೆಲ್ ಸೀಟು ಸಿಗದೆ ನಿತ್ಯ ನೂರಾರು ಕಿ.ಮೀ. ಅಲೆಯಬೇಕಾಗಿದೆ. ಕಾಡು ದಾರಿಯಲ್ಲಿ ಮಕ್ಕಳು ಬರುವವರೆಗೆ ಆತಂಕ ಉಂಟಾಗುತ್ತದೆ. ಅತ್ಯಧಿಕ ಅಂಕ ಪಡೆದರೂ ನಮ್ಮ ಮಕ್ಕಳಿಗೆ ಸರಕಾರ ಸೀಟ್ ನೀಡಿಲ್ಲ. ಬದಲಾಗಿ ರಾಜಕೀಯ ಪ್ರಭಾವಿತರಿಗೆ ಕಡಿಮೆ ಅಂಕ ಇದ್ದರೂ ಹಾಸ್ಟೆಲ್ ದೊರೆತಿದೆ. ಸಚಿವರು ಇದನ್ನು ಖುದ್ದು ಪರಿಶೀಲಿಸಬೇಕಾಗಿದೆ. – ಚಿಕ್ಕಯ್ಯ ಪೂಜಾರಿ ಅರೆಶಿರೂರು, ವಿದ್ಯಾರ್ಥಿಗಳ ಪಾಲಕರು
ಸೀಟು ಕಲ್ಪಿಸಲು ಪ್ರಯತ್ನ: ಈಗಾಗಲೇ 267 ಅರ್ಜಿಗಳು ಬಾಕಿ ಇವೆ. ಕುಗ್ರಾಮದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗದಿರುವುದು ಮತ್ತು ಆ ವಿದ್ಯಾರ್ಥಿಗಳು ನಿತ್ಯ ಪಡುತ್ತಿರುವ ಕಷ್ಟ ನಮ್ಮ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿಯ ಗಮನಕ್ಕೆ ಈ ವಿಷಯ ತಂದಿದ್ದು ಜಾತಿವಾರು ಮೀಸಲಾತಿಯಿಂದ ಈ ಸಮಸ್ಯೆ ಉಂಟಾಗಿದೆ. ಮೇಲಧಿಕಾರಿಗಳ ಮಾರ್ಗದರ್ಶನದಂತೆ ಶೀಘ್ರ ವಿದ್ಯಾರ್ಥಿಗಳಿಗೆ ಅವಕಾಶ ದೊರಕಿಸುವ ಪ್ರಯತ್ನ ಮಾಡುತ್ತೇನೆ. – ಶಶಿಕಲಾ, ಪ್ರಭಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ