ಬೆಂಗಳೂರು: “ಗೌರಿ ಲಂಕೇಶ್ ಹತ್ಯೆಗೂ ಬಿಜೆಪಿ ಅಥವಾ ಸಂಘ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ‘ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
“ಈ ವಿಚಾರದಲ್ಲಿ ಕೆಲವರು ಸಂಘ ಪರಿವಾರದ ವಿರುದ್ಧ ದುರುದ್ದೇಶದ ಹೇಳಿಕೆ ಕೊಡುತ್ತಿದ್ದಾರೆ. ಅದರಲ್ಲೂ ಘಟನೆ ನಡೆದ ಮರು ದಿನವೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಘ ಪರಿವಾರದ ಕುರಿತು ಹೇಳಿಕೆ ನೀಡಿದ್ದಾರೆ.
ಆದ್ದರಿಂದ ಪ್ರಕರಣ ಸಂಬಂಧ ರಾಹುಲ್ ಗಾಂಧಿ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಬೇಕೆಂದು’ ಆಗ್ರಹಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಗೌರಿ ಅವರ ಹತ್ಯೆ ಅಮಾನುಷ. ನಾಡಿನ ಎಲ್ಲಾ ಜನ ಇದನ್ನು ಖಂಡಿಸಬೇಕು. ಸಮಗ್ರ ತನಿಖೆಯಾಗಿ ಸತ್ಯ ಹೊರಬೇಕು. ಈ ರೀತಿಯ ಘಟನೆ ಮರುಕಳಿಸಬಾರದು ಎಂಬುದು ನಮ್ಮ ಸ್ಪಷ್ಟ ನಿಲುವು’ ಎಂದು ಹೇಳಿದರು.
ರಾಮಚಂದ್ರ ಗುಹಾಗೆ ನೋಟಿಸ್
ಬೆಂಗಳೂರು: ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಸಂಘ ಪರಿವಾರದ ಮೇಲೆ ಆರೋಪ ಮಾಡಿರುವ ಚಿಂತಕ ಮತ್ತು ಲೇಖಕ ರಾಮಚಂದ್ರ ಗುಹಾ ಅವರಿಗೆ ಬಿಜೆಪಿ ಯುವ ಮೋರ್ಚಾ ಲೀಗಲ್ ನೋಟಿಸ್ ಜಾರಿ ಮಾಡಿದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ರಾಮಚಂದ್ರ ಗುಹಾ ಅವರು, “ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಅವರ ಹತ್ಯೆಯಂತೆ ಸಂಘ ಪರಿವಾರದಿಂದ ಬಂದವರೇ ಈ ಹತ್ಯೆಯನ್ನೂ ಮಾಡಿದ್ದಾರೆ’ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಕರುಮಾಕರ್ ಖಸಾಲೆ ಅವರು ಹಾರನಹಳ್ಳಿ ಲಾ ಪಾರ್ಟ್‌ನರ್ಸ್ ಮೂಲಕ ಈ ನೋಟಿಸ್ ಜಾರಿ ಮಾಡಿದ್ದಾರೆ. “ನಿಮ್ಮ ಹೇಳಿಕೆಯಿಂದ ಸಂಘ ಪರಿವಾರದ ಭಾಗವಾಗಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಆಘಾತವಾಗಿದೆ. ಅನೇಕರು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಈ ನೋಟಿಸ್ ತಲುಪಿದ 3 ದಿನಗಳಲ್ಲಿ ಹೇಳಿಕೆಗೆ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ತಿಳಿಸಿದ್ದಾರೆ.