ಹೊಸದಿಲ್ಲಿ: ಹೆದ್ದಾರಿಯಿಂದ 500 ಮೀ. ವರೆಗೆ ಮದ್ಯ ಮಾರಾಟ ನಿಷೇಧ ಆದೇಶದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಬಾರ್, ಪಬ್‌ಗಳ ಮಾಲಕರಿಗೆ ಸುಪ್ರೀಂ ಕೋರ್ಟ್‌ನಲ್ಲಿ “ಮದ್ಯಂತರ’ ನೆಮ್ಮದಿ ಸಿಕ್ಕಿದೆ.
ಅಂದರೆ ನಗರ, ಪಟ್ಟಣ ವ್ಯಾಪ್ತಿಯಲ್ಲಿನ ಹೆದ್ದಾರಿಗಳನ್ನು ಜಿಲ್ಲಾ ಅಥವಾ ನಗರ ಹೆದ್ದಾರಿ ಗಳೆಂದು ಡಿನೋಟಿಫೈ ಮಾಡುವುದ ರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರೋಡ್, ಬಳ್ಳಾರಿ ರಸ್ತೆಯಲ್ಲಿನ ಸಾವಿರಾರು ಬಾರ್, ಪಬ್ ಮಾಲಕರು ನಿಟ್ಟುಸಿರು ಬಿಟ್ಟಿದ್ದಾರೆ.
ಚಂಡೀಗಢದ ಎನ್‌ಜಿಒವೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೆದ್ದಾರಿಗಳ ಡಿನೋಟಿಫೈನಲ್ಲಿ ತಪ್ಪಿಲ್ಲ ಎಂದಿದೆ. ಪಂಜಾಬ್ ಸರಕಾರ ನಗರ ವ್ಯಾಪ್ತಿಯಲ್ಲಿರುವ ಹೆದ್ದಾರಿಗಳನ್ನು ಜಿಲ್ಲಾ ಮತ್ತು ನಗರ ರಸ್ತೆಗಳೆಂದು ಡಿನೋಟಿಫೈ ಮಾಡಿತ್ತು. ಇದನ್ನು ಪ್ರಶ್ನಿಸಿ ಎನ್‌ಜಿಒ ಸ್ಥಳೀಯ ಹೈಕೋರ್ಟ್‌ಗೆ ಹೋಗಿತ್ತು. ಆದರೆ ಹೈಕೋರ್ಟ್ ಕೂಡ ಸರಕಾರದ ಆದೇಶದ ಬಗ್ಗೆ ಸಕಾರಾತ್ಮಕ ತೀರ್ಪು ನೀಡಿದ್ದರಿಂದ ಸುಪ್ರೀಂ ಬಾಗಿಲು ಬಡಿದಿದ್ದರು.
ಮುಖ್ಯ ನ್ಯಾ| ಜೆ. ಎಸ್. ಖೇಹರ್, ನ್ಯಾ| ಡಿ.ವೈ. ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ, ಹೆದ್ದಾರಿಗಳಲ್ಲಿ ಮದ್ಯದಂಗಡಿಗಳ ನಿಷೇಧಕ್ಕೆ ಕಾರಣಗಳನ್ನು ಹೇಳಿದೆ. ನಗರದ ಹೊರಗೆ ಇರುವ ಹೆದ್ದಾರಿಗಳಲ್ಲಿ ಚಾಲಕರು ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುವುದರಿಂದ ಕುಡಿದು ವಾಹನ ಓಡಿಸುವುದು ತಪ್ಪು ಎಂಬ ಕಾರಣಕ್ಕಾಗಿ ನಿಷೇಧ ಮಾಡಿದ್ದು. ಆದರೆ ನಗರದ ಮಿತಿಯೊಳಗೆ ಇರುವ ಹೆದ್ದಾರಿಗಳಲ್ಲಿ ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇಲ್ಲಿ ಹೆದ್ದಾರಿಗಳ ಡಿನೋಟಿಫೈ ತಪ್ಪಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ ಮುಂದಿನ ವಿಚಾರಣೆ ಜು.11ರಂದು ನಡೆಯಲಿದ್ದು, ಅದರೊಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು ಎಂದು ಎನ್‌ಜಿಒಗೆ ಕೋರ್ಟ್ ಸೂಚಿಸಿದೆ.
ಈಗಾಗಲೇ ಕರ್ನಾಟಕ ಸರಕಾರ ಹೆದ್ದಾರಿ ಬದಿಯ ಮದ್ಯದಂಗಡಿಗಳ ನಿಷೇಧದ ಬಗ್ಗೆ ಮರುಪರಿಶೀಲನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಅರ್ಜಿ ಸಲ್ಲಿಸಿದೆ. ಅಲ್ಲದೆ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಬಗ್ಗೆಯೂ ಅದು ಕೇಂದ್ರದ ಬಳಿ ಪ್ರಸ್ತಾವಿಸಿದೆ. ಆದರೆ ಕೇಂದ್ರ ಸರಕಾರ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈಗ ಸುಪ್ರೀಂಕೋರ್ಟ್ ನಗರ ವ್ಯಾಪ್ತಿಯ ಹೆದ್ದಾರಿಗಳನ್ನು ಮಾರ್ಪಡಿಸಿಕೊಳ್ಳಲು ಅವಕಾಶ ನೀಡಿರುವುದರಿಂದ ಕರ್ನಾಟಕ ಸರಕಾರಕ್ಕೆ ಬಲ ಬಂದಂತಾಗಿದೆ.