Advertisement
ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸಣ್ಣಪುಟ್ಟ ಕಾರ್ಯಕ್ರಮ ಇದ್ದಾಗಲೂ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತದೆ. ವಾಹನಗಳನ್ನು ಅಸಮರ್ಪಕವಾಗಿ ನಿಲ್ಲಿಸಿದರೆ, ಅವುಗಳು ಸಂಚಾರಕ್ಕೆ ತೊಡಕಾಗುತ್ತವೆ. ಇಂತಹ ವಾಹನಗಳನ್ನು ಆ ಸ್ಥಳದಿಂದ ತೆರವು ಮಾಡಿದರೆ ಮಾತ್ರ ಸಂಚಾರ ವ್ಯವಸ್ಥೆ ಸುಗಮವಾಗಲು ಸಾಧ್ಯ. ಇದಕ್ಕಾಗಿ ಟೋಯಿಂಗ್ ವಾಹನದ ಅಗತ್ಯವಿದೆ.
Related Articles
ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟುಮಾಡುವ, ರಸ್ತೆಗಳಲ್ಲಿ ಅಸ್ತವ್ಯಸ್ತವಾಗಿ ಅಸಮರ್ಪಕವಾಗಿ ನಿಲ್ಲಿಸುವ ವಾಹನಗಳನ್ನು ಟೋ ಮಾಡಲು ವಾಹನ ಮಾಲಕರು ಅಥವಾ ಚಾಲಕರಿಂದ ಟೋಯಿಂಗ್ ಶುಲ್ಕ ಸೇರಿ ದಂಡ ವಸೂಲಿ ಮಾಡಲಾಗುತ್ತದೆ. ಖಾಸಗಿ ಟೋಯಿಂಗ್ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗುತ್ತದೆ. ಕಳೆದ ವರ್ಷ ಸೆಪ್ಟಂಬರ್ 22ರಂದು ಈ ದರಗಳನ್ನು ಪರಿಷ್ಕರಿಸಲಾಗಿದೆ.
Advertisement
ಬೆಂಗಳೂರಿನಲ್ಲಿ ಟೋ ಮಾಡಲಾದ ಲಘು ವಾಹನಗಳ ಮಾಲಕರಿಂದ 1000 ರೂ.ದಂಡ (ಹಿಂದೆ 300 ರೂ. ಇತ್ತು) ವಸೂಲಿ ಮಾಡಲಾಗುತ್ತದೆ. ಇದರಲ್ಲಿ ಖಾಸಗಿ ಟೋ ವಾಹನಗಳ ಮಾಲಕರಿಗೆ 500 ರೂ. (ಹಿಂದೆ 150 ರೂ.) ಪಾವತಿಸಲಾಗುತ್ತದೆ. ಟೋ ಮಾಡಲಾದ ಭಾರೀ ಸರಕು ವಾಹನಗಳ ಮಾಲಕರಿಂದ 1,250 ರೂ. (ಹಿಂದೆ 400 ರೂ.) ವಸೂಲಿ ಮಾಡಿ, ಖಾಸಗಿ ಟೋ ವಾಹನ ಮಾಲಕರಿಗೆ 625 ರೂ. ಪಾವತಿಸಲಾಗುತ್ತದೆ.
ಟೋ ಮಾಡಲಾದ ದ್ವಿಚಕ್ರ ವಾಹನಗಳಿಗೆ 650 ರೂ. ವಸೂಲಿ ಮಾಡಿ, ಖಾಸಗಿ ಟೋ ವಾಹನ ಮಾಲಕರಿಗೆ 325 ರೂ. ಪಾವತಿಸಲಾಗುತ್ತದೆ. ಟೋ ಮಾಡಲಾದ ಭಾರೀ ಗಾತ್ರದ ಸಾಗಾಟ ವಾಹನಗಳ ಮಾಲಕರಿಂದ 1500 ರೂ. ವಸೂಲಿ ಮಾಡಲಾಗುತ್ತಿದ್ದು, ಖಾಸಗಿ ಟೋ ವಾಹನಗಳ ಮಾಲಕರಿಗೆ 750 ರೂ. ಪಾವತಿಸಲಾಗುತ್ತದೆ
ಮೂಲೆ ಸೇರಿದ ಪ್ರಸ್ತಾವ ಮಂಗಳೂರಿನಲ್ಲಿ ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟೋಯಿಂಗ್ ವಾಹನವನ್ನು ಸಂಚಾರಿ ವಿಭಾಗಕ್ಕೆ ಒದಗಿಸಿಕೊಡುವಂತೆ ಈ ಹಿಂದೆ ಡಿಸಿಪಿಯಾಗಿದ್ದ ಡಾ| ಸಂಜೀವ ಪಾಟೀಲ್ ಅವರು ಪಾಲಿಕೆಗೆ ಮನವಿ ಮಾಡಿದ್ದರು. ಟೋಯಿಂಗ್ ವಾಹನ ಖರೀದಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಟೆಂಡರ್ ನಲ್ಲಿ ಯಾರೂ ಭಾಗವಹಿಸದ ಕಾರಣ ಪ್ರಸ್ತಾವ ಮೂಲೆ ಸೇರಿತು. ವಾರದ ಹಿಂದೆ ಪಾಲಿಕೆಯಲ್ಲಿ ನಡೆದ ಸಂಚಾರ ವಿಭಾಗದ ಸಭೆಯಲ್ಲೂ ಇದೇ ವಿಚಾರ ಪ್ರಸ್ತಾವಕ್ಕೆ ಬಂದಿದೆ. ಪ್ರಸ್ತುತ ಸಂಚಾರಿ ಡಿಸಿಪಿ ಉಮಾಪ್ರಶಾಂತ್ ಅವರು ಮತ್ತೂಮ್ಮೆ ಸಭೆಯಲ್ಲಿ ಉಲ್ಲೇಖೀಸಿದ್ದಾರೆ. ಟೋಯಿಂಗ್ ವಾಹನಕ್ಕೆ ಬೇಕಾಗುವ ವೆಚ್ಚದ ಕುರಿತ ವಿವರಗಳನ್ನು ಸಂಚಾರಿ ವಿಭಾಗದಿಂದ ಪಾಲಿಕೆಗೆ ನೀಡಿದರೆ, ಸರಕಾರಕ್ಕೆ ಬರೆದು ವಾಹನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಮನಪಾ ಆಯುಕ್ತ ಮಹಮ್ಮದ್ ನಝೀರ್ ತಿಳಿಸಿದ್ದರು. ಟೋಯಿಂಗ್ ವಾಹನ ಅಗತ್ಯ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲು ಟೋಯಿಂಗ್ ವಾಹನದ ಅಗತ್ಯವಿದೆ. ಬೆಂಗಳೂರಿನಲ್ಲಿ ಖಾಸಗಿ ಟೋಯಿಂಗ್ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನಿರ್ವಹಿಸಲಾಗುತ್ತಿದೆ. ಮಂಗಳೂರಿನಲ್ಲೂ ಟೋಯಿಂಗ್ ವಾಹನ ಲಭ್ಯವಾದರೆ, ಸಂಚಾರ ದಟ್ಟಣೆ ಸುಧಾರಿಸುವಲ್ಲಿ ವಿಶೇಷ ಫಲಿತಾಂಶ ದೊರೆಯಬಹುದು.
– ಮಂಜುನಾಥ್ ಶೆಟ್ಟಿ , ಸಂಚಾರ
ವಿಭಾಗದ ಎಸಿಪಿ, ಮಂಗಳೂರು ದಿನೇಶ್ ಇರಾ