Advertisement

ಕೊಂಕಣಿ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ ಕ್ರೈಸ್ತರಿಗೆ ಪ್ರಾತಿನಿಧ್ಯವಿಲ್ಲ !

01:04 AM Oct 22, 2019 | mahesh |

ಮಂಗಳೂರು: ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ-ಸದಸ್ಯರ ನೇಮಕಾತಿ ವೇಳೆ ಕೊಂಕಣಿಯಲ್ಲಿ ಅತ್ಯಧಿಕ ಸಾಹಿತ್ಯ ರಚಿಸಿದ ಮತ್ತು ಕೊಂಕಣಿ ಭಾಷಿಕರು ಹೆಚ್ಚು ಸಂಖ್ಯೆಯಲ್ಲಿರುವ ಕೆಥೋಲಿಕ್‌ ಕ್ರೈಸ್ತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

Advertisement

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಈಗಾಗಲೇ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು, ತಾರತಮ್ಯ ಸರಿಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
1994ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ರಚನೆಯಾದ ಬಳಿಕ 9 ಅವಧಿಗಳಲ್ಲಿಯೂ ಅಕಾಡೆಮಿಯಲ್ಲಿ ಕೊಂಕಣಿ ಕ್ರೈಸ್ತರ ಪ್ರಾತಿನಿಧ್ಯ ಇತ್ತು. ಅಕಾಡೆಮಿಯ ಮೊದಲ ಅಧ್ಯಕ್ಷ, ಖ್ಯಾತ ಕೊಂಕಣಿ ಸಾಹಿತಿ ವಿ.ಜೆ.ಪಿ. ಸಲ್ದಾನ್ಹಾ ಸೇರಿದಂತೆ ಇದುವರೆಗಿನ 10 ಅಧ್ಯಕ್ಷರಲ್ಲಿ ನಾಲ್ವರು ಕೆಥೋಲಿಕ್‌ ಸಮುದಾಯಕ್ಕೆ ಸೇರಿದವರು.

ಉತ್ತರದ ಕಾರವಾರದಿಂದ ದಕ್ಷಿಣದ ಕಾಸರಗೋಡು ತನಕದ ಕರಾವಳಿಯಲ್ಲಿ ಕೆಥೋಲಿಕ್‌ ಕೊಂಕಣಿ ಕ್ರೈಸ್ತರಿದ್ದಾರೆ. ರಾಜ್ಯದಲ್ಲಿ ಸುಮಾರು 12.5 ಲಕ್ಷ ಕೊಂಕಣಿ ಭಾಷಿಕರಿದ್ದು, ಕೆಥೋಲಿಕ್‌ ಕ್ರೈಸ್ತರೇ ಅಧಿಕ. ಕೊಂಕಣಿ ಸಾಹಿತ್ಯ ರಚನೆಯಲ್ಲಿಯೂ ಅವರದೇ ಮೇಲುಗೈ. ಮಂಗಳೂರು ಧರ್ಮ ಪ್ರಾಂತದ ಅಧಿಕೃತ ಭಾಷೆ ಕೊಂಕಣಿಯಾಗಿದ್ದು, ಎಲ್ಲ ಧಾರ್ಮಿಕ ವಿಧಿಗಳು ಅದರಲ್ಲಿಯೇ ನಡೆಯುತ್ತಿವೆ. ಧರ್ಮ ಪ್ರಾಂತದ ಆಡಳಿತದಡಿ ಇರುವ ಶಾಲೆಗಳಲ್ಲಿ ಕೊಂಕಣಿ ಕಲಿಕೆ ಇದೆ.

ಮರು ನೇಮಕ
ಇನ್ನೊಂದೆಡೆ ಈ ಹಿಂದೆ ಅಕಾಡೆಮಿ ಸದಸ್ಯರಾಗಿದ್ದವರನ್ನು ಮಾತ್ರವಲ್ಲದೆ ಅಧ್ಯಕ್ಷರಾಗಿದ್ದವರನ್ನೂ ಮತ್ತೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈಗ ನೇಮಕಗೊಂಡಿರುವ 11 ಮಂದಿಯಲ್ಲಿ ನಾರಾಯಣ ಖಾರ್ವಿ 2008-2011ಯಲ್ಲಿ ಅಧ್ಯಕ್ಷರಾಗಿದ್ದರು, ಅದಕ್ಕೂ ಮೊದಲು ಸದಸ್ಯರಾಗಿದ್ದರು. ಈಗ ಮೂರನೇ ಅವಧಿಗೆ ಸದಸ್ಯರಾಗಿದ್ದಾರೆ. ಚಿದಾನಂದ ಭಂಡಾರಿ ಮತ್ತು ವಸಂತ ಬಾಂದೇಕರ್‌ ಈ ಹಿಂದೆಯೂ ಸದಸ್ಯರಾಗಿದ್ದವರೇ.

ತುಳು ಅಕಾಡೆಮಿಯಲ್ಲಿಯೂ ಅಪಸ್ವರಗಳು ಎದ್ದಿವೆ. ತುಳು ಅಕಾಡೆಮಿಗೆ ನೇಮಕಗೊಂಡ ಇಬ್ಬರು ಸದಸ್ಯತ್ವದಿಂದ ಹೊರಗೆ ಹೋಗುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಬ್ಯಾರಿ ಅಕಾಡೆಮಿಯಲ್ಲಿಯೂ ಅಪಸ್ವರಗಳು ಎದ್ದಿವೆ. ಒಬ್ಬರು ಸದಸ್ಯತ್ವ ಸ್ವೀಕರಿಸುವುದಿಲ್ಲ ಎಂದು ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇನ್ನಿಬ್ಬರು ತಾವು ಸಾಹಿತಿಗಳಲ್ಲ ಎಂದು ಹೇಳಿ ಸದಸ್ಯತ್ವ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.

Advertisement

ಕೊಂಕಣಿ ಭಾಷೆಯ ಏಳಿಗೆಗೆ ಕ್ರೈಸ್ತರ
ಕೊಡುಗೆ ಅನನ್ಯ. ಅಕಾಡೆಮಿಯ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಕೊಂಕಣಿ ಭಾಷಿಕ ಕ್ರೈಸ್ತ ಸಮುದಾಯದ ಒಬ್ಬರನ್ನಾದರೂ ಸೇರ್ಪಡೆ ಮಾಡಬೇಕು. ಈ ಬಗ್ಗೆ ನೂತನ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ.
– ಕಾಸರಗೋಡು ಚಿನ್ನಾ, ಮಾಜಿ ಅಧ್ಯಕ್ಷರು, ಕೊಂಕಣಿ ಅಕಾಡೆಮಿ

ಕೊಂಕಣಿ ಭಾಷಿಕ ಕೈಸ್ತರು ಕೊಂಕಣಿ ಸಮಗ್ರ ಬೆಳವಣಿಗೆಗೆ ಅನನ್ಯ ಕೊಡುಗೆ ನೀಡಿದ್ದಾರೆ. ಈ ಸಮುದಾಯದ ಅವಗಣನೆ ಕೊಂಕಣಿಯ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಕ್ರಮ ಅಲ್ಲ.
– ರೋಯ್‌ ಕ್ಯಾಸ್ತೆಲಿನೊ, ಮಾಜಿ ಅಧ್ಯಕ್ಷರು, ಕೊಂಕಣಿ ಅಕಾಡೆಮಿ

Advertisement

Udayavani is now on Telegram. Click here to join our channel and stay updated with the latest news.

Next