ಧರ್ಮಪುರ: ಉತ್ತಮ ಮಳೆಯಿಂದ ಹೋಬಳಿಯಾದ್ಯಂತ ಬಹುತೇಕ ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಆದರೆ ಜಿಲ್ಲೆಯಲ್ಲಿ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಧರ್ಮಪುರ ಕೆರೆ ಮಾತ್ರ ಇನ್ನೂ ತುಂಬಿಲ್ಲ. ವಿಚಿತ್ರವಾದರೂ ಇದು ಸತ್ಯ. ಧರ್ಮಪುರ ಕೆರೆ ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ.
ಎಲ್ಲಾ ಕೆರೆ-ಕಟ್ಟೆಗಳು ಮೈತುಂಬಿ ಹರಿಯುತ್ತಿದ್ದರೂ ನಮ್ಮೂರ ಕೆರೆ ಮಾತ್ರ ಭರ್ತಿಯಾಗಿಲ್ಲ. ಕಳೆದ 45 ವರ್ಷಗಳ ಹಿಂದೆ ಕೋಡಿ ಬಿದ್ದ ನಂತರ ಇದುವರೆಗೂ ತುಂಬಿಲ್ಲ ಎಂಬುದು ಗ್ರಾಮಸ್ಥರು ಹಾಗೂ ರೈತರ ಅಳಲು. ಹೋಬಳಿಯ ಖಂಡೇನಹಳ್ಳಿ, ಅರಳೀಕೆರೆ, ಹಲಗಲದ್ದಿ ಕೆರೆಗಳು ಕೋಡಿ ಬಿದ್ದಿವೆ. ಕಣಜನಹಳ್ಳಿ ಬ್ಯಾರೇಜ್, ಚೆಕ್‌ಡ್ಯಾಂ, ಗೋಕಟ್ಟೆ ಭರ್ತಿಯಾಗಿವೆ. ಶ್ರವಣಗೆರೆ ಕೆರೆ, ಈಶ್ವರಗೆರೆ ಕೆರೆ, ಅಬ್ಬಿನಹೊಳೆ ಕೆರೆ, ಹೊಸಕೆರೆ ಕೆರೆ, ಮದ್ದೀಹಳ್ಳಿ ಕೆರೆ ಸೇರಿದಂತೆ ಹಲವು ಕೆರೆಗಳು ತುಂಬಿ ಹರಿಯುತ್ತಿದ್ದು ಯಾವುದೇ ಕ್ಷಣದಲ್ಲಿ ಕೋಡಿ ಬೀಳುವ ಸಾಧ್ಯತೆ ಇದೆ. ಆದರೆ ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ಧರ್ಮಪುರ ಕೆರೆ ಮಾತ್ರ ತುಂಬುತ್ತಿಲ್ಲ. ಕೆರೆಯ ಗುಂಡಿ, ತಗ್ಗು ಪ್ರದೇಶದಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ನೀರು ಕಾಣುತ್ತಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹಲವು ಗ್ರಾಮಗಳ ಕೆರೆಗಳು ಕೋಡಿ ಬಿದ್ದರೆ ಅಲ್ಲಿನ ನೀರು ಧರ್ಮಪುರ ಕೆರೆಗೆ ಹರಿದು ಬರುತ್ತದೆ. ನೆರೆಯ ಆಂಧ್ರಪ್ರದೇಶದ ಕೆರೆಗಳು ಕೂಡ ಭರ್ತಿಯಾಗುವ ಹಂತದಲ್ಲಿವೆ. ಆದರೆ ಧರ್ಮಪುರ ಕೆರೆಯ ಮೇಲೆ ವರುಣದೇವ ಇನ್ನೂ ಕೃಪೆ ತೋರಿದಂತೆ ಕಾಣುತ್ತಿಲ್ಲ. ಆದಷ್ಟು ಬೇಗ ಕೆರೆ ಭರ್ತಿಯಾಗಿ ಕೋಡಿ ಬೀಳುವಂತಾಗಲಿ. ಈ ಮೂಲಕ ರೈತರ ಬಾಳು ಹಸನಾಗಲಿ ಎಂಬುದು ಹೋಬಳಿಯ ಗ್ರಾಮಗಳ ಗ್ರಾಮಸ್ಥರ ಆಶಯವಾಗಿದೆ.
ಐತಿಹಾಸಿಕ ಧರ್ಮಪುರ ಕೆರೆಗೆ ಸ್ವಲ್ಪ ಪ್ರಮಾಣದ ನೀರು ಬಂದಿದೆ. ಕೆರೆ ಕೋಡಿ ಬಿದ್ದು 45 ವರ್ಷ ಕಳೆದಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರೂ ಇಲ್ಲಿನ ಕೆರೆ ಮಾತ್ರ ತುಂಬಿಲ್ಲ. ವರುಣ ದೇವ ಕೃಪೆ ತೋರಿ ಕೆರೆ ಭರ್ತಿಯಾಗಲಿ ಎಂದು ಈ ಭಾಗದ ಜನರು ಕಾತರದಿಂದ ಕಾಯುತ್ತಿದ್ದಾರೆ.
ಕೆ. ಪುಟ್ಟಸ್ವಾಮಿ ಗೌಡ,
ಪಿ.ಡಿ. ಕೋಟೆ ಗ್ರಾಪಂ ಅಧ್ಯಕ್ಷ
ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು ಹೋಬಳಿಯ ಕೆರೆ-ಕಟ್ಟೆಗಳು ಕೋಡಿ ಬಿದ್ದಿದ್ದು, ಕೆಲವು ಭರ್ತಿಯಾಗಿ ಮೈದುಂಬಿ ಹರಿಯುತ್ತಿವೆ. ಐತಿಹಾಸಿಕ ಧರ್ಮಪುರ ಆಂಧ್ರಪ್ರದೇಶದ 70 ಕೆರೆಗಳ ಕೋಡಿ ನೀರು ಹರಿದು ಬರುತ್ತದೆ ಎಂದು ಹಿರಿಯರು ಹೇಳುತ್ತಿದ್ದಾರೆ. ಅದರ ಜೊತೆಗೆ ಶಿರಾ ತಾಲೂಕಿನ ಕೆರೆಗಳು ನೀರು ಕೂಡ ಬರಬೇಕಿದೆ. ಆಗ ಧರ್ಮಪುರ ಕೆರೆ ತುಂಬಲು ಸಾಧ್ಯ.
ಲಕ್ಷ್ಮೀದೇವಿ
ಧರ್ಮಪುರ ಗ್ರಾಪಂ ಮಾಜಿ ಅಧ್ಯಕೆ
ಧರ್ಮಪುರ ಹೋಬಳಿಯ ಎಲ್ಲಾ ಕೆರೆ-ಕಟ್ಟೆ ತುಂಬಿ ಕೋಡಿ ಬಿದ್ದಿವೆ. ವರುಣದೇವ ಮನಸ್ಸು ಮಾಡಿ ಆದಷ್ಟು ಬೇಗ ಧರ್ಮಪುರ ಕೆರೆ ತುಂಬಿ ಕೋಡಿ ಹರಿಸಲಿ ಎಂದು ಶ್ರೀ ಶನೈಶ್ವರ ದೇವರಿಗೆ ವಿಶೇಷ ಪೂಜೆ ಮಾಡಿಸಿ ಹರಕೆ ಹೊತ್ತಿದ್ದೇನೆ.
ಎಚ್.ಎಂ. ಅಪ್ಪಾಜಿ ಗೌಡ
ಕಾಂಗ್ರೆಸ್ ಮುಖಂಡ
ಎಂ. ಬಸೇಗೌಡ